ವಿಧಾನಸಭೆ: ಕಲ್ಲು ಹಾಗೂ ಮರಳು ಗಣಿಗಾರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರಾಜಧನ ಸೋರಿಕೆ ತಪ್ಪಿಸಲು ಉಪಗ್ರಹ ಹಾಗೂ ಡ್ರೋಣ್ ಮೂಲಕ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
14,762.20 ರೂ.ಗಳ ಪೂರಕ ಅಂದಾಜಿನ ಮೊದಲ ಕಂತು ಮಂಡಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಕಲ್ಲು ಹಾಗೂ ಮರಳು ಗಣಿಗಾರಿಕೆ ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ರೂ. ರಾಜಧನ ಸೋರಿಕೆಯಾಗುತ್ತಿದೆ. ಸಿಎಜಿ ವರದಿ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯಲ್ಲೂ ಇದು ಪ್ರಸ್ತಾಪವಾಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಈ ವಿಚಾರ ತಮ್ಮ ಗಮನದಲ್ಲಿದೆ. ಕೈಯಿಂದ ಕಲ್ಲು ಒಡೆದು ಜೀವನ ಸಾಗಿಸುವವರೂ ಇದ್ದಾರೆ. ಯಂತ್ರಗಳ ಮೂಲಕ ಕಲ್ಲು ಗಣಿಗಾರಿಕೆ ಮಾಡುವವರೂ ಇದ್ದಾರೆ. ಹೀಗಾಗಿ ಇದರಲ್ಲೇ ಜೀವನ ಸಾಗಿಸುವವರಿಗೆ ವಿನಾಯಿತಿ ನೀಡಿ ಯಂತ್ರಗಳಿಂದ ಕಲ್ಲು ಗಣಿಗಾರಿಕೆ ನಡೆಸುವವರಿಗೆ ಕೆಲವೊಂದು ನಿಯಮ ಹೇರಬೇಕಾಗಿದೆ. ಅಕ್ರಮ ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೃಷ್ಣ ಬೈರೇಗೌಡರು, ಕೇಂದ್ರದಿಂದ ರಾಜ್ಯಕ್ಕೆ 14,100 ಕೋಟಿ ರೂ. ಜಿಎಸ್‌ಟಿ ಪರಿಹಾರ ಬರಬೇಕಿದೆ. ಅದು ಬಂದರೆ ನಮ್ಮ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಮುಖ್ಯಮಂತ್ರಿಯವರು ನಾವು ಜಿಎಸ್‌ಟಿ ಪರಿಹಾರ 5 ಸಾವಿರ ಕೋಟಿ ರೂ. ನಿರೀಕ್ಷೆ ಮಾಡಿದ್ದೆವು. ಆದರೆ, 8633 ಕೋಟಿ ರೂ. ಬಂದಿದೆ. ಆರು ಸಾವಿರ ಕೋಟಿ ರೂ. ಪರಿಹಾರ ಸಂಬಂಧ ಲೆಕ್ಕಪರಿಶೋಧನೆ ವರದಿ ಸಲ್ಲಿಸಬೇಕಾಗಿದೆ. ಅದು ಸಲ್ಲಿಕೆಯಾದ ತಕ್ಷಣ ಬರಲಿದೆ ಎಂದು ಸಮಜಾಯಿಷಿ ನೀಡಿದರು.
ಪೂರಕ ಅಂದಾಜಿನಲ್ಲಿ ಒದಗಿಸಿರುವ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಕಾಂಗ್ರೆಸ್‌ನ ರಮೇಶ್‌ಕುಮಾರ್, ಎಚ್.ಕೆ.ಪಾಟೀಲ್, ಜೆಡಿಎಸ್‌ನ ಶಿವಲಿಂಗೇಗೌಡ ಕೆಲವೊಂದು ಸಲಹೆ ನೀಡಿದರು. ನಂತರ ಪೂರಕ ಅಂದಾಜಿಗೆ ಅನುಮೋದನೆ ನೀಡಲಾಯಿತು.