ಬೆಂಗಳೂರು: ಬಸ್‌ಪಾಸ್ ವಿಚಾರದಲ್ಲಿ ನಡೆದ ಗಲಾಟೆ ಕುರಿತು ವಿಚಾರಣೆ ನಡೆಸುತ್ತಿದ್ದ ಪೀಣ್ಯ ಠಾಣೆ ಪಿಎಸ್‌ಐ ಸಿದ್ದು ಹೂಗಾರ ಮೇಲೆ ಹಲ್ಲೆ ನಡೆಸಿದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ನಿವಾಸಿ ಮೌನೇಶ್(20) ಬಂಧನಕ್ಕೊಳಗಾದ ವಿದ್ಯಾರ್ಥಿ. ಯಶವಂತಪುರ ಬಳಿಯ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೌನೇಶ್, ಬಸ್ ನಿರ್ವಾಹಕನ ಮೇಲೆ ಹಲ್ಲೆನಡೆಸಿದ್ದ. ಈ ಸಂಬಂಧ ಬಂದ ದೂರಿನ ಮೇರೆಗೆ ಮೌನೇಶ್‌ನನ್ನು ಠಾಣೆಗೆ ಕರೆತಂದು ವಿಚಾರಣೆ ಸಂದರ್ಭದಲ್ಲಿ ಪಿಎಸ್‌ಐ ಕಪಾಳಕ್ಕೆ ಹೊಡೆದು, ಮರ್ಮಾಂಗಕ್ಕೂ ಒದ್ದಿದ್ದ. ಕೃತ್ಯದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಮೌನೇಶ್ ಪೋಷಕರು, ಮಗ ಯಾವುದೇ ತಪ್ಪು ಮಾಡಿಲ್ಲ. ಕಾಲೇಜಿಗೆ ಹೋಗುತ್ತಿದ್ದ ವೇಳೆ ಬಸ್‌ನ ನಿರ್ವಾಹಕರೇ ಗಲಾಟೆ ಮಾಡಿದ್ದಾರೆ. ಠಾಣೆಗೆ ಕರೆದೊಯ್ದು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ಬುಧವಾರ ಬೆಳಗ್ಗೆ ಕಾಲೇಜಿಗೆ ಹೋಗಲು ಯಲಹಂಕದಿಂದ ಜಾಲಹಳ್ಳಿಗೆ ಹೊರಟಿದ್ದ ಬಿಎಂಟಿಸಿ ಬಸ್ ಹತ್ತಿದ್ದ. ನಿರ್ವಾಹಕ ಅಶೋಕ ಟಿಕೆಟ್ ಪಡೆಯುವಂತೆ ಹೇಳಿದ್ದ. ವಿದ್ಯಾರ್ಥಿ ಪಾಸ್ ಇರುವುದಾಗಿ ಮೌನೇಶ್ ತಿಳಿಸಿದ್ದ. ಪಾಸ್ ಹಾಗೂ ಕಾಲೇಜು ಗುರುತಿನ ಚೀಟಿ ತೋರಿಸುವಂತೆ ನಿರ್ವಾಹಕ ಒತ್ತಾಯಿಸಿದ್ದ. ಬಸ್ ಪಾಸ್ ಮಾತ್ರ ತೋರಿಸಿದ್ದ ಮೌನೇಶ್, ಕಾಲೇಜು ಗುರುತಿನ ಚೀಟಿ ತೋರಿಸಲು ನಿರಾಕರಿಸಿದ್ದ. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಅದರಿಂದ ಕೋಪಗೊಂಡ ಮೌನೇಶ್, ನಿರ್ವಾಹಕ ಅಶೋಕ್‌ಗೆ ಹೊಡೆದಿದ್ದಾನೆ. ಹೀಗಾಗಿ ಚಾಲಕ ಬಸ್ ಸಮೇತ ಪೀಣ್ಯ ಪೊಲೀಸ್ ಠಾಣೆಗೆ ಕರೆತಂದಿದ್ದರು ಎಂದು ಪೊಲೀಸರು ಹೇಳಿದರು.
ಪಿಎಸ್‌ಐ ಮೇಲೆ ಹಲ್ಲೆ: ಠಾಣೆಗೆ ಕರೆತಂದ ಮೌನೇಶ್‌ನನ್ನು ಪಿಎಸ್‌ಐ ಸಿದ್ದ ಹೂಗಾರ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಬಸ್ ಪಾಸ್ ತೋರಿಸಿದ್ದಾನೆ. ಆದರೆ, ಕಾಲೇಜಿನ ಗುರುತಿನ ಚೀಟಿ ಏಕೆ ತೋರಿಸಬೇಕು? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಪಿಎಸ್‌ಐ ಎದುರು ಮಾತನಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಆರೋಪಿ, ಪಿಎಸ್‌ಐ ಕಪಾಳಕ್ಕೆ ಹೊಡೆದು, ಮರ್ಮಾಂಗಕ್ಕೂ ಒದ್ದಿದ್ದ. ಬಳಿಕ ಠಾಣೆಯಲ್ಲಿದ್ದ ಸಿಬ್ಬಂದಿ ಆರೋಪಿ ಮೌನೇಶ್‌ನನ್ನು ಬಂಧಿಸಿ, ಸೇಲ್‌ಗೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.