Advertisement

ಕೆ.ಹೆಚ್.ಹಳ್ಳಿ ಗ್ರಾ.ಪಂ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರೊಂದಿಗೆ ಸದಸ್ಯರಿಂದಲೇ ಪ್ರತಿಭಟನೆ

09:29 PM Jun 15, 2022 | Team Udayavani |

ಕುಣಿಗಲ್ : ಗ್ರಾ.ಪಂ ಅಧ್ಯಕ್ಷರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕಿನ ಅಮೃತೂರು ಹೋಬಳಿ ಕೊರಟಿ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯ್ತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಭ್ರಷ್ಟಾಚಾರ ಹಾಗೂ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿರುವ ಗ್ರಾ.ಪಂ ಅಧ್ಯಕ್ಷ ಟಿ.ಟಿ.ವೆಂಕಟೇಶ್ ಕೂಡಲೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಗ್ರಾ.ಪಂ ಸದಸ್ಯರಾದ ಯತಿರಾಜ್, ಕೆ.ಪಿ.ರಾಮನಂಜಯ್ಯ, ರಕ್ಷಿತಾರಾಮ್ ಅವರ ನೇತೃತ್ವದಲ್ಲಿ ಕೆ.ಹೆಚ್.ಹಳ್ಳಿ ಹಾಗೂ ಇದರ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಓ ವಿರುದ್ದ ಧಿಕ್ಕಾರ ಕೂಗಿದರು.

ಗ್ರಾ.ಪಂ ಸದಸ್ಯ ಕೆ.ಪಿ.ರಾಮನಂಜಯ್ಯ ಮಾತನಾಡಿ ಗ್ರಾ.ಪಂ ಅಧ್ಯಕ್ಷ ಟಿ.ಟಿ.ವೆಂಕಟೇಶ್ ಅಧಿಕಾರ ಸ್ವೀಕರಿಸುವ ವೇಳೆಯಲ್ಲಿ ಪಕ್ಷಪಾತ ಮಾಡುವುದಿಲ್ಲ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು ಈಗ ಕಾಂಗ್ರೆಸ್ ಪಕ್ಷದ ಗ್ರಾ.ಪಂ ಸದಸ್ಯರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ, ಅಭಿವೃದ್ದಿ ಕೆಲಸಗಳು ಕೇಳಿದರೆ ಮಾಡಿಕೊಡುತ್ತಿಲ್ಲ, ಗ್ರಾಮಗಳಲ್ಲಿ ಅವಶ್ಯಕತೆ ಇರುವ ಕಡೆ ವಿದ್ಯುತ್ ಲೈಟ್‌ಗಳನ್ನು ನನ್ನ ಸ್ವಂತ ಹಣದಿಂದ ಹಾಕಿಸಿರುವುದ್ದಾಗಿ ಹೇಳಿ ಬಲ್ಪ್ ಮೇಲೆ ಅಧ್ಯಕ್ಷರು ತಮ್ಮ ಹೆಸರನ್ನು ಹಾಕಿಸಿಕೊಂಡು ಬಳಿಕ ೧೫ ನೇ ಹಣಕಾಸು ಯೋಜನಡಿಯಲ್ಲಿ ಎಂಟು ಲಕ್ಷ ರೂ ಬಿಲ್ ಮಾಡಿಕೊಂಡು ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.

ಕೊಟ್ಟಿಗೆ, ಬದು ನಿರ್ಮಾಣ, ರಸ್ತೆ ಅಭಿವೃದ್ದಿ ಕಾಮಗಾರಿ ಮಾಡಿಲ್ಲ ಜನರಿಗೆ ಸುಳ್ಳು ಹೇಳಿಕೊಂಡು ತಮ್ಮ ಸ್ವಾರ್ಥಕ್ಕೆ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ, ಕುಡಿಯುವ ನೀರಿನ ಅವ್ಯವಸ್ಥೆ ಎಲ್ಲೆ ಮೀರಿದೆ, ಇದನ್ನು ಗ್ರಾ.ಪಂ ಸದಸ್ಯರೊಬ್ಬರು ಪ್ರಶ್ನೆ ಮಾಡಿದರೇ ನಿಮ್ಮನು ಕತ್ತು ಹಿಡಿದು ಹೊರಗೆ ದಬ್ಬುವುದ್ದಾಗಿ ಬೆದರಿಕೆ ಹಾಕುತ್ತಾರೆ, ಸಂವಿಧಾನಾತ್ಮಕವಾಗಿ ನಮ್ಮ ಹಕ್ಕು ಕೇಳುತ್ತಿದ್ದೇವೆ, ಯಾವುದೇ ದುರುದ್ದೇಶದಿಂದ ಪ್ರತಿಭಟನೆ ನಡೆಸುತ್ತಿಲ್ಲ ಅಧ್ಯಕ್ಷರ ವರ್ತನೆಯಿಂದ ಮನನೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ ಸದಸ್ಯೆ ರಕ್ಷಿತಾರಾಮ್ ಮಾತನಾಡಿ, ಬಸವ ವಸತಿ ಸೇರಿದಂತೆ ಇತರೆ ಯೋಜನಡಿಯಲ್ಲಿ ಮಂಜೂರಾಗಿ ಬರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಸಂಬಂಧ ಗ್ರಾಮ ಸಭೆ ಕರೆದು ಆಯ್ಕೆ ಮಾಡಬೇಕು ಆದರೆ ಸರ್ಕಾರದ ಆದೇಶವನ್ನು ಮೀರಿ ಅಧ್ಯಕ್ಷರು ತಮಗೆ ಇಷ್ಟ ಬಂದವರಿಗೆ ಅರ್ಹಫಲಾನುಭವಿ ಅಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಿಕೊಡುತ್ತಿದ್ದಾರೆ ಇದನ್ನು ಕೇಳಿದರೆ ಮನೆ ನಾನು ಯಾರಿಗೆ ಬೇಕಾದರೂ ಕೊಡುತ್ತೇನೆ ಇದನ್ನು ಕೇಳುವ ಹಕ್ಕು ಸದಸ್ಯರಿಗೆ ಇಲ್ಲ, ನಿಮ್ಮನು ಸಭೆಯಿಂದ ಹೊರ ಹಾಕುತ್ತೇನೆ ಎಂದು ಹೆಣ್ಣು ಮಕ್ಕಳು ಸದಸ್ಯರು ಎನ್ನದೇ ಅಧ್ಯಕ್ಷ ಟಿ.ಟಿ.ವೆಂಕಟೇಶ್ ದುರ್ನಡತೆಯಿಂದ ನಡೆದುಕೊಳ್ಳುತ್ತಿದ್ದಾರೆ, ಸದಸ್ಯರಿಗೆ ಗೌರವ ಕೊಡುತ್ತಿಲ್ಲ, ಗ್ರಾಮದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಆಗುತ್ತಿಲ್ಲ ಅಧಿಕಾರಿಗಳನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ದರ್ಪದಿಂದ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

ಮನವಿ ಪತ್ರ ಸ್ವೀಕರಿಸಿದ ಪಿಡಿಓ ನಾಗರಾಜು ಮೇಲಧಿಕಾರಿಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದ್ದಾಗಿ ನೀಡಿದ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಮುಖಂಡರಾದ ಹನುಮಂತು, ಯೋಗಿಶ್, ಚಿಕ್ಕಕರಿಯಪ್ಪ, ಕೆಂಪಮ್ಮ, ಯುವರಾಜು ಸೇರಿದಂತೆ ಮೊದಲಾದವರು ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next