ಹೊಸದಾದ ಕಚೇರಿಗೆ ಕೆಲಸಕ್ಕೆ ಸೇರಿದ್ದೆ. ಹಾಗಾಗಿ ಓಡಾಡುವ ದಾರಿಯೂ ಬದಲಾಯಿತು. ಬಸ್‌ಗಳೂ, ಕೆಲಸದ ಸಮಯವೂ ಬದಲಾಯಿತು. ಮಧ್ಯಾಹ್ನದ 2ರಿಂದ ರಾತ್ರಿ 10ರ ತನಕ ಕೆಲಸ ಮಾಡುತ್ತಿದ್ದ ನನಗೆ ಮುಂಜಾನೆ ತಡವಾಗಿ ಎದ್ದು ಅಭ್ಯಾಸ. ಈಗ ಜನರಲ್ ಶಿಫ್ಟ್ ಸಿಕ್ಕಿರುವುದರಿಂದ ಹೊಸ ಬದಲಾವಣೆ. ಆರಾಮವಾಗಿ ಮಧ್ಯಾಹ್ನ ಕುಳಿತು ಪ್ರಯಾಣಿಸುತ್ತಿದ್ದ ನನಗೀಗ ನೇಲುವ ಯೋಗ! ಹೌದು. ಅತ್ಯಂತ ರಶ್ ಇರುವಂತಹ ಬಸ್ಸುಗಳಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕು. “ಮತ್ತೂಂದು ಬಸ್ ಬರಲಿ, ಕಾಯುವೆ’ ಎನ್ನುವಂತಿಲ್ಲ. ಮಹಾನಗರಿಯ ಟ್ರಾಫಿಕ್‌ನಲ್ಲಿ 8 ಗಂಟೆಯ ಬಸ್ ಹಿಡಿದು 10 ಗಂಟೆಗೆ ಕಚೇರಿ ತಲುಪಿದರೆ ಅದೇ ಹೆಚ್ಚು.
ಅಂತೂ ಜನರಲ್ಶಿಫ್ಟ್ ಪ್ರಯಾಣದ ಮೂಲಕ ನನ್ನಂತೆಯೇ ಓಡಾಡುವ ಸಾಕಷ್ಟು ಜನರನ್ನು ದಿನನಿತ್ಯ ನೋಡುತ್ತೇನೆ. ಮಾಲ್‌ಗಳಲ್ಲಿ ಸೇಲ್ಸ…ಗರ್ಲ್ಸ್ ಆಗಿ ಕೆಲಸ ಮಾಡುವವರಿಂದ ಹಿಡಿದು, ಕಾಲೇಜು ಮಕ್ಕಳು, ಯೋಗ, ಧ್ಯಾನ, ತರಬೇತಿಗೆ ತೆರಳುವ ಹೆಂಗಳೆಯರು, ಕಚೇರಿಗೆ ಹೋಗುವವರು ಸಾಕಷ್ಟು ಜನರಿರುತ್ತಾರೆ. ಒಂದೊಮ್ಮೆ ಬಸ್‌ಗಾಗಿ ಕಾಯುತ್ತಿದೆ. ಎಷ್ಟು ಹೊತ್ತಾದರೂ ಬಸ್ ಇಲ್ಲ. “37 ಬಸ್ ಹೋಯೆ¤àನಮ್ಮಾ’ ಎನ್ನುತ್ತಾ ವೃದ್ಧೆಯೊಬ್ಬರು ಬಂದರು. ದಿನವೂ ನೋಡುತ್ತಿದ್ದ ಮುಖ ಮಾತಾಡಿರಲಿಲ್ಲ ಅಷ್ಟೇ. ತೀರ ವಯಸ್ಸಾದವರಲ್ಲ, “ಅಜ್ಜಿ’ ಅಂತ ಕರೆಯಲು ಅಡ್ಡಿ ಇಲ್ಲ. “ನಾನೂ ಕಾಯುವುದು, ಅರ್ಧ ಗಂಟೆಯಾಯ್ತು’ ಅಂದೆ. ಮೆಲ್ಲನೆ ಸಂಭಾಷಣೆ ಆರಂಭವಾಯಿತು. ನನ್ನ ಕೆಲಸದ ಕುರಿತು ಕೇಳಿದರು. ಸೌಜನ್ಯಕ್ಕಾಗಿ ನಾನೂ, “ನೀವೇನು ಮಾಡುತ್ತಿದ್ದೀರಾ?’ ಎಂದು ಕೇಳಿದೆ. ದಿನನಿತ್ಯ ನೋಡುತ್ತಿದ್ದರಿಂದ ಈ ವಯಸ್ಸಿನಲ್ಲಿ ಮಕ್ಕಳು ಟ್ಯೂಶನ್‌ಗೆ ಹೋದಂತೆ, “ಇವರೆಲ್ಲಿಗಪ್ಪಾ ದಿನವೂ ಓಡಾಡುತ್ತಾರೆ?’ ಎಂಬ ಕುತೂಹಲವಿತ್ತು ಮನಸಲ್ಲಿ. “ನಾನು ಭಜನೆ ತರಗತಿ ಮುಗಿಸಿ ಹೋಗುತ್ತಿದ್ದೇನೆ. ಸ್ವಲ್ಪ ತಡವಾಯಿತು’ ಅಂದರು.
ಬಸ್ಸಿನಲ್ಲಿ ಇಳಿವಯಸ್ಸಿನಲ್ಲಿಯೂ ಕಷ್ಟಪಟ್ಟು ಓಡಾಡುವವರನ್ನು ಕಂಡಾಗ ಅವರ ಉತ್ಸಾಹದ ಕುರಿತು ಖುಷಿ ಎನಿಸುತ್ತದೆ. ಜತೆಗೇ ಮನೆಯಲ್ಲೇ ಕುಳಿತುಕೊಳ್ಳುವುದಕ್ಕೂ ಆಗದೇ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಲ್ಲದ ಆಸಕ್ತಿ ಹುಟ್ಟಿಸಿಕೊಂಡು ಓಡಾಡುತ್ತಾರಲ್ಲ, ಎಂದೂ ಬೇಸರವೆನಿಸುತ್ತದೆ. ಪಾರ್ಕ್‌ಗಳಲ್ಲಿ ಸಂಜೆ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಹೋದರೆ ಯಾರೋ ಶಿಕ್ಷೆ ವಿಧಿಸಿದಂತೆ 30ರಿಂದ 50 ವರ್ಷದವರೆಗಿನ ಮಹಿಳೆಯರು, ಪುರುಷರು ವೇಗವಾಗಿ ನಡೆಯುವುದು ಕಾಣಿಸುತ್ತದೆ. ಆರಂಭದಲ್ಲಿ ಕುತೂಹಲವೆನಿಸುತ್ತಿತ್ತು. ಪಾರ್ಕ್‌ಗಳಲ್ಲಿ ಕೆಲವರು ಬೊಜ್ಜು ಕರಗಿಸಿಕೊಳ್ಳಲು, ಆರೋಗ್ಯ ಕಾಪಾಡಿಕೊಳ್ಳಲು ಶಿಬಿರದಂತೆ ಕೆಲವು ಕಾರ್ಯಕ್ರಮ ನಡೆಸುತ್ತಾರೆ. ಸಪ್ಪೆ ಮೋರೆ ಹಾಕಿ ಶಿಕ್ಷೆ ಅನುಭವಿಸುವಂತೆ ನಡೆಯುತ್ತಿರುವವರೆಲ್ಲ ಅದೇ ಶಿಬಿರದ ಸದಸ್ಯರೆಂದು ತಿಳಿದಾಗ, “ಅಯ್ಯೋ ಪಾಪ’ ಎನಿಸಿತ್ತು. ದಿನಕ್ಕೆ ಇಷ್ಟು ಸುತ್ತು ಬನ್ನಿ, ಇಷ್ಟು ವೇಗದಲ್ಲಿ ಓಡಿ ಎಂದು ಮೊದಲೇ ಸೂಚನೆ ನೀಡಿರುತ್ತಾರೆ ಅವರಿಗೆ. ಅಂತೂ ನಗರದಲ್ಲಿ ಉದ್ಯೋಗದಲ್ಲಿರದ ಮಹಿಳೆಯರು ತಮ್ಮನ್ನು ತಾವು ಬ್ಯುಸಿಯಾಗಿಡಲು ಏನೇನೋ ಕಸರತ್ತು ಮಾಡುತ್ತಾರೆ ಮತ್ತು ಕೆಲವು ತರಬೇತಿ ಆಯೋಜಕರೂ, ಶಿಬಿರ ನಡೆಸುವವರು ಇದರಿಂದಲೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ನನಗೂ ಪ್ರೀತಿಯ ಅಜ್ಜಿ ಇದ್ದರು. ಅವರ ನೆನಪುಗಳೇ ಸುಂದರ. ಅವರೆಂದೂ ತರಗತಿಗಳಿಗೆ ಹೋದ ನೆನಪಿಲ್ಲ ನನಗೆ, “ಅಯ್ಯೋ ಬೋರಾಗುತ್ತಿದೆ’ ಎಂದು ಸಪ್ಪೆಮೋರೆ ಹಾಕಿಲ್ಲ. ಆಕೆ ಸಾಯುವ ದಿನಗಳಲ್ಲಿಯೂ ಅತ್ಯಂತ ಉತ್ಸಾಹಿ ಮತ್ತು ಸಂತೃಪ್ತಳಾಗಿದ್ದಳು. ಮುಂಜಾನೆ ಎದ್ದು ಕಸ ಗುಡಿಸುವುದು, ಅಡುಗೆ ಮಾಡುವ ಕೆಲಸ ಮುಗಿದರೆ, ಬಿಸಿಲು ನೆತ್ತಿಗೆ ಬರುತ್ತಿದ್ದಂತೇ ತೋಟಕ್ಕೆ ಹೋಗಿಬಿಡುತ್ತಿದ್ದಳು. ಅಡಿಕೆ ಹೆಕ್ಕಿ, ಬಾಳೆ ಹೂವನ್ನೋ, ಇನ್ಯಾವುದೋ ಸೊಪ್ಪನ್ನೋ ಕಿತ್ತು ತಂದು ಪಲ್ಯವನ್ನೋ, ಸಾರನ್ನೋ ಮಾಡುತ್ತಿದ್ದಳು. ಮಧ್ಯಾಹ್ನ ಊಟವಾದ ಮೇಲೆ ಹಿತ್ತಿಲಿನಲ್ಲಿ ಏನಾದರೂ ಕೆಲಸ ಮಾಡುತ್ತಿದ್ದಳು. ಸಂಜೆಯಾಗುತ್ತಲೇ ಬೇಗನೆ ಸ್ನಾನ ಮಾಡಿ ಮನೆ ಒಳಗೆ ಸೇರಿಬಿಡುತ್ತಿದ್ದಳು. ನಂತರ ಮೊಮ್ಮಕ್ಕಳ ಜತೆ ಭಜನೆಗೆ ಕೂರುವಳು. ಅದಾಗಿ ಅಮ್ಮನೊಂದಿಗೆ ಅಡುಗೆಗೆ ನೆರವಾಗುವಳು. ಆಕೆ ಫುಲ್ ಬ್ಯುಸಿ ಇರುತ್ತಿದ್ದಳು. ನನ್ನಜ್ಜಿ ಮಾತ್ರವಲ್ಲ ಹಳ್ಳಿಯ ಬಹುತೇಕ ಮಹಿಳೆಯರೂ ಅಜ್ಜಿಯಂದಿರೂ ಯಾವ ಉದ್ಯೋಗವಿಲ್ಲದೆಯೂ ಬ್ಯುಸಿಯಾಗಿರುತ್ತಾರೆ. ಅವರಿಗೆಂದೂ ತಮ್ಮ ಮನೆ, ತೋಟ, ನೆಂಟರ ಆತಿಥ್ಯ ನಡೆಸುವುದರಲ್ಲಿ ಬೇಸರ ಬರುವುದಿಲ್ಲ. ಹಾಗೇ ಪಾರ್ಕಿನಲ್ಲಿ ಸಪ್ಪೆಮೋರೆ ಹಾಕಿ 50-60 ಸುತ್ತು ಓಡುವುದಿಲ್ಲ. ಬೆಳಿಗ್ಗೆ ಆರಂಭಿಸಿ ಸಂಜೆಯ ತನಕ ಅವರು ತಮ್ಮ ಕೆಲಸಗಳಿಗಾಗಿಯೇ ಅದೆಷ್ಟು ಸುತ್ತು ಓಡಿ ಮುಗಿಸುವರೋ. ತಿನ್ನುವುದಕ್ಕೇನಾದರೂ ಬೇಕೆಂದು ಅಡುಗೆ ಮಾಡುತ್ತಿರಲಿಲ್ಲ, ನಡೆಯಬೇಕಲ್ಲ ಎಂದು ತೋಟಕ್ಕೆ ಹೋಗುತ್ತಿರಲಿಲ್ಲ, ದೇಹ ಆರೋಗ್ಯವಾಗಿರಲಿ ಎಂದು ಕೆಲಸ ಮಾಡುತ್ತಿರಲಿಲ್ಲ. ಆದರೆ, ಮಾಡುವ ಕೆಲಸಗಳನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಿದ್ದರು. ತರಕಾರಿಗೆ ಅಂಗಡಿಗೆ ಹೋಗುತ್ತಿರಲಿಲ್ಲ. ತೋಟದಲ್ಲೆಲ್ಲ ಸುತ್ತಾಡಿ ಯಾವುದಾದರೂ ಸೊಪ್ಪು, ಕಾಯಿ ಆರಿಸಿ ತಂದು ಬಹಳ ಆಸಕ್ತಿಯಿಂದ ಅಡುಗೆ ಮಾಡಿ ಬಡಿಸುತ್ತಿದ್ದರು. ಆಕೆಯ ಕೈಯಲ್ಲಿ ಜಪಮಣಿಯೋ, ಗ್ರಂಥಗಳ್ಳೋ ಇರಲಿಲ್ಲ. 24 ಗಂಟೆ ದೇವರ ಕೋಣೆಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಮೊಮ್ಮಕ್ಕಳು ಭಜನೆ ಮಾಡಬೇಕಾದರೆ ಅವರೊಂದಿಗೆ ತಾನೂ ಕೂರುತ್ತಿದ್ದಳು. ಅಲ್ಲಿ ಮಕ್ಕಳಿಗೆ ಭಜನೆ ತರಬೇತಿ ಬೇಕಿಲಿರಲಿಲ್ಲ. ಹಿರಿಯರೇ ಗುರುಗಳು. ಯಾವ ತರಬೇತಿ ಮಾರ್ಗದರ್ಶಕನೂ, ಗೈಡ್ ಹೇಳಿಕೊಡಲಾರ. ಅಲ್ಲಿ ಅನುಭವವೇ ಪಾಠ. ದಿನನಿತ್ಯದ ಜೀವನವೇ ಶಿಬಿರ.
ಅಜ್ಜಿ ಅಂತೂ ಅದೃಷ್ಟವಂತಳು. ಸ್ವಲ್ಪ ಕ್ಷೀಣಿಸಿದರೂ, ಹುಷಾರು ತಪ್ಪಿದರೂ ಆಕೆ ಗುಣಮುಖಳಾಗುವುದಕ್ಕೆ ಆಕೆಯಲ್ಲಿದ್ದ ಉತ್ಸಾಹವೇ ಸಾಕಿತ್ತು. ಬೆನ್ನು ಬಾಗಿದರೂ ಉತ್ಸಾಹ ಕುಗ್ಗಿರಲಿಲ್ಲ. ಎಲ್ಲ ದಿನವನ್ನೂ ಹೊಸದೆಂಬತೆಯೇ ಅನುಭವಿಸಿದಳು. ಆಕೆ ಟಿವಿ ನೋಡುತ್ತಿದ್ದುದು ತೀರಾ ಕಡಿಮೆ.
ಮೊಬೈಲ್, ಟೀವಿ, ಜಿಯೋ ಸಿಮ್ ಇದ್ದರೂ ನಮನ್ನು ಕಾಡುವ ಉದಾಸೀನತೆ ಆಕೆಯಲ್ಲಿ ನಾನೆಂದೂ ಕಂಡಿಲ್ಲ. ನಗರದಲ್ಲಿ ತಮ್ಮ ಒಂಟಿತನ, ಉದಾಸೀನತೆ ಕಳೆಯಲು ಹಿರಿಯರು ಏನೇನೋ ಶಿಬಿರ, ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಾರೆ. ಮನೆಯಲ್ಲಿ ಒಬ್ಬರೇ ಕೂರುವುದಕ್ಕಿಂತ ಬಸ್ಸಿನಲ್ಲಿ ಓಡಾಡಿಯೂ, ಸಮಾನ ವಯಸ್ಕರೊಂದಿಗೆ ಬೆರೆತೂ ಸಮಯ ಕಳೆಯಬಹುದೆಂಬ ನಿರೀಕ್ಷೆ ಅವರದು. ಮಗ, ಸೊಸೆ ಕಚೇರಿಗೆ, ಮೊಮ್ಮಗು ಶಾಲೆಗೆ ಹೋದರೆ ವಯಸ್ಸಾದ ಹಿರಿಯರು ಮನೆಯೊಳಗೆ ಕೂರುವುದೆಷ್ಟು? ಸಂಜೆಯಾದರೂ ಮನೆ ತಲುಪುತ್ತಾರೆಂಬ ನಿರೀಕ್ಷೆ ಇಲ್ಲ, ಮಕ್ಕಳು ಕೆಲಸ ಮುಗಿಸಿ ಟ್ರಾಫಿಕ್ನಲ್ಲಿ ಮನೆ ಸೇರುವುದು 8 ಗಂಟೆಯಾದರೆ, ಟ್ಯೂಶನ್, ಡ್ಯಾನ್ಸ್ ನಂತಹ ಹಲವಾರು ಕ್ಲಾಸ್ ಮುಗಿಸಿ ಮೊಮ್ಮಗು ಮನೆ ತಲುಪುವುದು 8 ಗಂಟೆಯ ಮೇಲೆಯೇ. ಈ ನಡುವೆ ಸುತ್ತಾಡಲು ನಗರದಲ್ಲಿ ತೋಟವೂ ಇಲ್ಲ, ಹಿತ್ತಿಲೂ ಇಲ್ಲ, ಹೆಕ್ಕಲು ಅಡಿಕೆಯೂ ಇಲ್ಲ. ಅವರಾದರೂ ಏನು ಮಾಡಬೇಕು. ಶಿಬಿರ ಆಯೋಜಕರ ಮೊರೆ ಹೋಗುವುದು ಅನಿವಾರ್ಯ. ಇದನ್ನೆಲ್ಲ ನೋಡುತ್ತಲೇ ಮನಸ್ಸು, “ದೇವರೇ ನನಗೆ ಪಾರ್ಕಿನಲ್ಲಿ ಸಪ್ಪೆಮೋರೆ ಹಾಕಿ ಸುತ್ತುಗಳನ್ನು ಎಣಿಸಿಕೊಂಡು ಓಡುವ ಪರಿಸ್ಥಿತಿ ತಂದಿಡಬೇಡಪ್ಪಾ’ ಎಂದು ಪ್ರಾರ್ಥಿಸುತ್ತದೆ.
ದಿವ್ಯಾ ಡಿ.