ಕೆಯ್ಯೂರು: ಸಂಚಾರಿ ವಿಜಯ್ ಅಭಿನಯದ ‘ಮೇಲೊಬ್ಬ ಮಾಯಾವಿ?’ ಒಂದು ವಿಭಿನ್ನ ಕಥಾವಸ್ತು ಹೊಂದಿರುವ ಸಿನಿಮಾ. ಪತ್ರಕರ್ತರಾಗಿರುವ ಪುತ್ತೂರಿನ ನವೀನ್ ಕೃಷ್ಣ ಇದೇ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಬರೆದು ಜೊತೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಡಾವು, ಬೊಳಿಕಲ ಪರಿಸರದಲ್ಲಿ ಭರದಿಂದ ಚಿತ್ರೀಕರಣವೂ ನಡೆಯುತ್ತಿದೆ.
ಕರಾವಳಿ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ನಿಗೂಢ ಮಾಫಿಯಾವನ್ನು ಕಥಾ ವಸ್ತುವಾಗಿ ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಕೊಲೆಗಳಾಗಿವೆ. ಈ ಕುರಿತು ಕೇಸುಗಳು, ತನಿಖೆಗಳು ಆಗಿವೆ. ಆದರೂ ಈ ಮಾಫಿಯಾ ಮಾತ್ರ ಈಗಲೂ ನಿಗೂಢವಾಗಿದೆ. ಇದೇ ಕಥೆಯನ್ನು ಇಟ್ಟುಕೊಂಡು ಒಂದು ನೈಜ ಸಿನಿಮಾವನ್ನು ಜನರ ಮುಂದಿಡಲಿದ್ದೇವೆ ಎಂದು ನವೀನ್‌ಕೃಷ್ಣ ಹೇಳಿದರು.
ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸಲಿದೆ, ಪ್ರತಿಯೊಬ್ಬರೂ ಒಂದು ಗುರಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಈ ಎಲ್ಲದರ ನಡುವೆ ಒಬ್ಬ ಮಾಯಾವಿ ಇದ್ದಾನೋ ಎಂಬುದು ಕ್ಲೈಮ್ಯಾಕ್ಸ್‌ಗೆ ಅರ್ಥವಾಗಲಿದೆ. ಈ ಚಿತ್ರ ಸಂಪೂರ್ಣವಾಗಿ ಮಾಡಾವು, ಬೆಳ್ಳಾರೆ, ಸುಳ್ಯ ಮತ್ತು ಸುಬ್ರಹ್ಮಣ್ಯ ಪರಿಸರದಲ್ಲಿ ಚಿತ್ರೀಕರಣಗೊಳ್ಳಲಿದೆ. ಪುತ್ತೂರು ಪಟ್ನೂರು ಮತಾವುನ ಭರತ್ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಸಂಚಾರಿ ವಿಜಯ್, ಚಂದ್ರಚೂಡ್, ಅನನ್ಯಾ ಶೆಟ್ಟಿ, ಪವಿತ್ರಾ ಜಯರಾಮ್, ಕೃಷ್ಣಮೂರ್ತಿ ಕವತಾರ್, ಎಂ.ಕೆ. ಮಠ, ನಂಜಪ್ಪ, ನವೀನ್ ಕೃಷ್ಣ ಸಹಿತ ರಂಗಭೂಮಿ ಹಿನ್ನೆಲೆಯ ದೊಡ್ಡ ತಂಡವೇ ಇಲ್ಲಿದೆ. ಸಂಚಾರಿ ವಿಜಯ್ ಅವರ ಪ್ರಕಾರ, ಅದು ಹಸಿವು ಮತ್ತು ನಿರಂತರ ಹೋರಾಟದ ಪ್ರತಿರೂಪ. ನನ್ನ ಪಾತ್ರಕ್ಕೆ ನಿರ್ದೇಶಕರು ಇರುವೆಯ ರೂಪಕ ಕೊಟ್ಟಿದ್ದಾರೆ ಎಂದರು.
ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಚಕ್ರವರ್ತಿ ಚಂದ್ರಚೂಡ್ ಖಳನಟರಾಗಿಯೂ ಅಭಿನ ಯಿಸುತ್ತಿದ್ದಾರೆ. ಜಾಗತಿಕ ತಾಪಮಾನದ ವಿರುದ್ಧ ಹಳ್ಳಿಯ ಬಡ ಹುಡುಗ ಏನು ಮಾಡುತ್ತಾನೆ ಎನ್ನುವುದೇ ಚಿತ್ರದ ತಿರುಳು. ಮಾಫಿಯಾಕ್ಕೂ ಜಾಗತಿಕ ತಾಪಮಾನಕ್ಕೂ ಇರುವ ಲಿಂಕ್ ಕೂಡ ಚಿತ್ರ ನೋಡಿದರೆ ತಿಳಿಯುತ್ತದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎಲ್. ಎನ್. ಶಾಸ್ತ್ರೀ ಸಂಗೀತ ನಿರ್ದೇಶಿಸಿದ ಕೊನೆಯ ಸಿನಿಮಾ ಇದು. ಅವರ ನಿಧನದ ಬಳಿಕ ಗಾಯಕಿ ಸುಮಾ ಶಾಸ್ತ್ರೀ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್‌ನಡಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ದೀಪಿತ್ ಛಾಯಾಗ್ರಹಣ, ಗಿರೀಶ್ ಸಂಕಲನ, ಗೋಪಿ ಕಿರೂರ್ ಸಹ ನಿರ್ದೇಶನವಿದೆ. 36 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯಲಿದೆ. ಮಾಡಾವು, ಬೊಳಿಕಲದಲ್ಲಿ ವಿಜಯ್ ಹಾಗೂ ಅನನ್ಯಾ ಶೆಟ್ಟಿ ಅಭಿನಯದ ಕೆಲವು ದೃಶ್ಯಗಳು, ಶೇಂದಿ ಅಂಗಡಿ ಮುಂದಿನ ಹಾಡಿನ ಚಿತ್ರೀಕರಣ ಆಗಿದೆ.
ಮಾಫಿಯಾ ಕಥೆ
‘ಮೇಲೊಬ್ಬ ಮಾಯಾವಿ?’ಯಲ್ಲಿ ರಂಗಭೂಮಿಯ ಅನುಭವಿ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರೂ ಅಭಿನಯಿಸಿದ್ದಾರೆ. ಕರಾವಳಿಯಲ್ಲಿ ಜೀವಂತವಾಗಿರುವ ಮಾಫಿಯಾದ ಕಥೆಯನ್ನು ಬಳಸಿಕೊಂಡು ವಿಭಿನ್ನವಾಗಿ ಒಳ್ಳೆಯ ಸಿನೆಮಾ ಮಾಡಲು ಹೊರಟಿದ್ದೇವೆ. ನಾನು ಪುತ್ತೂರು ಪಟ್ನೂರು ಮತಾವು ನಿವಾಸಿಯಾಗಿದ್ದು, ಕೃಷಿಕನಾಗಿದ್ದುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ.
– ಪುತ್ತೂರು ಭರತ್,
ನಿರ್ಮಾಪಕರು
ನೈಜ ಘಟನೆ
ಪತ್ರಕರ್ತನಾಗಿರುವ ನಾನು ಮೂಲತಃ ಪುತ್ತೂರು ಮುರ ನಿವಾಸಿ. ಇದು ನನ್ನ ಮೊದಲ ಸಿನೆಮಾ. ಕರಾಳಿಯ ಮಾಫಿಯದ ಕಥೆ ಇರುವ ಥ್ರಿಲ್ಲರ್ ಸಿನಿಮಾ ಇದು. ನೈಜ ಘಟನೆ ಆಧರಿಸಿದೆ. ಮಾಡಾವು, ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯದ ಕೆಲವು ಕಡೆ ಚಿತ್ರಕರಣಗೊಳ್ಳಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಸಹಿತ ರಂಗಭೂಮಿಯ ದೊಡ್ಡ ದೊಡ್ಡ ಕಲಾವಿದರು ಚಿತ್ರದಲ್ಲಿದ್ದಾರೆ. ಪುತ್ತೂರು ಭರತ್ ನಿರ್ಮಾಪಕರಾಗಿದ್ದಾರೆ.
- ನವೀನ್ ಕೃಷ್ಣ, ನಿರ್ದೇಶಕರು