Advertisement

ಋತುಚಕ್ರದ ಮುಜುಗರ-ಆತಂಕ ಬೇಡ

04:56 PM May 29, 2022 | Team Udayavani |

ಬಾಗಲಕೋಟೆ: ಸ್ತ್ರೀಕುಲಕ್ಕೆ ನಿಸರ್ಗದ ಕೊಡುಗೆಯಾಗಿ ಬಂದಿರುವ ಋತುಚಕ್ರಕ್ಕೆ ವಿದ್ಯಾರ್ಥಿನಿಯರು, ಮಹಿಳೆಯರು, ಭಯಪಡದೇ ಮುಜುಗರಕ್ಕೊಳಗಾಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ಎಚ್‌. ಅಕ್ಕಮಹಾದೇವಿ ಹೇಳಿದರು.

Advertisement

ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಋತುಸ್ರಾವ ನೈರ್ಮಲ್ಯ ನಿರ್ವಹಣೆ ದಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಹಿಳೆಯರು ಈ ಋತುಚಕ್ರದ ಬಗ್ಗೆ ಸರಿಯಾಗಿ ಅರಿತು ಆ ಸಮಯದಲ್ಲಾಗುವ ಸಣ್ಣ, ಪುಟ್ಟ ತೊಂದರೆಗಳಿಂದ ಬಳಲದೇ ಮನೆಯಲ್ಲಿಯ ತಾಯಿ, ಅಕ್ಕ ಮತ್ತು ಸ್ನೇಹಿತೆಯರ ಬಳಿ ತನಗಾಗುವ ತೊಂದರೆಗೆ ಪರಿಹಾರ ತಿಳಿದುಕೊಳ್ಳುವುದರ ಜತೆಗೆ ಸಮಸ್ಯೆ ಹೆಚ್ಚಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ಋತುಮತಿಯಾದ ಮಹಿಳೆ ದೇವಸ್ಥಾನಕ್ಕೆ ಹೋಗಬಾರದು, ಸಭೆ ಸಮಾರಂಭಗಳಿಗೆ ಹೋಗಬಾರದೆಂಬುದು ಮೂಢನಂಬಿಕೆ ಯಾಗಿದ್ದು, ಇದರಿಂದ ಮಹಿಳೆಯರು ಹೊರಬರಬೇಕೆಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಆರ್‌.ಎಂ.ಎಸ್‌ನ ಉಪ ಸಮನ್ವಯಾಧಿಕಾರಿ ಜಾಸ್ಮಿನ್‌ ಕಿಲ್ಲೇದಾರ ಮಾತನಾಡಿ, ಋತುಚಕ್ರ ಒಂದು ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳಿಗೊಮ್ಮೆ ಪ್ರತಿಯೊಬ್ಬ ಮಹಿಳೆ ಅನುಭವಿಸುವ ಕ್ರಿಯೆ ಇದಾಗಿದ್ದು, ಇಂತಹ ಸಂದರ್ಭದಲ್ಲಿ ಸ್ವಚ್ಛತೆಗೆ ಗಮನಹರಿಸಬೇಕು. ನಿಶಕ್ತಿ, ಹೊಟ್ಟೆ ನೋವಿನಂತಹ ಸಣ್ಣ, ಸಣ್ಣ ಸಮಸ್ಯೆಗಳು ಕೆಲವರಲ್ಲಿ ಕಂಡುಬರುತ್ತದೆ. ಅಂಥವರು ಪೌಷ್ಟಿಕ ಆಹಾರ, ಒಳ್ಳೆಯ ವಿಹಾರದಿಂದಾಗಿ ಸರಿಪಡಿಸಿಕೊಳ್ಳಬಹುದು. ಸ್ತ್ರೀಯರ ಈ ಸಮಸ್ಯೆಗೆ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿಯೇ ಶಿಕ್ಷಕಿಯನ್ನು ನಿಯಮಿಸಲಾಗಿದ್ದು, ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಶಾಲಾ ಶಿಕ್ಷಕಿಯರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಜಿ.ಪಂ. ನೈರ್ಮಲ್ಯ ಮತ್ತು ಶುಚಿತ್ವ ಸಮಾಲೋಚಕ ಮುರುಗೇಂದ್ರ ಮಂಗೋಲಿ ಮಾತನಾಡಿ, ಋತುಚಕ್ರ ಬಗೆಗಿನ ತಪ್ಪು ಕಲ್ಪನೆ ದೂರಮಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯತಿಯಿಂದ ಸಪ್ತಾಹ ಆಚರಿಸಲಾಗುತ್ತಿದೆ. ಈ ಕಾರ್ಯಕ್ಕೆ ಆರೋಗ್ಯ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಕಾರದಿಂದ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಆಗಸ್ಟ್‌ 28ರವರೆಗೆ ಪ್ರತಿ ವರ್ಷ ಈ ಜಾಗೃತಿ ಅಭಿಯಾನ ಜರುಗಲಿದೆ ಎಂದರು.

Advertisement

ಗ್ರಾಮೀಣ ಪ್ರದೇಶದ ಮತ್ತು ಕೂಲಿ ಕಾರ್ಮಿಕರ ಮಹಿಳೆಯರಿಗಾಗಿ ಅಂಗನವಾಡಿ, ಗ್ರಾಮ ಪಂಚಾಯತಿ, ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದ್ದು, ಪ್ರತಿಯೊಬ್ಬ ಮಹಿಳೆ ವ್ಯಯಕ್ತಿಕ ಶುಚಿತ್ವ, ಕೌಟುಂಬಿಕ ಶುಚಿತ್ವ, ಸಾಮಾಜಿಕ ಶುಚಿತ್ವ ಅನುಸರಿಸಬೇಕಾಗಿದೆ. ಇದರಿಂದ ಋತುಮತಿಯ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಬಾರದೆಂಬುದು ಇದರ ಉದ್ದೇಶವಾಗಿದೆ. ಶಾಲಾ ಮಕ್ಕಳು ಅದರಲ್ಲೂ 8ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿನಿಯರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಅರ್ಥೈಸುವ ಛಾಯಾಚಿತ್ರ ಪ್ರದರ್ಶನ ಜರುಗಿತು. ಋತುಚಕ್ರಕ್ಕೆ ಸಂಬಂಧಿಸಿದ ಪೋಸ್ಟರ್‌ ಸಹ ಬಿಡುಗಡೆ ಮಾಡಲಾಯಿತು. ಸಿಡಿಪಿಒ ಶಿಲ್ಪಾ ಹಿರೇಮಠ, ಜಿಲ್ಲಾ ಆರ್‌ ಸಿಎಚ್‌ ಅಧಿಕಾರಿ ಡಾ| ಬಿ.ಜಿ. ಹುಬ್ಬಳ್ಳಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ದೊಡ್ಡಪ್ಪನವರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next