Advertisement

ಪಡುಬಿದ್ರಿ : ಸೂಕ್ತ ಉತ್ತರ ನೀಡದ ಅಧಿಕಾರಿಗಳು : ಗದ್ದಲದ ಗೂಡಾದ ಮೆಸ್ಕಾಂ ಅದಾಲತ್

04:07 PM Jun 18, 2022 | Team Udayavani |

ಪಡುಬಿದ್ರಿ : ಗ್ರಾಹಕರಿಗೆ ಮಾಹಿತಿ ನೀಡದೇ ಪಡುಬಿದ್ರಿಯಲ್ಲಿ ತರಾತುರಿಯಲ್ಲಿ ನಡೆಸಲಾದ ಮೆಸ್ಕಾಂನ ವಿದ್ಯುತ್ ಅದಾಲತ್‌ನಲ್ಲಿ ಮೀಟರ್ ರೀಡರ್‌ನ ಅವಾಂತರದಿಂದ ಸೃಷ್ಟಿಯಾದ ಲಕ್ಷಗಟ್ಟಲೆವರೆಗಿನ `ಬಿಲ್ ಬರೆ’ ಗೆ ಸೂಕ್ತ ಉತ್ತರ ನೀಡದೇ ಅಧಿಕಾರಿಗಳು ನುಣುಚಿಕೊಂಡರು.

Advertisement

ಪಡುಬಿದ್ರಿ ಗ್ರಾ. ಪಂ. ಸಭಾಭವನದಲ್ಲಿ ಜೂ. 18 ರಂದು ನಡೆದಿದ್ದ ವಿದ್ಯುತ್ ಅದಾಲತ್‌ನಲ್ಲಿ ಗ್ರಾಹಕರು ಬಿಲ್ ಮೊತ್ತಗಳ ಕುರಿತಾಗಿಯೇ ಬಹಳಷ್ಟು ಗದ್ದಲವೇರ್ಪಟ್ಟಿತು.

ಸಭೆಯ ಠರವಿನ ಸಹಿತ ಈ ಅಗಾಧ ಮೊತ್ತದ ಬಿಲ್‌ಗಳ ವಸೂಲಾತಿ ಕುರಿತಾಗಿ ಮೇಲಧಿಕಾರಿಗಳಿಗೆ ಸಮಸ್ಯೆಯನ್ನು ತಿಳಿಸಲಾಗುವುದು. ಅವರಿಂದ ಬರುವ ಸೂಚನೆ ಬಳಿಕ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವುದಾಗಿ ಮೆಸ್ಕಾಂ ಉಡುಪಿ ವಿಭಾಗದ ಕಾರ್ಯಪಾಲಕ ಎಂಜೀನಿಯರ್ ಪ್ರಸನ್ನ ಕುಮಾರ್ ಗ್ರಾಹಕರಿಗೆ ಸಮಜಾಯಿಷಿ ನೀಡಿದರು.

ಗ್ರಾಹಕರಿಗೆ ವಿದ್ಯುತ್ ಅದಾಲತ್ ಕುರಿತಾದ ಮಾಹಿತಿಯನ್ನೇ ನೀಡಿರದ ಮೆಸ್ಕಾಂ, ಈ ಸಭೆಯನ್ನು ಕಾಟಾಚಾರಕ್ಕಾಗಿ ನಡೆಸಿದೆ. ಯಾವುದೇ ತಕರಾರಿಲ್ಲದೇ ತಿಂಗಳಿಗೆ ಸರಿಯಾಗಿ ಗ್ರಾಹಕರು ತಮ್ಮ ಬಿಲ್‌ಗಳನ್ನು ಪಾವತಿಸುತ್ತಿದ್ದರೂ. ಮೀಟರ್ ರೀಡರ್‌ನ ತಪ್ಪುಗಳಿಂದ ಘಟಿಸಿದ ಗ್ರಾಹಕರದ್ದಲ್ಲದ ಕಾರಣಗಳಿಗಾಗಿ ದೊಡ್ಡ ಮೊತ್ತದ ಬಿಲ್‌ಗಳ ಮೂಲಕ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ೬೦ಕ್ಕೂ ಹೆಚ್ಚು ಗ್ರಾಹಕರಿಗೆ `ಶಾಕ್’ ನೀಡಿದೆ. ಗ್ರಾಹಕರ ಮೀಟರ್ ಕ್ರಮವತ್ತಾಗಿದೆ. ನೀವೇ ಉಪಯೋಗಿಸಿರುವ ವಿದ್ಯುತ್ ಬಿಲ್ ನಿಮಗೆ ಈಗ ಸರಿಯಾಗಿಯೇ ಬಂದಿದೆ.

ಇದನ್ನೂ ಓದಿ : ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಉಪಕರಣ ಖರೀದಿಗೆ 5 ಲಕ್ಷ ರೂಗಳ ಸಹಾಯಧನ

Advertisement

6 ತಿಂಗಳುಗಳ ಕಂತನ್ನು ನೀಡುತ್ತೇವೆ ಪಾವತಿಸಿರಿ ಎಂದು ಕಾರ್ಯಪಾಲಕ ಎಂಜೀನಿಯರ್ ಅವರು ಗ್ರಾಹಕರನ್ನು ಒತ್ತಾಯಿಸುತ್ತಿದ್ದಾರೆ. ಆ ಮೂಲಕ ಮೀಟರ್ ರೀಡಿಂಗ್‌ಗೆ ನೇಮಿಸಲಾದ ಖಾಸಗಿ ಗುತ್ತಿಗೆದಾರನನ್ನು ರಕ್ಷಣೆ ಮಾಡುವುದಕ್ಕೆ ಮೆಸ್ಕಾಂ ಹೊರಟಿದೆ. ಗ್ರಾಹಕರು ಈ ತಪ್ಪಿಗೆ ಹೊಣೆಯಾಗುವುದಿಲ್ಲ. ಆದ್ದರಿಂದ ಖಾಸಗಿ ಗುತ್ತಿಗೆದಾರನನ್ನೇ ಬಾಧ್ಯರನ್ನಾಗಿ ಮಾಡಬೇಕೆಂದೂ, ಅವರಿಂದಲೇ ವಸೂಲಾತಿ ಪ್ರಕ್ರಿಯೆಗಳಾಗಬೇಕೆಂದು ಗ್ರಾಹಕರ ಪರ ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಹಾಗೂ ಗ್ರಾ. ಪಂ. ಸದಸ್ಯ ರಮೀಜ್ ಹುಸೈನ್ ವಾದಿಸಿದರು.

ಪಡುಬಿದ್ರಿಗೆ ವಿದ್ಯುತ್ ಸಬ್ ಸ್ಟೇಶನ್ ಮಂಜೂರು
ಪಡುಬಿದ್ರಿಯಲ್ಲಿ ಹಳೇ ಕೆಇಬಿ ಕಟ್ಟಡವಿದ್ದ ಬೆರಂದಿಕೆರೆಯಲ್ಲಿ 33 ಕೆವಿಎ ವಿದ್ಯುತ್ ಸಬ್ ಸ್ಟೇಶನ್ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ಈಗಾಗಲೇ ದೊರೆತಿದೆ. ಮುಂದಿನ ಆರು ತಿಂಗಳಲ್ಲಿ ಇದರ ಟೆಂಡರ್ ಪ್ರಕ್ರಿಯೆಯು ನಡೆಯಲಿದೆ. ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಮುಂದಿನ ವರ್ಷದಲ್ಲಿಯೇ ಪಡುಬಿದ್ರಿ ಸಬ್‌ಸ್ಟೇಶನ್ ಕಾಮಗಾರಿಯು ಪೂರ್ಣವಾಗಲಿದೆ ಎಂದು ಉಡುಪಿ ವಿಭಾಗದ ಕಾರ್ಯಪಾಲಕ ಎಂಜೀನಿಯರ್ ಪ್ರಸನ್ನ ಕುಮಾರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಕಾಪು ವಿಭಾಗದ ಸಹಾಯಕ ಕಾರ್ಯಕಾರಿ ಎಂಜೀನಿಯರ್ ಹರೀಶ್ ಕುಮಾರ್, ಮೆಸ್ಕಾಂ ಶಾಖಾಧಿಕಾರಿಗಳಾದ ಗಿರೀಶ್ ಮಲ್ಯ, ಎಂ. ಹುಸೈನ್, ಪಡುಬಿದ್ರಿ ಮೆಸ್ಕಾಂ ಸೂಪರ್‌ವೈಸರ್ ಗಣೇಶ್, ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ, ಪಡುಬಿದ್ರಿ ಠಾಣಾ ಕ್ರೈಂ ಪಿಎಸ್‌ಐ ಪ್ರಕಾಶ್ ಸಾಲ್ಯಾನ್, ಎಎಸ್‌ಐ ಗಂಗಾಧರ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next