ಹೊಸದಿಲ್ಲಿ: ಲೋಕಸಭೆಗೆ ಚುನಾವಣೆ ನಡೆಯಲು ಇನ್ನೇನು ಏಳು ತಿಂಗಳಷ್ಟೇ ಉಳಿದಿದ್ದು, ಅದಕ್ಕೆ ಪೂರಕವಾಗಿ ಬಿಜೆಪಿ ವಿರುದ್ಧ ವಿಪಕ್ಷಗಳ ಮಹಾ ಮೈತ್ರಿಕೂಟ ರಚನೆಯ ಪ್ರಯತ್ನ ಪುಟಿದೇಳುವ ಸಾಧ್ಯತೆ ಗೋಚರಿಸಿದೆ. ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ| ಫಾರೂಕ್ ಅಬ್ದುಲ್ಲಾರನ್ನು ಭೇಟಿಯಾಗಿದ್ದಾರೆ.
ಶೀಘ್ರವೇ ಹೊಸದಿಲ್ಲಿಯಲ್ಲಿ ಬಿಜೆಪಿಯೇತರ ಪಕ್ಷಗಳು ಮತ್ತೂಮ್ಮೆ ಭೇಟಿಯಾಗಿ ಸಾಮಾನ್ಯ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದಿದ್ದಾರೆ ನಾಯ್ಡು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸಿದ ಬಳಿಕ ಇಬ್ಬರು ನಾಯಕರೂ ಸುದ್ದಿಗೋಷ್ಠಿ ನಡೆಸಿ, ‘ಪ್ರಜಾಪ್ರಭುತ್ವದ ಅನಿವಾರ್ಯತೆ’ಯಿಂದಾಗಿ ವಿಪಕ್ಷಗಳು ಒಗ್ಗೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ‘ನಾವು ರಾಷ್ಟ್ರವನ್ನು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ. ದೇಶವನ್ನು ರಕ್ಷಿಸಲೋಸುಗ ಒಟ್ಟಾಗುತ್ತಿದ್ದೇವೆ’ ಎಂದಿದ್ದಾರೆ.
ರಾಹುಲ್ ಗಾಂಧಿ ಮಾತನಾಡಿ, ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಗ್ಗೂಡಲಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಈ ನಡೆ ಅಗತ್ಯವಾಗಿದೆ ಎಂದರು. ರಫೇಲ್ ಡೀಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮೈತ್ರಿಕೂಟ ಹೋರಾಡಲಿದೆ ಎಂದಿದ್ದಾರೆ. ತನಿಖೆ ನಡೆಸುವ ಸಂಸ್ಥೆಗಳನ್ನೇ ನಾಶ ಮಾಡಲೆತ್ನಿಸಲಾಗುತ್ತದೆ ಎಂದು ರಾಹುಲ್ ಪರೋಕ್ಷವಾಗಿ ಸಿಬಿಐ ವಿವಾದವನ್ನು ಪ್ರಸ್ತಾಪ ಮಾಡಿದ್ದಾರೆ.
ಹಿಂದಿನದ್ದು ಬೇಡ: ಹಿಂದಿನ ದಿನಗಳಲ್ಲಿ ಏನಾಯಿತು ಎನ್ನುವುದು ಮುಖ್ಯವಲ್ಲ. ಆ ಕಹಿ ಘಟನೆಗಳನ್ನು ಮರೆತು, ನಾವು ಹಾಲಿ ಮತ್ತು ಭವಿಷ್ಯದ ದಿನಗಳ ಬಗ್ಗೆ ಮಾತನಾಡಲಿದ್ದೇವೆ. ಸದ್ಯ ದೇಶ ಎದುರಿಸುತ್ತಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಅದಕ್ಕೂಂದು ಸುಸೂತ್ರ ದಿಕ್ಸೂಚಿ ನೀಡುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಘಳಿಗೆ ಎಂದಿದ್ದಾರೆ ಕಾಂಗ್ರೆಸ್ ಅಧ್ಯಕ್ಷ.
ರಫೇಲ್ ವಿವಾದದ ಬಗ್ಗೆ ಇತರ ವಿಪಕ್ಷಗಳು ಯಾಕೆ ಕಾಂಗ್ರೆಸ್‌ಗೆ ಬೆಂಬಲ ನೀಡಲಿಲ್ಲ ಎಂಬ ಪ್ರಶ್ನೆಗೆ, “ಅದಕ್ಕೆ ನಾಯ್ಡು ಉತ್ತರಿಸಲಿದ್ದಾರೆ’ ಎಂದು ರಾಹುಲ್ ಹೇಳಿದರು. “ವಿವಿಧ ಸಂಸ್ಥೆಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವಿದೆ. ಅದಕ್ಕಾಗಿಯೇ ರಾಹುಲ್‌ಜಿ ಹೋರಾಡುತ್ತಿದ್ದಾರೆ’ ಎಂದರು ನಾಯ್ಡು. ಆರ್‌ಬಿಐ, ಸಿಬಿಐ, ಇ.ಡಿ., ಆದಾಯ ತೆರಿಗೆ ಇಲಾಖೆ, ಸುಪ್ರೀಂಕೋರ್ಟನ್ನು ನಾಶಗೊಳಿಸಲಾಗುತ್ತಿದೆ ಎಂದು ನಾಯ್ಡು ದೂರಿದರು. ಈ ವರ್ಷದ ಮೇನಲ್ಲಿ ಬೆಂಗಳೂರಿನಲ್ಲಿ ಎಚ್. ಡಿ. ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ವೇಳೆ ಆಂಧ್ರಪ್ರದೇಶ ಸಿಎಂ ರಾಹುಲ್ ಜತೆಗೆ ವೇದಿಕೆ ಹಂಚಿಕೊಂಡಿದ್ದರು. ಬಳಿಕ ಇದು ಎರಡನೇ ದೊಡ್ಡ ಭೇಟಿಯಾಗಿದೆ.
ಪವಾರ್ ಜತೆ ಭೇಟಿ: ರಾಹುಲ್ ಭೇಟಿಗೆ ಮುನ್ನ ನಾಯ್ಡು ಅವರು ಎನ್‌ಸಿಪಿ ನಾಯಕ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾರನ್ನು ಭೇಟಿ ಯಾಗಿದ್ದರು. ಜತೆಗೆ ಜಂಟಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ಪವಾರ್ ಮಾತನಾಡಿದ ಬಳಿಕ ಫಾರೂಕ್ ಅಬ್ದುಲ್ಲಾ “ನನಗೆ ಬೇರೆ ಕೆಲಸವಿದೆ’ ಎಂದು ಹೇಳಿ ತೆರಳಿದ್ದು ಕುತೂಹಲಕ್ಕೆ ಕಾರಣವಾಯಿತು.
ಬಿಜೆಪಿ ವಿರುದ್ಧದ ಹೋರಾಟಕ್ಕಾಗಿ ವಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ನಾಯ್ಡು ಪ್ರಯತ್ನವೇ ಪ್ರಶ್ನಾರ್ಹ. 2002ರಲ್ಲಿ ಮತ್ತು ತೀರಾ ಇತ್ತೀಚಿನ ದಿನಗಳವರೆಗೆ ಅವರು ಕೇಂದ್ರ ಸರಕಾರಕ್ಕೆ ಬೆಂಬಲ ನೀಡುತ್ತಿದ್ದರು.
— ಅಸಾದುದ್ದೀನ್ ಒವೈಸಿ, ಎಂಐಎಂ ಮುಖಂಡ