ಸಸಿಹಿತ್ಲು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳೂರಿಗೆ ಭೇಟಿ ನೀಡಲಿದ್ದು, ಪ್ರಸ್ತುತ ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಸಮಿತಿಯ ವತಿಯಿಂದ ಕಾರ್ಯಕರ್ತರು ಗರಿಷ್ಠ ಮಟ್ಟದಲ್ಲಿ ಭಾಗವಹಿಸಲು ಉದ್ದೇಶಿಸಲಾಗಿದೆ ಎಂದು ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು ಹೇಳಿದರು.
ಬಿಜೆಪಿಯ ಹಳೆಯಂಗಡಿ ಗ್ರಾಮ ಸಮಿತಿಯ ವತಿಯಿಂದ ಸಸಿಹಿತ್ಲುವಿನಲ್ಲಿ ನಡೆದ ಕಾರ್ಯಕರ್ತ ಪ್ರಮುಖರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಸವಾಲಾಗಿದ್ದು, ಕರಾವಳಿ ಭಾಗದಲ್ಲಿ ರಾಜ್ಯ ಸರಕಾರದ ಆಡಳಿತ ವಿರೋಧಿ ಅಲೆಯು ಇದ್ದು, ಇದನ್ನು ಮತವಾಗಿ ಪರಿವರ್ತನೆ ಮಾಡಲು ಎಲ್ಲರೂ ಶ್ರಮಿಸಬೇಕು. ಮೂಡಬಿದಿರೆಯಲ್ಲಿ ಅ.15ರಂದು ನಡೆಯುವ ಸಮಾವೇಶ, ಮಂಗಳೂರಿನಲ್ಲಿ ನಡೆಯುವ ಚುನಾವಣಾ ಪೂರ್ವ ಕಾರ್ಯಕ್ರಮ ಹೀಗೆ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮುಕ್ತವಾಗಿ ಭಾಗವಹಿಸಬೇಕು ಎಂದರು.
ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲು ಮಾತನಾಡಿ, `ಪಕ್ಷದ ಚಟುವಟಿಕೆಯು ತೀವ್ರವಾಗಿದ್ದು, ಕಾರ್ಯಕರ್ತರು ಸಹ ಚುನಾವಣೆಯವರೆಗೆ ವಿರಮಿಸದೇ, ನಿರಂತರವಾಗಿ ಗ್ರಾಮಸ್ಥರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು. ಸ್ಥಳೀಯ ಸಮಸ್ಯೆಗಳನ್ನು ಸಹ ಈ ಸಂದರ್ಭದಲ್ಲಿ ಪರಿಹರಿಸಲು ಪ್ರಯತ್ನ ನಡೆಸಿ, ವಿರೋಧ ಪಕ್ಷದ ಸುಳ್ಳು ಭರವಸೆ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿರಿ’ ಎಂದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಮಾತನಾಡಿ, ಸಸಿಹಿತ್ಲು ವಿನಲ್ಲಿನ ಕೆಲವೊಂದು ಗ್ರಾಮದ ಸಮಸ್ಯೆಗಳನ್ನು ಪಕ್ಷದ ಜನಪ್ರತಿನಿಧಿಗಳು ಹಾಗೂ ನಾಯಕರು ಪರಿಹರಿಸಲು ಪ್ರಯತ್ನಿಸಬೇಕು ಎಂದರು. ಪಕ್ಷದ ಸ್ಥಳೀಯ ಪ್ರಮುಖರಾದ ಅನಿಲ್, ಆನಂದ್, ನೂತನ್ ಸಿರಿಯನ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ಸ್ವಾಗತಿಸಿ, ನಿರೂಪಿಸಿದರು.