Advertisement
ಆದರೆ ಇಲ್ಲಿ ಸರ್ಕಾರಕ್ಕೆ ಉಂಟಾಗುವ ನಷ್ಟವನ್ನು ಸರಿದೂಗಿಸಿಕೊಳ್ಳಲು 2 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರು ಹೆಚ್ಚುವರಿ ಸರ್ಚಾರ್ಜ್ ತೆರಬೇಕಾಗುತ್ತದೆ. 2-5 ಕೋಟಿ ರೂ. ವಹಿವಾಟು ಹೊಂದಿರುವವರು ಶೇ. 25 ರಷ್ಟು ಸರ್ಚಾರ್ಜ್ ಪಾವತಿ ಮಾಡಬೇಕಾಗುತ್ತದೆ.
Related Articles
Advertisement
ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರಕ್ಕೆ: ನೌಕರ ವರ್ಗದವರು ಹಾಗೂ ಪಿಂಚಣಿದಾರರಿಗೆ ಒದಗಿಸಲಾಗುತ್ತಿರುವ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 40 ಸಾವಿರ ರೂ. ಇಂದ 50 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
ತೆರಿಗೆ ಫೈಲಿಂಗ್‌ಗೆ ಪ್ಯಾನ್ ಬೇಕಿಲ್ಲ: ಆದಾಯ ತೆರಿಗೆ ಪಾವತಿ ಮಾಡಲು ಈವರೆಗೆ ಪ್ಯಾನ್ ಕಡ್ಡಾಯವಾಗಿತ್ತು. ಆದರೆ ಈ ನಿಯಮವನ್ನು ಈ ಬಾರಿಯ ಬಜೆಟ್‌ನಲ್ಲಿ ತೆಗೆದುಹಾಕಲಾಗಿದೆ. ಬದಲಿಗೆ ಆಧಾರ್ ಇದ್ದರೂ ಸಾಕು ಎಂಬ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲಾಗಿದ್ದು, ಆಧಾರ್ ಬಳಸಿಯೂ ಆದಾಯ ತೆರಿಗೆ ಪಾವತಿಸಬಹುದು.ಆದರೆ ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಿದವರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ. ಸದ್ಯ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ, ಪ್ಯಾನ್ ಕಾರ್ಡ್ ಅನ್ನು ಅಮಾನ್ಯಗೊಳಿಸಲಾಗುತ್ತಿದೆ. ಆದರೆ ಈಗಾಗಲೇ ಪ್ಯಾನ್ ಕಾರ್ಡ್ ಬಳಸಿ ಮಾಡಿದ ವಹಿವಾಟುಗಳನ್ನು ರಕ್ಷಿಸುವ ದೃಷ್ಟಿಯಿಂದ, ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಲಾಗಿದೆ. ರಿಟರ್ನ್ ಫೈಲಿಂಗ್ ಕಡ್ಡಾಯ: ಒಂದು ವಿತ್ತ ವರ್ಷದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಡೆಪಾಸಿಟ್ ಮಾಡಿದ ಎಲ್ಲ ವ್ಯಕ್ತಿಗಳೂ ರಿಟರ್ನ್ ಫೈಲಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲ, ವಿದೇಶ ಪ್ರಯಾಣದಲ್ಲಿ 2 ಲಕ್ಷ ರೂ. ವೆಚ್ಚ ಮಾಡಿದರೆ ಅಥವಾ 1 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಮಾಡಿದರೆ ಕೂಡ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿರುತ್ತದೆ. ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ: ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಹತ್ವದ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲು ನಿರ್ಧರಿಸಿದೆ. 1.5 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಇದು ಸಾಲದ ಮೇಲಿನ ಬಡ್ಡಿಗೆ ಮಾತ್ರ ಅನ್ವಯಿಸಲಿದ್ದು, ಒಟ್ಟು ಸಾಲದ ಮೇಲೆ 2.5 ಲಕ್ಷ ರೂ.ವರೆಗೂ ವಿನಾಯಿತಿ ಪಡೆಯಬಹುದಾಗಿದೆ. ಇನ್ನೊಂದೆಡೆ ಬ್ಯಾಟರಿಗಳನ್ನು ಉತ್ಪಾದಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಎನ್‌ಪಿಎಸ್‌ಗೆ ಇನ್ನು ತೆರಿಗೆ ಇಲ್ಲ: ಕಳೆದ ಡಿಸೆಂಬರ್‌ನಲ್ಲಿ ಸಂಪುಟ ಸಭೆಯಲ್ಲಿ ಘೋಷಣೆಯಾದಂತೆ ಎನ್‌ಪಿಎಸ್‌ನಿಂದ ಹಣ ಹಿಂಪಡೆಯುವುದರ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಸದ್ಯ ಎನ್‌ಪಿಎಸ್‌ನಿಂದ ಹಣ ಹಿಂಪಡೆಯುವಾಗ ಶೇ. 40 ರಷ್ಟು ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈಗ ಇದನ್ನು ಶೇ. 100 ಕ್ಕೆ ಏರಿಸಲಾಗಿದ್ದು, ಎನ್‌ಪಿಎಸ್‌ನಿಂದ ಹಣ ಹಿಂಪಡೆದರೆ ಯಾವುದೇ ಆದಾಯ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಕಾರ್ಪೊರೇಟ್ ವಲಯಕ್ಕೆ ನಿರಾಳ: ಉದ್ಯಮ ವಲಯದ ನಿರೀಕ್ಷೆಯಂತೆ ಕಾರ್ಪೊರೇಟ್ ತೆರಿಗೆಯನ್ನು ಶೇ. 30 ರಿಂದ ಶೇ. 25ಕ್ಕೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. 400ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಕಾರ್ಪೊರೇಟ್ ಕಂಪನಿಗಳಿಗೆ ಇದು ಅನ್ವಯವಾಗುತ್ತದೆ. ಕಳೆದ ವರ್ಷ 250 ಕೋಟಿ ರೂ. ವಹಿವಾಟು ಹೊಂದಿರುವ ಕಾರ್ಪೊರೇಟ್ ಕಂಪನಿಗಳಿಗೆ ಆದಾಯ ತೆರಿಗೆಯನ್ನು ಶೇ. 25 ಕ್ಕೆ ಇಳಿಕೆ ಮಾಡಲಾಗಿತ್ತು. ಸಣ್ಣ ಉದ್ಯಮಗಳಿಗೆ ಪೂರಕ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಖಾಸಗಿ ಮತ್ತು ಸರ್ಕಾರಿ ಕಂಪನಿಗಳೆರಡೂ ನಿವ್ವಳ ಆದಾಯದ ಮೇಲೆ ತೆರಿಗೆ ಪಾವತಿ ಮಾಡಬೇಕಿದೆ. ಈ ಹಿಂದೆ 500 ಕೋಟಿ ರೂ.ವರೆಗೆ ಆದಾಯ ಹೊಂದಿರುವ ಕಂಪನಿಗಳು ಶೇ. 30ರ ತೆರಿಗೆ ಪಾವತಿ ಮಾಡಬೇಕಿತ್ತು. ಈಗ 400 ಕೋಟಿ ರೂ.ವರೆಗೆ ಆದಾಯ ಹೊಂದಿರುವ ಕಂಪನಿಗಳು ಶೇ. 25 ಹಾಗೂ 500 ಕೋಟಿ ರೂ. ವಹಿವಾಟು ಹೊಂದಿರುವ ಕಂಪನಿಗಳು ಶೇ. 30 ಆದಾಯ ತೆರಿಗೆ ಪಾವತಿ ಮಾಡಬೇಕಿದೆ. ಹೆಚ್ಚು ಕ್ಯಾಶ್‌ಗೆ 2% ತೆರಿಗೆ: ದೇಶದಲ್ಲಿ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಕ್ಕಾಗಿ, 1 ಕೋಟಿ ರೂ.ಗಿಂತ ಹೆಚ್ಚು ನಗದು ಹಿಂಪಡೆಯುವ ವ್ಯಕ್ತಿಗೆ ಶೇ. 2 ಟಿಡಿಎಸ್ ವಿಧಿಸಲು ನಿರ್ಧರಿಸಲಾಗಿದೆ. ಆದರೆ ಕೆಲವು ಉದ್ಯಮಗಳಿಗೆ ಹೆಚ್ಚಿನ ಪ್ರಮಾಣದ ನಗದು ವಹಿವಾಟು ನಡೆಸುವುದು ಅಗತ್ಯವಾಗಿದ್ದು, ಇವುಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಯಾವ ಉದ್ಯಮಗಳಿಗೆ ಇದರಿಂದ ವಿನಾಯಿತಿ ನೀಡಲಾಗುತ್ತದೆ ಎಂಬುದನ್ನು ಆರ್‌ಬಿಐ ಸಲಹೆ ಪಡೆದು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಪ್ರಕಟಣೆ ಹೊರಡಿಸಲಿದೆ. ಡಿಜಿಟಲ್ ವಹಿವಾಟು ಹೆಚ್ಚಳಕ್ಕೆ ನರೇಂದ್ರ ಮೋದಿ ಸರ್ಕಾರ ಕಳೆದ ಐದು ವರ್ಷದಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಈ ಕ್ರಮ ಈ ನಿಟ್ಟಿನಲ್ಲಿ ಮತ್ತೂಂದು ಮಹತ್ವದ ಹೆಜ್ಜೆಯಾಗಿದೆ.