ಬೆಂಗಳೂರು: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಯೋಜನೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಜತೆಗೆ ವಿದ್ಯುತ್ ಉತ್ಪಾದನೆ ಯೋಜನೆಯನ್ನೂ ಒಳ ಗೊಂಡಿದೆ. ಕರ್ನಾಟಕವಷ್ಟೇ ಅಲ್ಲದೆ ತಮಿಳುನಾಡಿಗೂ ಇದರಿಂದ ಉಪಯೋಗವಾಗಲಿದೆ. ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣಕ್ಕೆ 5,912 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿರುವ ಸರ್ಕಾರ ಅದಕ್ಕೆ ತಾತ್ವಿಕ ಅನುಮೋದನೆಯನ್ನೂ ನೀಡಿದೆ. ವಿವಿಧ ಹಂತಗಳನ್ನು ದಾಟಿ ಯೋಜನೆ ಕಾರ್ಯರೂಪಕ್ಕೆ ಬಂದರೆ ಕರ್ನಾಟಕದಷ್ಟೇ
ಅನುಕೂಲ ತಮಿಳುನಾಡಿಗೂ ಆಗುತ್ತದೆ ಎನ್ನುತ್ತಾರೆ ನೀರಾವರಿ ತಜ್ಞರು.
ಯೋಜನೆ ಪೂರ್ಣಗೊಂಡ ಬಳಿಕ 379.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುವುದರ ಜತೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ 16.1 ಟಿಎಂಸಿ ಕುಡಿಯುವ ನೀರು ಲಭ್ಯವಾಗಲಿದ್ದು, ಭವಿಷ್ಯದಲ್ಲಿ ಬೆಂಗಳೂರು
ನಗರದ ಕುಡಿಯುವ ನೀರಿನ ಕೊರತೆಯ ಆತಂಕವನ್ನು ದೂರ ಮಾಡಲಿದೆ.
ಯಾಕಾಗಿ ಈ ಯೋಜನೆ?: ಪ್ರಸ್ತುತ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತದೆ. ಈ ನೀರಿನ ಪ್ರಮಾಣವನ್ನು ಬಿಳಿಗುಂಡ್ಲುವಿನಲ್ಲಿ ಮಾಪನ ಮಾಡಲಾಗುತ್ತದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಬಿಳಿಗುಂಡ್ಲುವರೆಗೆ ನೀರು ಸಂಗ್ರಹಿಸಲು ಅವಕಾಶಗಳಿಲ್ಲ.ಹೀಗಾಗಿ ರಾಜ್ಯದ ಹಿತರಕ್ಷಣೆ ಜತೆಗೆ ತಮಿಳುನಾಡಿಗೆ ಮಾಸಿಕ ಹರಿಸಬೇಕಾಗಿರುವ ನೀರಿನ ಪ್ರಮಾಣಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲು
ಮೇಕೆದಾಟು ಬಳಿ ಸಮತೋಲನ ಜಲಾಶಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಉಪಯೋಗಗಳು: ವಿದ್ಯುತ್ ಉತ್ಪಾದನೆ ಕುಡಿವ ನೀರು ಪೂರೈಕೆ ಜತೆಗೆ ಹಲವು ಪರಿಸರ ಸಂಬಂಧಿ ಉಪಯೋಗಗಳೂ ಇದರಲ್ಲಿದೆ. ಯೋಜನೆಯಿಂದ ಪರಿಸರ ಸಮತೋಲನ ವಾಗುವುದರ ಜತೆಗೆ ಜಲಾನಯನ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ. ಸುತ್ತಲೂ ಅರಣ್ಯ ಪ್ರದೇಶ ಅಭಿವೃದ್ಧಿ, ವನ್ಯ ಪ್ರಾಣಿ ಸಂಕುಲಕ್ಕೆ ಕುಡಿವ ನೀರು ಲಭ್ಯವಾಗುತ್ತದೆ. ಪ್ರವಾಸೋದ್ಯಮ ಬೆಳವಣಿಗೆ ಜತೆಗೆ ಮೀನು ಉತ್ಪಾದನಾ ಉದ್ಯಮ ಅಭಿವೃದ್ಧಿಗೂ
ಸಹಾಯಕವಾಗುತ್ತದೆ.
ತ.ನಾಡಿಗೆ ಆಗುವ ಅನುಕೂಲ: ನ್ಯಾಯಾಧಿಕರಣದ ತೀರ್ಪಿನಂತೆ ಕರ್ನಾಟಕವು ತಮಿಳುನಾಡಿಗೆ ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಕಾವೇರಿ ನದಿಯಿಂದ ನೀರು ಹರಿಸಬೇಕಾಗಿದೆ. ಹೆಚ್ಚು ಮಳೆ ಬಂದ ಅವಧಿಯಲ್ಲಿ ನಿಗದಿಗಿಂತ ಹೆಚ್ಚು ನೀರು ತಮಿಳುನಾಡು ಸೇರುತ್ತಿದ್ದು, ಅಲ್ಲಿಯೂ ಸಂಗ್ರಹಕ್ಕೆ ಅವಕಾಶವಿಲ್ಲದೆ ಸಮುದ್ರ ಸೇರುತ್ತದೆ.
ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಿ ಮಳೆಗಾಲದಲ್ಲಿ ಹೆಚ್ಚಾಗಿ ಹರಿಯುವ ನೀರಿನ ಪೈಕಿ 64 ಟಿಎಂಸಿ ನೀರನ್ನು ಹಿಡಿದಿಟ್ಟುಕೊಂಡು ಅಗತ್ಯ ಸಂದರ್ಭದಲ್ಲಿ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ.