Advertisement
ಕೃಷಿ ತೋಟದೊಳಗೆ ಪಕ್ಕಾ ಸಿಂಪಲ್ ಮತ್ತು ದೇಸಿ ಶೈಲಿಯಲ್ಲಿ ದೃಶ್ಯಕಾವ್ಯವನ್ನು ಹಂಚಿದವರು ಹಳ್ಳಿ ಸ್ಟೈಲ್ ಅಡುಗೆಯಿಂದಲೇ ಮನೆ ಮಾತಾಗಿರುವ ಭಟ್ ಎನ್ ಭಟ್ ಯೂಟ್ಯೂಬ್‌ನ ಸುದರ್ಶನ್ ಭಟ್ ಅವರು. ಅವರು ತನ್ನ ಭಾವಿ ಪತ್ನಿ ಕೃತಿ ಜತೆ ಹಳ್ಳಿ ಹೈದನಾಗಿ ಅಡುಗೆಯ ಮೂಲಕವೇ ತಮ್ಮ ಮದುವೆಯ ಪ್ರೀ ವೆಡ್ಡಿಂಗ್ ಶೂಟ್ ಕಥೆ ಹಂಚಿದ್ದಾರೆ. ಇಬ್ಬರೂ ಸೇರಿ ಹಳ್ಳಿ ಅಡುಗೆಯ ಘಮ ಊರಿಡೀ ಹರಿಸಿದ್ದಾರೆ. ಕುಚ್ಚಲಕ್ಕಿ ಗಂಜಿ, ಬಾಳೆ ಪೂಂಬೆಯ ಚಟ್ನಿ ತಯಾರಿಸಿ ಸವಿಯುತ್ತಾ ಪ್ರೀ ವೆಡ್ಡಿಂಗ್ ಶೂಟ್‌ಗೆ ಸಾಂಪ್ರದಾಯಿಕ ಟಚ್ ನೀಡಿದ್ದಾರೆ.
ಸುದರ್ಶನ್ ಭಟ್ ಅಡುಗೆಯಲ್ಲಿ ಎತ್ತಿದ ಕೈ. ತನ್ನ ಸಹೋದರನ ಜತೆಗೆ ಹಳ್ಳಿ ಶೈಲಿಯಲ್ಲಿ ತಯಾರಿಸಿ ಯೂಟ್ಯೂಬ್‌ನಲ್ಲಿ ಪ್ರಸಾರಿಸುವ ಅಡುಗೆಗೆ ಲಕ್ಷ-ಲಕ್ಷ ಜನ ಅಭಿಮಾನಿಗಳಿದ್ದಾರೆ. ಅಡುಗೆ ತಯಾರಿಸಿ ಅದರ ರುಚಿ ಸವಿಯುವ ಭಟ್ಟರನ್ನು ಕಂಡು ಬಾಯಿ ಚಪ್ಪರಿಸುವ ವರ್ಗವೇ ಇದೆ. ಮಾವು, ಸೋರೆಕಾಯಿ, ಪುನರ್ಪುಳಿ, ಕೆಸು ಹೀಗೆ ಹಳ್ಳಿ ತೋಟದ ವಸ್ತುಗಳನ್ನು ಬಳಸಿಕೊಂಡು ತಯಾರಿಸುವ ಖಾದ್ಯಗಳು ಎಲ್ಲೆಡೆ ಮನೆ ಮಾತು. ಹಳ್ಳಿ ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚಿ, ಒಳಕಲ್ಲಿನಲ್ಲಿ ರುಬ್ಬಿ, ಹಳೆ ಸಂಪ್ರದಾಯದಂತೆ ಮಾಡುವ ಅಡುಗೆ ವಿಧಾನವೇ ಅವರಿಗೊಂದು ಟ್ರೇಡ್ ಮಾರ್ಕ್.
Related Articles
ಅಂದ ಹಾಗೆ, ಕೃತಿ ಬೆಳಂದೂರಿನವರು. ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ವಕೀಲ ಪದವೀಧರಾಗಿರುವ ಸುದರ್ಶನ ಭಟ್ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಸೀತಾಂಗೋಳಿ ಸಮೀಪದ ಬೆದ್ರಡಿ ನಿವಾಸಿ. ಈಗ ಸೀತಾಂಗೋಳಿಯಲ್ಲಿ ಒಂದು ಆಹಾರ ಉತ್ಪನ್ನಗಳ ಮಳಿಗೆಯನ್ನು ಆರಂಭಿಸಿದ್ದಾರೆ. ಕೆಲವು ಸಮಯಗಳ ಹಿಂದೆ ಕೃತಿ ಜತೆ ನಿಶ್ಚಿತಾರ್ಥ ನಡೆದಿದ್ದು, ಅಕ್ಟೋಬರ್‌ನಲ್ಲಿ ಮದುವೆ ನಡೆಯಲಿದೆ.
Advertisement
ಹೀಗಿದೆ ಪ್ರೀ ವೆಡ್ಡಿಂಗ್ ಶೂಟ್ಹಳ್ಳಿ ದಿರಿಸಿನಲ್ಲಿ ಕೃತಿ ಮತ್ತು ಸುದರ್ಶನ್ ಭಟ್ ಕಾಣಿಸಿಕೊಳ್ಳುತ್ತಾರೆ. ಜೇಡರ ಬಲೆಯ ಪರದೆ ಎಳೆದು ಪ್ರಾರಂಭಗೊಳ್ಳುವ ದೃಶ್ಯದಲ್ಲಿ ಕಾಟನ್ ಸೀರೆ ಉಟ್ಟು ಹಳ್ಳಿ ಹುಡುಗಿಯಂತೆ ಹೆಜ್ಜೆ ಇಡುವ ಕೃತಿ ಸುದರ್ಶನ್ ಅವರ ಜತೆಗೆ ಅಡಿಕೆ ತೋಟದೊಳಗೆ ಬರುತ್ತಾರೆ. ಸುದರ್ಶನ್ ದೋಟಿಯ ಸಹಾಯದಿಂದ ಬಾಳೆ ಗಿಡದ ಪೂಂಬೆಯನ್ನು ಕೊಯ್ದು ಕೃತಿಗೆ ಪೂಂಬೆಯ ಹೂವಿನ ರುಚಿ ಉಣಬಡಿಸುತ್ತಾರೆ, ಬಳಿಕ ಇಬ್ಬರೂ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ತೆಂಗಿನ ಕಾಯಿಯೊಳಗಿನ ಸಿಹಿನೀರು ಕುಡಿಸುತ್ತಾ ಇಬ್ಬರೂ ಅಡುಗೆ ತಯಾರಿಯಲ್ಲಿ ತೊಡಗುತ್ತಾರೆ. ಒಂದೆಡೆ ಸೌಧ ಒಲೆಯಲ್ಲಿ ಕುಚಲಕ್ಕಿ ಗಂಜಿ ಬೇಯುತ್ತಾ ಹೆಂಚಿನ ಮಾಡಿನಿಂದ ಹೊಗೆ ಸೂಸುತ್ತಿದ್ದರೆ, ಇನ್ನೊಂದೆಡೆ ಅರೆಯುವ ಕಲ್ಲಿನಲ್ಲಿ ಇಬ್ಬರೂ ಕುಳಿತು ಪೂಂಬೆ ಚಟ್ನಿಯ ಪಾಕ ತಯಾರಿಸುತ್ತಾರೆ. ಅಡುಗೆ ಮುಗಿದ ಬಳಿಕ ಕಟ್ಟೆ ಮೇಲೆ ಕುಳಿತು, ಸುಟ್ಟ ಹಲಸಿನ ಹಪ್ಪಳದ ಜತೆ ಊಟದ ಸವಿ ಸವಿಯುತ್ತಾರೆ. ಹಿನ್ನೆಲೆಯಲ್ಲಿ “ಈ ಜನುಮವೇ ಅಹ ದೊರೆತಿದೆ ರುಚಿ ಸವಿಯಲು’ ಹಾಡು ಗುಂಯ್ ಗುಡುತ್ತದೆ. -ಕಿರಣ್ ಪ್ರಸಾದ್ ಕುಂಡಡ್ಕ