ಶಿವಮೊಗ್ಗ: ಪತ್ರಿಕೋದ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಮಾಧ್ಯಮ ಸಂಸ್ಥೆಗಳೇ ನಿಜವಾದ ವಿಶ್ವವಿದ್ಯಾಲಯಗಳು. ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮದ ಮೂಲಭೂತ ಅಂಶಗಳನ್ನು ತಿಳಿದುಕೊಂಡರೆ, ಅದರ ಮುಂದಿನ ಅನ್ವಯಿಕ ಭಾಗವನ್ನು ನಿಜವಾಗಿ ಕಲಿಯುವುದು ಮಾಧ್ಯಮ ಸಂಸ್ಥೆಗಳಲ್ಲಿ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ‘ಪ್ರಸ್ತುತ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಎದುರಿಸುತ್ತಿರುವ ಸವಾಲು’ ಎಂಬ ವಿಷಯದ ಕುರಿತು ಮಾತನಾಡಿದರು.
ಸುಮಾರು 50 ವರ್ಷಗಳ ಹಿಂದೆ ಚಿಂತಕ ನೋಮ್ ಚೋಮಸೈ ಹೇಳಿರುವ ಜನಮತದ ಉತ್ಪಾದನೆ ಮಾಡಲಾಗುತ್ತದೆ ಎಂಬ ಮಾತು ಇಂದಿಗೂ ಸತ್ಯವಾಗಿದ್ದು, ಅವತ್ತಿಗಿಂತ ಇವತ್ತು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇಂದು ಓದುಗರನ್ನು ಸರಕುಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅದರ ಲಾಭವನ್ನು ಮಾಧ್ಯಮ ಮಾಲೀಕರು ಮತ್ತು ಉದ್ಯಮಿಗಳು ಪಡೆಯುತ್ತಿದ್ದಾರೆ. ಪತ್ರಕರ್ತರ ಸ್ವತಂತ್ರ ಚಿಂತನೆಗೆ ಅವಕಾಶವಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾವಲುನಾಯಿಯಾಗಿ ಕಾರ್ಯ ನಿರ್ವಹಿಸಬೇಕಾದ ಪತ್ರಕರ್ತರು ಮುದ್ದಿನ ಮಡಿಲುನಾಯಿಯಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರಾಮಾಣಿಕ ಪತ್ರಕರ್ತರು ಎಷ್ಟೇ ಬಿರುಗಾಳಿ ಬಂದರೂ ಪುಟ್ಟ ಗರಿಕೆ ಹುಲ್ಲು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಂತೆ ಧ್ವನಿ ಎತ್ತುವ ಕೆಲಸ ಮಾಡಬೇಕು. ಅಂತಹ ಪತ್ರಕರ್ತರಿಗೆ ಅನೇಕ ಪರ್ಯಾಯ ಮಾರ್ಗಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು ಎಂದು ಉದಾಹರಣೆಗಳ ಮೂಲಕ ವಿವರಿಸಿದರು.
ಪತ್ರಕರ್ತರಾಗಬೇಕೆಂದು ಬಯಸುವ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಸಾಹಿತ್ಯದ ಬಗ್ಗೆ ಹೆಚ್ಚು ಓದಿಕೊಳ್ಳಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ಆಗ ಮಾತ್ರ ಪತ್ರಕರ್ತರಾಗಿ ಬೆಳೆಯಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ನೋರ್ವ ಹಿರಿಯ ಪತ್ರಕರ್ತ ಕೆ.ಜಿ. ವಾಸುಕಿ ಅವರು, ಹಿಂದೆ ಒಂದು ಪತ್ರಿಕೆ ಇದ್ದರೆ ಅದರಲ್ಲಿ ಸುದ್ದಿ ಮತ್ತು ಇತರ ವಿಷಯಗಳನ್ನು ಪತ್ರಕರ್ತರು ಬರೆಯುತ್ತಿದ್ದರು. ಆದರೆ ಇಂದು ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ವೇದಿಕೆ ಮಾತ್ರ ಒದಗಿಸುತ್ತವೆ. ಅದರಲ್ಲಿ ವಿಷಯಗಳನ್ನು ತುಂಬಿಸುವ ಕೆಲಸವನ್ನು ಗ್ರಾಹಕರು ಮಾಡುತ್ತಾರೆ. ಇದರಿಂದ ಮಾಧ್ಯಮಗಳ ಕೆಲಸ ಸುಲಭವಾಗಿದೆ ಎಂದು ಹೇಳಿದರು.
ವಿಭಾಗದ ಪ್ರಾಧ್ಯಾಪಕರಾದ ಪ್ರೊ| ಡಿ.ಎಸ್. ಪೂರ್ಣಾನಂದ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಡಾ| ಸತೀಶ್ ಕುಮಾರ್ ಅಂಡಿಂಜೆ ವಂದಿಸಿದರು. ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.