ನಲವತ್ತೈದು ವರ್ಷದ ಶಿಲ್ಪಾ ಮುಂಚೆ ಹೀಗಿರಲಿಲ್ಲ! ಇತ್ತೀಚೆಗೆ ಬೆಳಗ್ಗೆ ಹಾಸಿಗೆಯಿಂದ ಏಳಬೇಕಾದರೆ ಯಮಯಾತನೆ. ಪಟಪಟ ಕೆಲಸ ಮಾಡುತ್ತಿದ್ದ ಈಕೆ, ಈಗ ಸಿಟಸಿಟ ಅಂತ ಎಲ್ಲರ ಮೇಲೂ ಸಿಡುಕುತ್ತಾರೆ. ಮಾತು ತೀಕ್ಷ್ಣ. ಜೊತೆಗೆ ಎದೆ ಉರಿ, ಹೊಟ್ಟೆಯಲ್ಲಿ ಸಂಕಟ, ವಾಂತಿ ಬರೋಹಾಗೆ ಅನಿಸಿ ಊಟ ಸೇರುವುದೇ ಇಲ್ಲ, ಆದರೂ ಅಡುಗೆ ಮಾಡಬೇಕು. ಮೈಯೆಲ್ಲಾ ಬೆವರು, ಇಲ್ಲ ಚಳಿ ಚಳಿ ಎನಿಸಿ, ಎದೆ ಢವಢವ ಹೊಡೆದುಕೊಳ್ಳುತ್ತದೆ. ಭಾನುವಾರಗಳಂದು ಮಕ್ಕಳೊಡನೆ ನಾದಿನಿ ಬಂದುಬಿಡುತ್ತಾಳೆ. ಕಣ್ಣು ತುಂಬಾ ನಿದ್ದೆಮಾಡಿ ಯಾವ ಕಾಲವಾಯಿತು!
ಅವತ್ತು, ಅತ್ತೆ, ನಾದಿನಿ ಮತ್ತು ಗಂಡ ರೂಮಿನಲ್ಲಿ ಮಾತಾಡುತ್ತಿದ್ದಾಗ, ಶಿಲ್ಪಾ ಕಾಫೀ ತೆಗೆದುಕೊಂಡು ಬಂದ ತಕ್ಷಣ ಮೂವರೂ ವಿಷಯ ಬದಲಾಯಿಸಿದ್ದಾರೆ. ಗುಟ್ಟು ಮಾತಾಡಿಕೊಳ್ಳಲು ಶಿಲ್ಪಾ ಹೊರಗಿನವಳೇ? ಮನೆ ಕೆಲಸದವಳೇ? ಅವರೆಲ್ಲಾ ಒಂದಾಗಿ ಶಿಲ್ಪಾಳನ್ನು ದಬಾಯಿಸಲು, ಅತ್ತುಬಿಟ್ಟಿದ್ದಾರೆ. ನಾದಿನಿ ಮತ್ತು ಗಂಡ ಮಾತುಬಿಟ್ಟಿದ್ದಾರೆ. ಅತ್ತೆಗೆ ಮುನಿಸು.
ಕೌನ್ಸೆಲಿಂಗ್ ಮಾಡಿಸಲು ಪತಿ ಶಂಕರ್, ಶಿಲ್ಪಾರನ್ನು ನನ್ನ ಬಳಿ ಕರಕೊಂಡು ಬಂದಿದ್ದರು. “ಅನ್ಯಾಯಕ್ಕೆ ಪ್ರತಿಭಟಿಸಿದರೆ, ನನಗೆ ಮನೋರೋಗವೆಂಬ ಪಟ್ಟ ಕಟ್ಟುತ್ತಾರೆ?’ ಎಂಬುದು ಶಿಲ್ಪಾಳ ಪ್ರಶ್ನೆ. ಗಂಡನಿಗೆ ತನ್ನ ತಮ್ಮ- ತಂಗಿಯ ಮೇಲೆ ಇರುವ ವಾತ್ಸಲ್ಯ ಹೆಂಡತಿಯ ಮೇಲೇಕೆ ಇರುವುದಿಲ್ಲ?
ಸೌಮ್ಯವಾಗಿದ್ದ ಶಿಲ್ಪಾ ಹಠಾತ್ತಾಗಿ ಗಡಸಾಗಲು ಕಾರಣ ಮನೋರೋಗವಲ್ಲ. ಕುಟುಂಬಕ್ಕೆಲ್ಲಾ ನಿರಂತರವಾಗಿ ದುಡಿಯುವ ಹೆಣ್ಣಿಗೆ ಕಿಂಚಿತ್ ಪ್ರೀತಿ ಅವಳಿಗೆ ಬೇಕಾದ ಹಾಗೆ ಸಿಗದಿದ್ದರೆ ಹತಾಶೆ ಮೈದಳೆಯುತ್ತದೆ. ಕಹಿಯಾದ ಕೌಟುಂಬಿಕ ವರ್ತಮಾನಗಳು ಶಕ್ತಿಯನ್ನು ಉಡುಗಿಸುತ್ತದೆ. ಜೊತೆಗೆ, ವಯಸ್ಸು ನಲವತ್ತಾದ ಮೇಲೆ, ಮುಟ್ಟು ನಿಲ್ಲುವ ಪ್ರಕಿಯೆಯಲ್ಲಿ ಈಸ್ಟ್ರೊಜೆನ್ ಹಾರ್ಮೋನು ಕ್ರಮೇಣ ಕಡಿಮೆಯಾಗಿ ಅವಳಲ್ಲಿ ಸಿಟ್ಟು- ಕೋಪ ತರಿಸುತ್ತದೆ. (ಹೆಣ್ಣಿನ ವಾತ್ಸಲ್ಯಕ್ಕೆ ಈ ಹಾರ್ಮೋನುಗಳು ಕಾರಣ ಎಂದು ಅಧ್ಯಯನ ತಿಳಿಸುತ್ತದೆ). ಹಾಗೆಯೇ ಸಂಸಾರದಲ್ಲಿ, ಪ್ರತಿಭಟಿಸುವ ಮಗಳು, ಹೆದರುಪುಕ್ಕಲ ಮಗ, ತಮ್ಮಂದಿರಿಗೆ ಆಸ್ತಿ ಬರೆದುಕೊಡುವ ಗಂಡ, ಸರೀನೇ ಹೋಗದ ಅತ್ತೆಯ ಗೆಳೆತನ, ಮಾವನ ಅಧಿಕಾರಯುತ ವಾಣಿ, ಮತ್ತೆ ಬೇಡದಕ್ಕೆ ತಲೆ ಹಾಕುವ ನಾದಿನಿಯ ಮಧ್ಯೆ, ಜೀವನ ದಂಡ ಆಗೋಯ್ತಲ್ಲಾ ಎನಿಸುತ್ತದೆ. ಸಿಡುಕು ತಂತಾನೇ ಬರುತ್ತದೆ.
ಮಹಿಳೆಯರು ಅನಗತ್ಯ ಕೌಟುಂಬಿಕ ಜವಾಬ್ದಾರಿಯನ್ನು ಹೊರುವ ಅಗತ್ಯವಿಲ್ಲ. ಅಡುಗೆ ಮನೆಯಿಂದ ಈಚೆ ಬರಬೇಕು. ಸಾಮಾಜಿಕ ಚಟುವಟಿಕೆಗೆ ಸಮಯ ಮೀಸಲಿಡಿ, ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಹೊರಗಿನ ಪ್ರಪಂಚದ ಜೊತೆಗೆ ಬೆರೆಯಿರಿ. ಅತಿಯಾಗಿ ಯಾರ ಸೇವೆಯನ್ನೂ ಮಾಡುವ ಅಗತ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಬಲಗೊಳಿಸಿ. ಸ್ವಲ್ಪ ಮಟ್ಟಿಗೆ ಸ್ವಾರ್ಥ ಮೈಗೂಡಿಸಿಕೊಳ್ಳಿ. ಪತಿಗೆ ಅವರ ನಡವಳಿಕೆ ತಿದ್ದಿಕೊಳ್ಳುವ ಸಂಯಮವಿತ್ತು. ಇಬ್ಬರೂ ಸಮಾಧಾನಗೊಂಡರು. ಈಗ ಎಲ್ಲರೂ ಚೆನ್ನಾಗಿದ್ದಾರೆ.
(ವಿ.ಸೂ. ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾದಾಗ, ಹಾಲೂಡಿಸುವ ಸಂದರ್ಭದಲ್ಲಿ ಮತ್ತು ಮುಟ್ಟುನಿಲ್ಲುವ ಸಮಯದಲ್ಲಿ ಹಾರ್ಮೋನುಗಳ ಏರುಪೇರಾಗುತ್ತದೆ. ಇಂಥ ವೇಳೆ ಪ್ರೀತಿಯೇ ಮದ್ದು)
ಶುಭಾ ಮಧುಸೂದನ್