ಪ್ರತಿವರ್ಷ ಕಿರುತೆರೆಯಲ್ಲಿ ಯಶಸ್ವಿಯಾಗಿರುವ ಅನೇಕ ನಟಿಯರು ನಾಯಕಿಯರಾಗಿ ಹಿರಿತೆರೆ ಪ್ರವೇಶಿಸುತ್ತಲೇ ಇರುತ್ತಾರೆ. ಆದರೆ ಅವರಲ್ಲಿ ಕೆಲವೇ ಕೆಲವು ನಟಿಯರಷ್ಟೇ ಕಿರುತೆರೆಯಂತೆ, ಹಿರಿತೆರೆಯಲ್ಲೂ ಒಂದಷ್ಟು ಕಮಾಲ್ ಮಾಡಲು ಯಶಸ್ವಿಯಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೀಗೆ ಕಿರುತೆರೆಯಿಂದ, ಹಿರಿತೆರೆಗೆ ನಾಯಕಿಯರಾಗಿ ಬಂದಿರುವವರ ಪೈಕಿ ಒಂದಷ್ಟು ನಿರೀಕ್ಷೆ ಮೂಡಿಸಿರುವ ನಟಿ ಮೇಘಾ ಶೆಟ್ಟಿ.
ಕಿರುತೆರೆಯ “ಜೊತೆ ಜೊತೆಯಲಿ…’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿರುವ ಮೇಘಾ ಶೆಟ್ಟಿ, ಈಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ “ತ್ರಿಬಲ್ ರೈಡಿಂಗ್’ ಸಿನಿಮಾದ ಮೂಲಕ ಹಿರಿತೆರೆಗೂ ಅಡಿಯಿಟ್ಟಿದ್ದಾರೆ.
ಈಗಾಗಲೇ ಧಾರಾವಾಹಿ, ಆಲ್ಬಂ ಸಾಂಗ್ಸ್ನಲ್ಲಿ ಕಾಣಿಸಿಕೊಂಡು ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿರುವ ಮೇಘಾ ಶೆಟ್ಟಿ, “ತ್ರಿಬಲ್ ರೈಡಿಂಗ್’ ಮೂಲಕ ಹಿರಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಇದನ್ನೂ ಓದಿ:ಸ್ಟಾರ್ ಮುಂಚೆ ಹೊಸಬರ ಅದೃಷ್ಟ ಪರೀಕ್ಷೆ
ಇನ್ನು “ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಮೂವರು ನಾಯಕಿಯರು ಜೋಡಿಯಾಗಲಿದ್ದು, ಅದರಲ್ಲಿ ಒಬ್ಬರು ನಾಯಕಿಯಾಗಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ “ತ್ರಿಬಲ್ ರೈಡಿಂಗ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಈ ನಡುವೆಯೇ ಮದರಂಗಿ ಕೃಷ್ಣ ನಾಯಕರಾಗಿರುವ ಹೊಸ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ.
ಇನ್ನು ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡು, ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಡುತ್ತಿರುವುದಕ್ಕೆ ಮೇಘಾ ಶೆಟ್ಟಿ ಕೂಡ ತುಂಬ ಎಕ್ಸೆ„ಟ್ ಆಗಿದ್ದಾರೆ. “ಗಣೇಶ್ ಅವರ ಸಿನಿಮಾಗಳನ್ನು ನೋಡಿದ್ದೆ. ಆದರೆ ಅವರ ಜೊತೆ ಅಭಿನಯಿಸುವ ಅವಕಾಶ ಮುಂದೊಂದು ದಿನ ಸಿಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. “ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಅಂಥದ್ದೊಂದು ಅವಕಾಶ ಸಿಕ್ಕಿದೆ’ ಎನ್ನುತ್ತಾರೆ.