Advertisement

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11:14 PM Sep 24, 2024 | Team Udayavani |

ಮಂಗಳೂರು: ನಗರದಲ್ಲಿ 2019ರ ಮೇ 11ರಂದು ನಡೆದಿದ್ದ ಶ್ರೀಮತಿ ಶೆಟ್ಟಿ ಅವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರದಂದು ತೀರ್ಪು ನೀಡಿದ್ದಾರೆ.

Advertisement

ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ ಆಲಿಯಾಸ್‌ ಜೋನಸ್‌ ಜೌಲಿನ್‌ ಸ್ಯಾಮ್ಸನ್‌ (35) ಮತ್ತು ವಿಕ್ಟೋರಿಯಾ ಮಥಾಯಿಸ್‌ (47) ಜೀವಾವಧಿ ಶಿಕ್ಷೆಗೊಳಗಾಗದವರು.

ಪ್ರಕರಣದ ಇನೋರ್ವ ಆರೋಪಿ ರಾಜು (34) ಎಂಬಾತನಿಗೆ ಆರೂವರೆ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಶ್ರೀಮತಿ ಶೆಟ್ಟಿ ಕುರಿ ಫ‌ಂಡ್‌ ನಡೆಸುತ್ತಿದ್ದರು. ಅದರಲ್ಲಿ 2 ಸದಸ್ಯತ್ವ ಪಡೆದಿದ್ದ ಜೋನಸ್‌ ಮಾಸಿಕ ಕಂತು ಪಾವತಿಸಿರಲಿಲ್ಲ. ಅದನ್ನು ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಅವರು ಜೋನಸ್‌ನ ಮನೆಗೆ ಹೋಗಿದ್ದರು. ಆಗ ಜೋನಸ್‌ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯವರ ತಲೆಗೆ ಹೊಡೆದಿದ್ದ. ಬಳಿಕ ಜೋನಸ್‌ ಮತ್ತು ವಿಕ್ಟೋರಿಯಾ ಪ್ರಜ್ಞಾಹೀನರಾಗಿ ಬಿದ್ದಿದ್ದ ಶ್ರೀಮತಿ ಶೆಟ್ಟಿ ಅವರನ್ನು ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ದೇಹವನ್ನು 29 ತುಂಡುಗಳನ್ನಾಗಿ ಮಾಡಿದ್ದರು. ಶ್ರೀಮತಿ ಶೆಟ್ಟಿಯವರ ದೇಹದ ಮೇಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು. ಅದೇ ದಿನ ರಾತ್ರಿ ಜೋನಸ್‌ ದೇಹದ ತುಂಡುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ನಗರದ ಹಲವೆಡೆ ಇಟ್ಟುಹೋಗಿದ್ದ. ಆರೋಪಿಗಳಿಗೆ ರಾಜು ಎಂಬಾತ ಒಂದು ದಿನ ಉಳಿದುಕೊಳ್ಳಲು ಆತನ ಮನೆಯಲ್ಲಿ ಆಶ್ರಯ ನೀಡಿದ್ದ. ಇದಕ್ಕೆ ಪ್ರತಿಯಾಗಿ ಆತನಿಗೂ ಆರೋಪಿಗಳು ಚಿನ್ನಾಭರಣ ನೀಡಿದ್ದರು.

ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ನಿರೀಕ್ಷಕ ಮಹೇಶ್‌ ಎಂ. ಅವರು ತನಿಖೆ ಕೈಗೊಂಡಿದ್ದರು. ಫೋರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ| ಜಗದೀಶ್‌ ರಾವ್‌ ಅವರು ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು. ಇನ್‌ಸ್ಪೆಕ್ಟರ್‌ ಶಾಂತಾರಾಂ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ಸರಕಾರಿ ಅಭಿಯೋಜಕಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಅವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Advertisement

ಶಿಕ್ಷೆಯ ಸ್ವರೂಪಗಳು
ವಿಚಾರಣೆ ನಡೆಸಿದ ನ್ಯಾಯಾಧೀಶರು ಜೋನಸ್‌ ಮತ್ತು ವಿಕ್ಟೋರಿಯಾಳಿಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 302ರ ಜತೆ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫ‌ಲವಾದರೆ 1 ವರ್ಷ ಜೈಲು, ಕಲಂ 201ರ ಜತೆ 34ರ ಅಡಿಯಲ್ಲಿ 7 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, ಕಲಂ 392ರ ಜತೆ 34ರ ಅಡಿಯಲ್ಲಿ 5 ವರ್ಷಗಳ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫ‌ಲರಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. 3ನೇ ಆರೋಪಿ ರಾಜುಗೆ ಕಲಂ 414ರ ಅಡಿಯಲ್ಲಿ ಆರೂವರೆ ತಿಂಗಳ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ.

ದಂಡದ ಮೊತ್ತದಲ್ಲಿ 75 ಸಾವಿರ ರೂ.ಗಳನ್ನು ಶ್ರೀಮತಿ ಶೆಟ್ಟಿ ಅವರ ತಾಯಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಶ್ರೀಮತಿ ಶೆಟ್ಟಿಯವರ ತಾಯಿಗೆ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next