ನವದೆಹಲಿ: ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆಯರ 2023ರ ವಾರ್ಷಿಕ ಪಟ್ಟಿಯನ್ನು ಪೋರ್ಬ್ಸ್ ಬ್ಯುಸಿನೆಸ್ ಮ್ಯಾಗಜೀನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂಓದಿ:Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್ ಬೀಜಗಳ ಪ್ರಯೋಜನವೇನು?
ಈ ನಾಲ್ವರು ಮಹಿಳೆಯರು ಭಾರತ ಮಾತ್ರವಲ್ಲದೇ, ಜಾಗತಿಕವಾಗಿಯೂ ಪ್ರಭಾವ ಶಾಲಿಯಾಗಿದ್ದಾರೆ ಎಂದು ಪೋರ್ಬ್ಸ್ ಬಣ್ಣಿಸಿದೆ. ಪೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ 32ನೇ ಸ್ಥಾನ ಪಡೆದಿದ್ದು, ಎಚ್ ಸಿಎಲ್ ಟೆಕ್ನಾಲಜೀಸ್ ನ ರೋಶ್ನಿ ನಾಡಾರ್ ಮಲ್ಹೋತ್ರಾ 60ನೇ ಸ್ಥಾನ ಪಡೆದಿದ್ದಾರೆ.
ಇನ್ನುಳಿದಂತೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷೆ ಸೋಮ ಮಂಡಲ್ 70ನೇ Rank ಪಡೆದಿದ್ದು, ಬೆಂಗಳೂರು ಬಯೋಕಾನ್ ಲಿಮಿಟೆಡ್ ಸ್ಥಾಪಕ ಅಧ್ಯಕ್ಷೆ ಕಿರಣ್ ಮಜೂಂದಾರ್ ಶಾ 76ನೇ ಸ್ಥಾನ ಪಡೆದಿದ್ದಾರೆ.
ನಿರ್ಮಲಾ ಸೀತಾರಾಮನ್ (64ವರ್ಷ) ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿಯಾಗಿದ್ದು, 2019ರಿಂದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರಿಂದ 2019ರವರೆಗೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿದ್ದರು. ಈ ಮೂಲಕ ಇಂದಿರಾ ಗಾಂಧಿ ನಂತರ ದೇಶದ 2ನೇ ಮಹಿಳಾ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2022ರಲ್ಲಿ ನಿರ್ಮಲಾ ಅವರು ಜಗತ್ತಿನ 36ನೇ ಪ್ರಭಾವಿಶಾಲಿ ಮಹಿಳೆಯಾಗಿದ್ದು, 2023ರಲ್ಲಿ 32ನೇ ಸ್ಥಾನ ಪಡೆದಿದ್ದಾರೆ.
ರೋಶ್ನಿ ನಾಡಾರ್ ಮಲ್ಹೋತ್ರಾ(42ವರ್ಷ) ಎಚ್ ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷೆಯಾಗಿರುವ ಇವರು ಭಾರತದ ಶ್ರೀಮಂತ ಉದ್ಯಮಿ ಹಾಗೂ ದಾನಿಯಾಗಿದ್ದಾರೆ. ಭಾರತದ ಐಟಿ ಕಂಪನಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಮಲ್ಹೋತ್ರಾ 2019ರಲ್ಲಿ ಪೋರ್ಬ್ಸ್ ಪಟ್ಟಿಯಲ್ಲಿ 54ನೇ ಸ್ಥಾನ, 2020ರಲ್ಲಿ 55ನೇ ಸ್ಥಾನ ಹಾಗೂ 2023ರಲ್ಲಿ 60ನೇ ಸ್ಥಾನ ಪಡೆದಿದ್ದಾರೆ.
ಸೋಮ ಮಂಡಲ್ (60ವರ್ಷ) ಪ್ರಸ್ತುತ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರ ಜನವರಿಯಲ್ಲಿ ಅಧ್ಯಕ್ಷೆ ಹುದ್ದೆಗೇರುವ ಮೂಲಕ ಕಂಪನಿಯ ಇತಿಹಾಸದಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭುವನೇಶ್ವರದಲ್ಲಿ ಜನಿಸಿರುವ ಮಂಡಲ್, 1984ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಕೈಗಾರಿಕಾ ಕ್ಷೇತ್ರದಲ್ಲಿ 35 ವರ್ಷಕ್ಕೂ ಅಧಿಕ ಅನುಭವ ಹೊಂದಿದ್ದಾರೆ.
ಕಿರಣ್ ಮಜುಂದಾರ್ ಶಾ (70ವರ್ಷ) ಬಯೋಕಾನ್ ಲಿಮಿಟೆಡ್ ನ ಮುಖ್ಯಸ್ಥರಾಗಿದ್ದು, ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಮಾಜಿ ಅಧ್ಯಕ್ಷರಾಗಿದ್ದಾರೆ. ವಿಜ್ಞಾನ ಮತ್ತು ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಹಲವಾರು ಪ್ರಶಸ್ತಿಗೆ ಶಾ ಭಾಜನರಾಗಿದ್ದಾರೆ.