Advertisement

ಮೆಲ್ಕಾರ್‌: ಹೆದ್ದಾರಿ ಬದಿ ಲಾರಿ ನಿಲುಗಡೆಗೆ ಬಿದ್ದಿಲ್ಲ ಬ್ರೇಕ್‌

10:54 PM Feb 25, 2022 | Team Udayavani |

ಬಂಟ್ವಾಳ: ಮೆಲ್ಕಾರ್‌ ಜಂಕ್ಷನ್‌ನಿಂದ ಕಲ್ಲಡ್ಕ ಭಾಗಕ್ಕೆ ತೆರಳುವ ಹೆದ್ದಾರಿ ಬದಿ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್‌ ಗಾತ್ರದ ಲಾರಿ ಹಾಗೂ ಟ್ಯಾಂಕರ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಹಿಂದೊಮ್ಮೆ ಈ ಭಾಗದಲ್ಲಿ ಲಾರಿಗಳನ್ನು ನಿಲ್ಲಿಸದಂತೆ ಸೂಚನ ಪೊಲೀಸರು ಫಲಕ ಹಾಕಿದ್ದರೂ, ಪ್ರಸ್ತುತ ಫಲಕ ಮಾಯ ವಾಗಿದೆಯೇ ಹೊರತು ಲಾರಿ ನಿಲ್ಲುವ ಸಮಸ್ಯೆಗೆ ಮುಕ್ತಿ ದೊರಕಿಲ್ಲ.

Advertisement

ಬೆಂಗಳೂರು, ಚೆನ್ನೈ, ಆಂಧ್ರ ಪ್ರದೇಶ ಮೊದಲಾದ ಭಾಗಗಳಿಂದ ಸರಕು ಹೊತ್ತು ಮಂಗಳೂರಿಗೆ ಬರುವ ಲಾರಿ, ಟ್ಯಾಂಕರ್‌ ಹಾಗೂ ಮಂಗಳೂರಿನಿಂದ ದೂರದ ಪ್ರದೇಶಗಳಿಗೆ ತೆರಳುವ ಲಾರಿಗಳನ್ನು ಗಂಟೆಗಟ್ಟಲೆ ನಿಲ್ಲಿಸಲಾಗುತ್ತದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.

ಈ ರೀತಿ ನಿಂತ ಲಾರಿಗಳ ಚಾಲಕರು, ನಿರ್ವಾಹಕರು ಪರಿಸರದಲ್ಲಿ ಗಲೀಜು ಮಾಡುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ಕೂಡ ನೀಡಿದ್ದರು. ಆದರೆ ಯಾವುದೇ ದೂರಿಗೂ ಕಿವಿಗೊಡದ ಲಾರಿಗಳು ಅಲ್ಲಿ ತಾಸುಗಟ್ಟಲೆ ನಿಲ್ಲುತ್ತಲೇ ಇವೆ. ಪೊಲೀಸರು ಕೂಡ ಈ ಕುರಿತು ಗಮನಹರಿಸುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ಟ್ರಾಫಿಕ್‌ ಪೊಲೀಸರ ಫಲಕ ಇತ್ತು
ಈ ರೀತಿ ಲಾರಿ ನಿಂತು ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಅಲ್ಲಿ ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯ ವತಿಯಿಂದ ಘನ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸೂಚನ ಫಲಕವನ್ನು ಅಳವಡಿಸಲಾಗಿತ್ತು. ಆದರೆ ಈಗ ಫಲಕ ಮಾಯವಾಗಿದೆಯೇ ಹೊರತು ಲಾರಿಗಳ ನಿಲುಗಡೆಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ.

ದೂರದಿಂದ ಬರುವ ಲಾರಿ/ ಟ್ಯಾಂಕರ್‌ ಚಾಲಕರಿಗೆ ವಿರಾಮ ಬೇಕಿ ರುವುದು ಅಗತ್ಯವಾಗಿರುವುದರಿಂದ ಹೆದ್ದಾರಿ ಬದಿ ಸಾಕಷ್ಟು ಸ್ಥಳಾವಕಾಶ ಇರುವಲ್ಲಿ ನಿಲ್ಲಿಸು ವುದು ಸಹಜ.

Advertisement

ಕ್ರಮ ಕೈ ಗೊಳ್ಳಲಾಗುವುದು
ಹೆದ್ದಾರಿ ಬದಿ ಲಾರಿ ನಿಂತು ಸಮಸ್ಯೆಯಾಗುತ್ತಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಹುದ್ದೆ ಖಾಲಿ ಇದ್ದು, ಫೆ. 28ರಂದು ಪಿಎಸ್‌ಐ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಳಿಕ ಈ ಬಗ್ಗೆ ಗಮನ ಹರಿಸಲಾಗುವುದು.
-ಪ್ರತಾಪ್‌ ಸಿಂಗ್‌ ಥೊರಟ್‌, ಡಿವೈಎಸ್‌ಪಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next