Advertisement

ಮಾರುಕಟ್ಟೆಗೆ ಮೇಯರ್‌ ಭೇಟಿ

12:28 PM Sep 30, 2018 | |

ಬೆಂಗಳೂರು: ಮೇಯರ್‌ ಆಗಿ ಆಯ್ಕೆಯಾದ ಮರುದಿನವೇ ಪಾರಂಪರಿಕ ಕೆ.ಆರ್‌.ಮಾರುಕಟ್ಟೆಗೆ ಭೇಟಿ ನೀಡಿದ ಗಂಗಾಂಬಿಕೆ, ಮಾರುಕಟ್ಟೆಯಲ್ಲಿ ಸ್ವತ್ಛತೆ ಕಾಪಾಡದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ಶನಿವಾರ ಮಾರುಕಟ್ಟೆಗೆ ಭೇಟಿ ನೀಡಿದ್ದ ಮೇಯರ್‌ ಗಂಗಾಂಬಿಕೆ, ವ್ಯಾಪಾರಿಗಳು ಪ್ಲಾಸ್ಟಿಕ್‌ ಬ್ಯಾಗ್‌ ಬಳಸುತ್ತಿರುವುದನ್ನು ಗಮಿಸಿ, ವ್ಯಾಪಾರಿಗಳು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಇನ್ನು ಮುಂದೆ ಪ್ಲಾಸ್ಟಿಕ್‌ ಬದಲಿಗೆ ಪೇಪರ್‌ ಅಥವಾ ಬಟ್ಟೆ ಬ್ಯಾಗ್‌ಳನ್ನೇ ಬಳಸುವಂತೆ ವ್ಯಾಪಾರಿಗಳಿಗೆ ತಾಕೀತು ಮಾಡಿದರು.

ಇದೇ ವೇಳೆ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು, ನಗರದ ಪ್ರಮುಖ ಮಾರುಕಟ್ಟೆಗಳು ಸ್ವತ್ಛವಾಗಿದ್ದರೆ ಮಾತ್ರ ಬೆಂಗಳೂರಿಗೆ ಉತ್ತಮ ಹೆಸರು ಬರಲು ಸಾಧ್ಯ. ಹೀಗಾಗಿ ವ್ಯಾಪಾರಿಗಳು ನಿಗದಿತ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಮಾರುಕಟ್ಟೆಗಳನ್ನು ಸ್ವತ್ಛವಾಗಿ ಇರಿಸಿಕೊಳ್ಳಬೇಕು ಎಂದು ಹೇಳಿದರು. 

ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಯಾರಾದರೂ ಪರಿಶೀಲನೆ ಬರುವಾಗ ಮಾತ್ರ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡುತ್ತಾರೆ ಎಂದು ವ್ಯಾಪಾರಿಗಳು ಈ ವೇಳೆ ದೂರಿದರು. ಇದರಿಂದ ಕೋಪಗೊಂಡ ಮೇಯರ್‌, ಅಧಿಕಾರಿಗಳು ಕೇವಲ ಸ್ವತ್ಛತೆ ಕಾಪಾಡುವುದಲ್ಲ, ನಿತ್ಯ ಪಾಲಿಕೆ ಸಿಬ್ಬಂದಿಯೊಂದಿಗೆ ಮಾರುಕಟ್ಟೆಗಳ ಸ್ವತ್ಛತೆಯಲ್ಲಿ ತೊಡಗಬೇಕು ಎಂದು ಸೂಚಿಸಿದರು.

ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. 

Advertisement

ಸ್ವತ್ಛತೆ ಮೊದಲ ಆದ್ಯತೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ನಗರದ ಸೌಂದರ್ಯ ಹಾಗೂ ಸ್ವತ್ಛತೆ ನನ್ನ ಮೊದಲ ಆದ್ಯತೆ. ಮಾರುಕಟ್ಟೆಗಳು, ರಸ್ತೆಗಳು ಸ್ವತ್ಛವಾಗಿದ್ದರೆ ಮಾತ್ರ ನಗರ ಸುಂದರವಾಗಿ ಕಾಣಲು ಸಾಧ್ಯ. ಹೀಗಾಗಿ ಕೆ.ಆರ್‌.ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ವತ್ಛತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರದಲ್ಲಿರುವ ಎಲ್ಲ ಶೌಚಾಲಯಗಳು ದುಸ್ಥಿತಿಯಲ್ಲಿರುವ ಬಗ್ಗೆ ಹಾಗೂ ಕೆಲವೆಡೆ ಶೌಚಾಲಯಗಳನ್ನು ಮುಚ್ಚಿರುವ ಕುರಿತು ದೂರುಗಳು ಬಂದಿವೆ. ಕೂಡಲೇ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಿಂದೆ ಮೇಯರ್‌ ಆಗಿದ್ದವರು ಸಹ ಮಾರುಕಟ್ಟೆಗಳ ಸ್ವತ್ಛತೆಗೆ ಆದ್ಯತೆ ನೀಡಿದ್ದರು. ಅದೇ ರೀತಿ ನಾನು ಸಹ ಮಾರುಕಟ್ಟೆ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು, ಮಾರುಕಟ್ಟೆಗಳು ಸ್ವತ್ಛ ಹಾಗೂ ಸುಂದರವಾಗಿರುವಂತೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳು ನೋಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಪರಿಶೀಲನೆ ವೇಳೆ ಉಪಮೇಯರ್‌ ರಮೀಳಾ ಉಮಾಶಂಕರ್‌, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌, ಮಾರುಕಟ್ಟೆ ಉಪ ಆಯುಕ್ತ ರವೀಂದ್ರ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next