ಮುಂದುವರಿದುದು- 6. ಆರೈಕೆದಾರರು ಸ್ವಂತಕ್ಕಾಗಿ ಸಮಯ ವಿನಿಯೋಗಿಸಬೇಕು: ಆರೈಕೆದಾರರು ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿರಿಸಿಕೊಳ್ಳಬೇಕು ಎಂಬ ಅರಿವು ಬಹಳ ಮುಖ್ಯವಾಗಿದೆ. ಇದನ್ನು ಸಾಧ್ಯವಾಗುವಂತೆ ತಮ್ಮ ರೂಢಿಗತ ಆರೈಕೆ ಚಟುವಟಿಕೆಗಳ ನಡುವೆ ಆರೈಕೆದಾರರು ನೋಡಿಕೊಳ್ಳಬೇಕು. ಸರಿಯಾದ ಆಹಾರ ಸೇವಿಸುವುದು, ಸರಿಯಾಗಿ ನಿದ್ದೆ ಮಾಡುವ ಮೂಲಕ ಹೊರೆ ತಮ್ಮನ್ನು ಕಾಡದಂತೆ ಆರೈಕೆದಾರರು ಎಚ್ಚರಿಕೆ ವಹಿಸಬೇಕು. ಸಾಮಾಜಿಕ, ಧಾರ್ಮಿಕ ಮತ್ತು ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಆದಷ್ಟು ಭಾಗಿಯಾಗಬೇಕು.
7. ಆರೈಕೆದಾರರ ಬೆಂಬಲ ಸಮೂಹಗಳನ್ನು ಸೇರಿ: ನಿಮ್ಮಂಥದೇ ಸನ್ನಿವೇಶ, ಪರಿಸ್ಥಿತಿಗಳಲ್ಲಿ ಇರುವವರ ಜತೆಗೆ ನಿಮ್ಮ ಅನುಭವ, ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಹೊರೆಯನ್ನು ಎಷ್ಟೋ ಕಡಿಮೆ ಮಾಡಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳಬಹುದಾದದ್ದು ಏನೆಂದರೆ, ಮನೆಯಲ್ಲಿ ಯಾರಿಗಾದರೂ ಮಾನಸಿಕ ಅನಾರೋಗ್ಯ ಉಂಟಾದರೆ ಅದು ಕುಟುಂಬದ ಜೀವನ ಗುಣಮಟ್ಟದ ಮೇಲೆ ಮಾತ್ರವಲ್ಲದೆ ಕುಟುಂಬ ಸದಸ್ಯರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಒತ್ತಡಯುಕ್ತ ಭಾವನಾತ್ಮಕ ವಾತಾವರಣ, ಉದ್ವಿಗ್ನತೆಗಳು ಮತ್ತು ವಾಸ್ತವಿಕ ಹೊರೆಗಳು ಆರೈಕೆದಾರರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನೇತ್ಯಾತ್ಮಕ ಪರಿಣಾಮವನ್ನು ಬೀರಬಹುದು. ಆರೈಕೆದಾರರ ಹೊರೆ ನಿಭಾಯಿಸಲಾಗದಷ್ಟು ಪ್ರಮಾಣಕ್ಕೆ ಹೆಚ್ಚಿ ರುವ ಎಚ್ಚರಿಕೆಯ ಸಂಕೇತಗಳನ್ನು ಕ್ಲಪ್ತಕಾಲದಲ್ಲಿ ಗಮನಿಸಿಕೊಂಡು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಬಹಳ ಮುಖ್ಯವಾಗಿದೆ.