Advertisement

ಮನೆಮನೆಯಲ್ಲೂ ಇರುತ್ತವೆ ಮಿ ಟೂ ಕಥೆಗಳು!

02:01 PM Oct 25, 2018 | |

ಕೆಲವು ವರ್ಷಗಳ ಹಿಂದಿನ ಕಥೆ. ಪತ್ರಿಕೆಯೊಂದರಲ್ಲಿ ನಟಿಯೊಬ್ಬಳ ಸಂದರ್ಶನ ಪ್ರಕಟವಾಗಿತ್ತು. ಆ ನಟಿ, ತನಗೆ ಉಪ್ಪಿಟ್ಟು ಇಷ್ಟ  ಎಂದು ಆ ಸಂದರ್ಶನದಲ್ಲಿ ಹೇಳಿದ್ದಳು. ಸರಿ, ಇಂಥದ್ದೊಂದು ಸಂದರ್ಶನವನ್ನು ನಿಮ್ಮ ಮುಂದಿಟ್ಟು, ಅದಕ್ಕೆ ಸರಿಹೊಂದುವ ಆಕೆಯ ಫೋಟೋಗಳನ್ನು ಆಯ್ಕೆ ಮಾಡಿ ಅಂತ ಹೇಳಿದರೆ, ಏನು ಮಾಡುತ್ತೀರಿ? ನಟಿ ಅಡುಗೆ ಮನೆಯಲ್ಲಿ ನಿಂತ ಫೋಟೋವನ್ನೋ ಅಥವಾ ಅವಳ ಕ್ಯಾಶುವಲ್‌ ಚಿತ್ರವನ್ನೋ ಆಯ್ಕೆ ಮಾಡುತ್ತೀರಿ ಅಲ್ಲವೇ? ಆದರೆ ಆ ಸಂದರ್ಶನಕ್ಕೆ ಯಾವ ಚಿತ್ರ ಹಾಕಿದ್ದರು ಗೊತ್ತೇ? ನಟಿ ಸ್ವಿಮಿಂಗ್‌ ಪೂಲ್‌ನ ಬೆಂಚ್‌ನ ಮೇಲೆ ತೇವಗೊಂಡ ಮೈಯಲ್ಲಿ ಮಲಗಿದ್ದ ಫೋಟೋವನ್ನು! 

Advertisement

ಎಲ್ಲಿಯ ಉಪ್ಪಿಟ್ಟು, ಎಲ್ಲಿಯ ಸ್ವಿಮಿಂಗ್‌ ಪೂಲು? ಆಕೆಯೇನು ಈ ವರದಿಗಾರನಿಗೆ ಸ್ವಿಮಿಂಗ್‌ ಮಾಡುತ್ತಾ ಸಂದರ್ಶನ ನೀಡಿದ್ದಳಾ? ಸುದ್ದಿಯನ್ನು ಜಾಸ್ತಿ ಜನ ಓದಬೇಕೆಂದು ಪುಟ ನಿರ್ವಾಹಕರು ಗೂಗಲ್‌ನಲ್ಲಿ ಸಿಕ್ಕ ಆ ನಟಿಯ(ಈ ಘಟನೆಗೆ ಸಂಬಂಧವೇ ಇಲ್ಲದ) ಫೋಟೋ ಬಳಸಿದ್ದರು. ಇದು, ಇಂದಿಗೂ “ಸಭ್ಯ’ತೆಯ ವ್ಯಾಪ್ತಿಯೊಳಗೆ ಗುರುತಿಸಿಕೊಳ್ಳುವ ಪತ್ರಿಕೆಗಳ ಕಥೆಯಾಯಿತು. ಸುದ್ದಿ ವಾಹಿನಿಗಳ‌ ವಿಚಾರಕ್ಕೆ ಬಂದುಬಿಟ್ಟರೆ ಮಾತನಾಡುವುದಕ್ಕೇ ಮುಜುಗರವಾಗುತ್ತದೆ.
ಇದೆಲ್ಲ ಈಗ್ಯಾಕೆ ನೆನಪಾಯಿತೆಂದರೆ, ಶ್ರುತಿ ಹರಿಹರನ್‌, ನೀತು, ಸಂಜನಾ ಸೇರಿದಂತೆ ಹಲವರು ಮಿ ಟೂ ಬಗ್ಗೆ ಧ್ವನಿಯೆತ್ತಿದ ದಿನದಿಂದ ಮಾಧ್ಯಮಗಳನ್ನು ಗಮನಿಸಿದ್ದೀರಾ? “ಮಿ ಟೂ’ ವಿಷಯದ ಚರ್ಚೆ ಮಾಡುತ್ತಲೇ, ಅವು ಸಿನೆಮಾವೊಂದರಲ್ಲಿ ಶ್ರುತಿ ಹರಿಹರನ್‌ ಅರ್ಜುನ್‌ ಸರ್ಜಾಗೆ ಮುತ್ತಿಕ್ಕುವ‌ ದೃಶ್ಯವನ್ನು…ನಟಿ ಸಂಜನಾ, ಚಿತ್ರದಲ್ಲಿ ಹೀರೋನನ್ನು ಕಿಸ್‌ ಮಾಡುವ ದೃಶ್ಯಾವಳಿಗಳನ್ನು ಹಿನ್ನೆಲೆಯಲ್ಲಿ ಪ್ರಸಾರ ಮಾಡುತ್ತಿವೆ. ಕೆಲ ದಿನಗಳ ಹಿಂದೆ ರಕ್ಷಿತ್‌ ಶೆಟ್ಟಿ-ರಶ್ಮಿಕಾ ಬ್ರೇಕಪ್‌ ಸುದ್ದಿಯ ವಿಷಯದಲ್ಲೂ ಕನ್ನಡ ಸುದ್ದಿ ಮಾಧ್ಯಮಗಳ ಈ ಕೆಟ್ಟ ಚಾಳಿ ಅತಿರೇಕ ಮುಟ್ಟಿತ್ತು. ರಶ್ಮಿಕಾ ತೆಲುಗು ಸಿನೆಮಾವೊಂದರಲ್ಲಿ ನಟ ವಿಜಯ್‌ ದೇವರಕೊಂಡಾಗೆ ಮುತ್ತಿಕ್ಕುವ ದೃಶ್ಯವನ್ನು ಪದೇ ಪದೆ ಬಿತ್ತರಿಸಿದವು…ರಕ್ಷಿತ್‌-ರಶ್ಮಿಕಾ ಬ್ರೇಕಪ್‌ಗ್ೂ ಈ ದೃಶ್ಯಾವಳಿಗೂ ಏನು ಸಂಬಂಧ? ವೀಕ್ಷಕರಲ್ಲಿ ರಶ್ಮಿಕಾಳದ್ದೇ ತಪ್ಪು ಎಂದು ಅಭಿಪ್ರಾಯ ಬಿತ್ತುವ ಪರೋಕ್ಷ ಪ್ರಯತ್ನವಾಗಿತ್ತದು.

ಇನ್ನೂ ಜುಗುಪ್ಸೆ ಹುಟ್ಟಿಸಿದ ಅಂಶವೆಂದರೆ, ಶ್ರುತಿ ಮಿಟೂ ಬಗ್ಗೆ ಮೊದಲು ಪೋಸ್ಟ್‌ ಬರೆದಾಗ ಕನ್ನಡ ವಾಹಿನಿಗಳು ಕೊಟ್ಟ ಶೀರ್ಷಿಕೆ “ಲೂಸಿಯಾ ಚೆಲುವೆಯ ಮಿ ಟೂ’ “ಊರ್ವಿ ಬೆಡಗಿಯ ಆರೋಪ’ ಎಂಬುದು. ಸಮಯ-ಸಂದರ್ಭವೇನು, ವಿಷಯದ ಗಾಂಭೀರ್ಯತೆ ಹೇಗಿದೆ ಎನ್ನುವ ಕಿಂಚಿತ್‌ ಸೂಕ್ಷ್ಮತೆಯನ್ನೂ ಕಳೆದುಕೊಂಡುಬಿಟ್ಟಿವೆಯಾ ಮಾಧ್ಯಮಗಳು? ಒಬ್ಬ ಹೆಣ್ಣು ಮಗಳು ಗಂಭೀರ ಆರೋಪ ಮಾಡಿದಾಗ ಆಕೆಯನ್ನು “ಚೆಲುವೆ’ “ಬೆಡಗಿ’ ಎನ್ನುವ ಪದಗಳನ್ನು ಬಳಸಿ ಗುರುತಿಸುವುದೇಕೆ? ಆರೋಪದ ಗುರುತ್ವವನ್ನು ಹಾಳಾಗೆಡವಲೇ? ಶ್ರುತಿ ಕನ್ನಡದ “ನಟಿ’, “ಹೀರೋಯಿನ್‌’ ಎನ್ನುವುದು ಲೆಕ್ಕಕ್ಕಿಲ್ಲವೇ?

ಮಾಧ್ಯಮಗಳು ಇದನ್ನೆಲ್ಲ ಟಿಆರ್‌ಪಿಗಾಗಿ ಮಾಡುತ್ತವೆ ಎನ್ನುವುದೇನೋ ಸರಿ. ಆದರೆ ಹೀಗೆ ಮಾಡಿದರೆ ಟಿಆರ್‌ಪಿ ಹೆಚ್ಚುವುದಕ್ಕೆ ಏನು ಕಾರಣ? ಜನರೂ ಇಂಥವನ್ನೇ ನೋಡುತ್ತಿದ್ದಾರೆ, ಇದೇ ಮನಸ್ಥಿತಿಯನ್ನೇ ಪ್ರತಿಫ‌ಲಿಸುತ್ತಿದ್ದಾರೆ ಎಂದೇ ಅಲ್ಲವೇ? “ನೋಡಿ ರಶ್ಮಿಕಾ ಸರಿಯಿಲ್ಲ, ಶ್ರುತಿ ಸರಿಯಿಲ್ಲ, ಸಂಜನಾ ಸರಿಯಿಲ್ಲ. ಹೀಗಾಗಿ ಅವರು ಆರೋಪ ಮಾಡುವುದಕ್ಕೆ ಅರ್ಹರೇ ಅಲ್ಲ’ ಎನ್ನುವ “ಕ್ಯಾರೆಕ್ಟರ್‌ಲೆಸ್‌’ ಪಟ್ಟ ಕಟ್ಟುವ ಪುರುಷಾಹಂಕಾರದ ಪ್ರದರ್ಶನವಷ್ಟೇ ಇದು. 
ಇಂದು ಎಲ್ಲಾ ರಂಗಗಳಂತೆ ಮಾಧ್ಯಮ ಲೋಕದಲ್ಲೂ ಪುರುಷರ ಪಾರುಪತ್ಯವಿದೆ. ಒಂದು ಪ್ರೋಗ್ರಾಂ ಅಥವಾ ಸುದ್ದಿ ಹೇಗೆ ಬರಬೇಕು. ಅದು ಯಾವ ಆ್ಯಂಗಲ್‌ನಲ್ಲಿ ಇರಬೇಕು ಎನ್ನುವುದನ್ನೆಲ್ಲ ನಿರ್ಧರಿಸುವುದೂ ಗಂಡಸರೇ. ಸಹಜವಾಗಿಯೇ ಅವರ ಪೂರ್ವಾಗ್ರಹಗಳು ಈ ಸುದ್ದಿಗೆ ಆ್ಯಂಗಲ್‌ ಕೊಟ್ಟುಬಿಡುತ್ತವೆ. 

ಮಾಧ್ಯಮಗಳಲ್ಲಾಗಲೀ, ಸಿನೆಮಾ ಇಂಡಸ್ಟ್ರಿಯಲ್ಲಾಗಲೀ, ಮನೆಯಲ್ಲಾಗಲೀ, ಪಂಚಾಯ್ತಿಗಳಲ್ಲಾಗಲೀ ಪುರುಷರದ್ದೇ ಪಾರುಪತ್ಯ ಇರುವಾಗ ಹೆಣ್ಣುಮಕ್ಕಳು ಧ್ವನಿ ಎತ್ತಿಬಿಟ್ಟರೆ ಏನು ಕಥೆ? ಅದೂ ಯಶಸ್ವಿಯಾಗಿರುವ, ಓದಿಕೊಂಡಿರುವ ಹುಡುಗಿಯೊಬ್ಬಳು ಧೈರ್ಯದಿಂದ ಮಾತನಾಡುತ್ತಾಳೆ ಎಂದರೆ, ಗಂಡಸರ ಕಿವಿಗಳು ಕೆಂಪಾಗಿಬಿಡುತ್ತವೆ. ಈಗ ಮಿ ಟೂ ಅಭಿಯಾನದಲ್ಲೂ ಹಾಗೇ ಆಗುತ್ತಿದೆ. ಇಡೀ ಪುರುಷ ಸಮಾಜವೇ “ಮಾತನಾಡುವ’ ಹೆಣ್ಣುಮಕ್ಕಳ ವಿರುದ್ಧ ಕೈ ಜೋಡಿಸಿ ನಿಂತುಬಿಡುತ್ತಿದೆ. ಅವರ ಚಾರಿತ್ರ್ಯ ಹರಣಕ್ಕೆ ಸಜ್ಜಾಗಿಬಿಟ್ಟಿದೆ.

Advertisement

ಸಾಧ್ಯವಾದರೆ ಒಮ್ಮೆ ಯಾವುದೇ ನಟಿಯ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಪೇಜ್‌ ಓಪನ್‌ ಮಾಡಿ ನೋಡಿ. ಅಲ್ಲಿ ಅವರ ಪ್ರತಿಯೊಂದು ಪೋಸ್ಟ್‌ಗಳ ಕೆಳಗೂ ಗಂಡಸರ ವಿಕಾರಲೋಕ ಅನಾವರಣಗೊಂಡಿರುತ್ತದೆ. ಅತ್ಯಂತ ಕೊಳಕು ಭಾಷೆಯಲ್ಲಿ ಇವರೆಲ್ಲ ಈ ಹೆಣ್ಣುಮಕ್ಕಳನ್ನು ನಿರಂತರ ನಿಂದಿಸುತ್ತಲೇ ಇರುತ್ತಾರೆ. ಹೀನಾತಿಹೀನ ಪನ್‌ಗಳನ್ನು, ಕಥೆಗಳನ್ನು ಸೃಷ್ಟಿಸಿ ಕುದಿಯುತ್ತಿರುವ ತಮ್ಮ ಪುರುಷಾಹಂಕಾರವನ್ನು ತಣಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಈ ಗಂಡಸರ್ಯಾರೂ ಅನ್ಯಲೋಕದವರಲ್ಲ. ನಮ್ಮ ನಡುವೆ ಇರುವವರೇ, ನಮ್ಮ ಊರಿನವರೇ, ಸಮಾಜದಲ್ಲಿ ಸಭ್ಯರು ಎನಿಸಿಕೊಂಡವರೇ!  

ಗಮನಿಸಬೇಕಾದ ಸಂಗತಿಯೆಂದರೆ, ಆರೋಪ ಮಾಡುವವರ ಚಾರಿತ್ರ್ಯವಧೆ ಮಾಡುವುದಕ್ಕೆ ಇವರು ಎಷ್ಟು ಪ್ರಯತ್ನಪಡುತ್ತಾರೋ, ಆರೋಪ ಎದುರಿಸುವವರ ಚಾರಿತ್ರ್ಯವನ್ನು ಕೊಂಡಾಡುವುದಕ್ಕೂ ಇವರದ್ದು ಅಷ್ಟೇ ಶ್ರಮವಿರುತ್ತದೆ! 
ಬಾಲಿವುಡ್‌ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್‌ ವಿರುದ್ಧ ಅನುಚಿತ ವರ್ತನೆ ಆರೋಪಿಸಿದ ತಕ್ಷಣ ಪುರುಷ ಸಮಾಜ ನಾನಾ ಪಾಟೇಕರ್‌ ಬೆನ್ನಿಗೆ ನಿಂತುಬಿಟ್ಟಿತು. “ನಾನಾ ಪಾಟೇಕರ್‌ ಎಷ್ಟು ಒಳ್ಳೆಯವರು ಗೊತ್ತೇ?’ “ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಗೊತ್ತೇ?’ “ಎಷ್ಟು ಚಿಕ್ಕ ಮನೆಯಲ್ಲಿ ಇರುತ್ತಾರೆ ಗೊತ್ತೇ?’ ಎನ್ನುವ ಸುದ್ದಿಗಳನ್ನು ಹರಡಲಾಯಿತು. ಒಬ್ಬ ವ್ಯಕ್ತಿಯ ಲೈಂಗಿಕ ವರ್ತನೆಗೂ ಆತನ ಸಾಮಾಜಿಕ ಚಹರೆಗೂ ವ್ಯತ್ಯಾಸವಿರುವುದಿಲ್ಲವೇ? ಆತ ಬಡವರಿಗೆ ಸಹಾಯ ಮಾಡುವುದಕ್ಕೂ, ಒನ್‌ ಬಿಎಚ್‌ಕೆ ಫ್ಲಾಟ್‌ನಲ್ಲಿರುವುದಕ್ಕೂ, ಅನುಚಿತವಾಗಿ ವರ್ತಿಸುವುದಕ್ಕೂ ಸಂಬಂಧವೇನಿದೆ? ಒಬ್ಬ ವ್ಯಕ್ತಿ ಒಬ್ಬರಿಗೆ ಒಳ್ಳೆಯವನಾಗಿ ಇರಬಹುದು, ಅದೇ ವ್ಯಕ್ತಿ ತಪ್ಪೆಸಗಿದಾಗ ಅದನ್ನು ಮುಚ್ಚಲು ಒಳ್ಳೆಯತನದ ಕಥೆಯನ್ನೇ ಗುರಾಣಿಯಂತೆ ಬಳಸುವುದು ಎಷ್ಟು ಸರಿ?
ಇನ್ನು ಇವರೆಲ್ಲ ತನುಶ್ರೀಗೆ ಎದುರೊಡ್ಡಿದ ಎರಡು ಪ್ರಶ್ನೆಗಳೆಂದರೆ 1) ಇಷ್ಟು ದಿನ ಏಕೆ ಸುಮ್ಮನಿದ್ದೆ? 2) ಇಮ್ರಾನ್‌ ಹಾಷ್ಮಿಗೆ ಆ ಪರಿ ಮುತ್ತಿಕ್ಕುವಾಗ ಎಲ್ಲಿ ಹೋಗಿತ್ತು ನಿನ್ನ ಮರ್ಯಾದೆ? ಎನ್ನುವುದು. ಆಕೆ 10 ವರ್ಷದ ಹಿಂದೆಯೇ ನಾನಾ ವಿರುದ್ಧ ಧ್ವನಿಯೆತ್ತಿದಳು. ಅದರ ಪರಿಣಾಮವಾಗಿ ನಾನಾರ ಗೂಂಡಾಪಡೆಯಿಂದ ಪ್ರತಿರೋಧ ಎದುರಿಸಿದ್ದಷ್ಟೇ ಅಲ್ಲದೇ, ಸಿನೆಮಾ ಇಂಡಸ್ಟ್ರಿಗೇ ಕೈ ಮುಗಿದು ದೇಶ ತೊರೆದಿದ್ದಳು. ಅದಿರಲಿ, ಇಮ್ರಾನ್‌ ಹಾಷ್ಮಿಗೆ ಆಕೆ ಸಿನೆಮಾದಲ್ಲಿ ಮುತ್ತಿಕ್ಕಿದಳು ಎಂದರೆ ಗೌರವಾದರಕ್ಕೆ ಅರ್ಹಳಲ್ಲ, ಯಾರು ಬೇಕಾದರೂ ಆಕೆಗೆ ಮುತ್ತಿಕ್ಕಬಹುದು ಎಂದರ್ಥವೇ? ನಟಿ ಸನ್ನಿ ಲಿಯೋನ್‌ ವಯಸ್ಕರ ಸಿನೆಮಾದಲ್ಲಿ ನಟಿಸಿದ್ದಾಳೆ ಎಂದಾಕ್ಷಣ ಆಕೆಯೊಂದಿಗೆ ಯಾರು ಬೇಕಾದರೂ ಹೇಗೆ ಬೇಕಾದರೂ ವರ್ತಿಸುವುದಕ್ಕೆ ಲೈಸೆನ್ಸ್‌ ಸಿಕ್ಕಿಬಿಡುತ್ತದಾ?

ಸಮಸ್ಯೆಯೆಂದರೆ, ಇಂದಿಗೂ ಬಹುತೇಕ ಗಂಡಸರಿಗೆ ಗುಡ್‌ಟಚ್‌-ಬ್ಯಾಡ್‌ಟಚ್‌ನ ಬಗ್ಗೆ ಅರಿವಿಲ್ಲ. ಫ್ಲರ್ಟಿಂಗ್‌ ಯಾವುದು-ಕಿರುಕುಳ ಯಾವುದು ಎನ್ನುವುದೂ ಸ್ಪಷ್ಟವಾಗಿ ತಿಳಿದಿಲ್ಲ. ಸಮ್ಮತಿ-ಅಸಮ್ಮತಿಯ ವ್ಯತ್ಯಾಸ ಗೊತ್ತಿಲ್ಲ. ಅದು ಹೆಣ್ಣುಮಕ್ಕಳಿಗಷ್ಟೇ ತಿಳಿಯುತ್ತದೆ. ಅವರು ಸೂಕ್ಷ್ಮವಾಗಿ ತಮಗಾಗುತ್ತಿರುವ ಅಸೌಖ್ಯದ ಬಗ್ಗೆ ಹೇಳುತ್ತಾರೆ. ಆದರೆ ಪುರುಷರ ಮಂದಮತಿಗೆ ಈ ಸೂಕ್ಷ್ಮ ಅರ್ಥವಾಗಬೇಕಲ್ಲ? ಬಹಳಷ್ಟು ಹೆಣ್ಣುಮಕ್ಕಳು ಹೆದರಿ ಅಸಹಾಯಕತೆಯಿಂದ ಸುಮ್ಮನಾಗಿಬಿಡುತ್ತಾರೆ. ಎಲ್ಲರೂ ಸುಮ್ಮನಿದ್ದಾರೆ ಎಂದರೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ! 

ಆದರೆ ಈಗ ಕಾಲ ಬದಲಾಗಿದೆ. ಇಂದಿನ ಆಧುನಿಕ ಹೆಣ್ಣುಮಕ್ಕಳಿಗೆ ಧ್ವನಿಯೆತ್ತಲು ವೇದಿಕೆಗಳು ಸಿಗುತ್ತಿವೆ. ಹೀಗಾಗಿ ಜೋರು ಧ್ವನಿಯಲ್ಲಿ ಅವರು ಪ್ರಶ್ನಿಸುತ್ತಿದ್ದಾರೆ. ಅವರ ಈ ಜೋರು ಧ್ವನಿಯೇ ಗಂಡಸರ ಕಿವಿಗಳಿಗೆ ಅಪರಿಚಿತ! ಹೀಗಾಗಿ ನಾವು ಗಂಡಸರೆಲ್ಲ ರಕ್ಷಣಾತ್ಮಕವಾಗುತ್ತಿದ್ದೇವೆ. ಹೆಣ್ಣುಮಕ್ಕಳೆಲ್ಲ ಇಡೀ ಪುರುಷ ಕುಲದ ಮೇಲೆಯೇ ಸಮರ ಸಾರಿದ್ದಾರೇನೋ ಎಂಬಂತೆ ವರ್ತಿಸುತ್ತಿದ್ದೇವೆ. ಗಮನಿಸಲೇಬೇಕಾದ ಅಂಶ ಅಂದರೆ ಇಲ್ಲಿ ಟಟಡಿಛಿr ಛynಚಞಜಿcs ಕೆಲಸ ಮಾಡಲಾರಂಭಿಸಿದೆ. ಧ್ವನಿಯೆತ್ತುವ ಹೆಣ್ಣು “ತನಗಿಂತ ವಿದ್ಯೆಯಲ್ಲಿ, ಸಾಧನೆಯಲ್ಲಿ, ಆರ್ಥಿಕ ಸ್ತರದಲ್ಲಿ’ ಕೆಳಗಿದ್ದಾಳ್ಳೋ ಮೇಲಿದ್ದಾಳ್ಳೋ ಎನ್ನುವುದರ ಮೇಲೆ ಗಂಡಸರ ಪ್ರತಿಕ್ರಿಯೆಯೂ ಬದಲಾಗುತ್ತದೆ.

ಉದಾಹರಣೆಗೆ, ಕೆಲ ವರ್ಷಗಳ ಹಿಂದೆ ಬಾಲಿವುಡ್‌ ನಟ ಶೈನಿ ಅಹುಜಾ ಮೇಲೆ ಅವನ ಮನೆಯ ಕೆಲಸದಾಕೆ “ಅತ್ಯಾಚಾರದ’ ಆರೋಪ ಮಾಡಿದಳು. ಆಗ ಯಾರೂ ಆ ಹೆಣ್ಣುಮಗಳ ಉದ್ದೇಶವನ್ನು ಪ್ರಶ್ನಿಸಲಿಲ್ಲ. ಪ್ರತಿಯೊಬ್ಬರೂ ಶೈನಿಯ ವಿರುದ್ಧವೇ ನಿಂತರು, ಆ ಹೆಣ್ಣುಮಗಳ ಪರವಾಗಿಯೇ ಮಾತನಾಡಿದರು. ಒಂದು ವೇಳೆ ನಾನಾ ಪಾಟೇಕರ್‌ ವಿರುದ್ಧ ಆತನ ಮನೆಗೆಲಸದಾಕೆ ಕಿರುಕುಳದ ಆರೋಪ ಮಾಡಿದ್ದಳು ಎಂದರೆ ಗಂಡಸರು ಆ ಹೆಣ್ಣುಮಗಳ ಪರ ನಿಲ್ಲುತ್ತಿದ್ದರಲ್ಲವೇ? 
ಇದರರ್ಥವೇನು? 

ಇದರರ್ಥವಿಷ್ಟೇ: ಇಂದು ನಾವು ಎಷ್ಟೇ ಸಮಾನತೆಯ ಬಗ್ಗೆ ಮಾತನಾಡಿದರೂ ಹೆಣ್ಣು ತನ್ನ ಸಮಾನಕ್ಕೆ ಅಥವಾ ತನಗಿಂತಲೂ ಎತ್ತರಕ್ಕೇರಿ ನಿಲ್ಲುವುದು ಗಂಡಸಿಗೆ ಸಹಿಸಲಾಗುವುದಿಲ್ಲ. ಇಂದು ಶ್ರುತಿ, ತನುಶ್ರೀಯಂಥ ಹೀರೋಯಿನ್‌ಗಳ ಬಗ್ಗೆ ಬಾಯಿಗೆ ಬಂದಂತೆ ಕೆಟ್ಟ ದಾಗಿ ಮಾತನಾಡುವ, ಕಮೆಂಟ್‌ ಮಾಡುವವರೆಲ್ಲ ನಿಜ ಜೀವನದಲ್ಲಿ ಎಲ್ಲೂ ಸಲ್ಲದ ಅಸಮಾಧಾನದ ಆಗರಗಳು. “ಪುರುಷ’ ಬಾಸ್‌ನಿಂದ ಬಾಯಿಗೆ ಬಂದಂತೆ ಬೈಸಿಕೊಂಡೂ ಹಲ್ಲು ಕಿರಿಯುವ ಗಂಡಸಿಗೆ “ಮಹಿಳಾ’ ಬಾಸ್‌ಳ ಒಂದೇ ಒಂದು ಬೈಗುಳವೂ ಆತ್ಮಾಭಿಮಾನಕ್ಕೆ ವಿಪರೀತ ಪೆಟ್ಟುಕೊಟ್ಟುಬಿಡುತ್ತದೆ.  “ಅಯ್ಯೋ, ಇವಳು ಎಷ್ಟು ಜನರ ಜೊತೆ ಮಲಗಿ ಬಾಸ್‌ ಆಗಿದ್ದಾಳೆಂದು ನನಗೆ ಗೊತ್ತು’ ಎಂದು ಆಕೆಯ ಚಾರಿತ್ರÂಹರಣಕ್ಕೆ ನಿಂತುಬಿಡುತ್ತಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ, ಹರಟೆ ಕಟ್ಟೆಗಳಲ್ಲಿ, ಆಫೀಸು ವರಾಂಡಾಗಳಲ್ಲಿ ಮಿ ಟೂ ಬಗ್ಗೆ ಹಗುರವಾಗಿ ಮಾತನಾಡು ವವರನ್ನು° ಗಮನಿಸಿದಾಗ ಇನ್ನೊಂದು ವಿಷಯ ಗೋಚರಿಸುತ್ತದೆ. ಅದು ಅಸಮಾನತೆಯ ಮುಖ. ಇಂಥ ಹಗುರ ಮಾತುಗಾರರ ಬ್ಯಾಕ್‌ಗ್ರೌಂಡ್‌ ಚೆಕ್‌ ಮಾಡಿ ನೋಡಿ. ಇವರೆಲ್ಲ ತಮ್ಮೂರಲ್ಲಿ ಜೀನ್ಸ್‌ಪ್ಯಾಂಟ್‌ ತೊಟ್ಟು ಅಡ್ಡಾಡುವ ಹೆಣ್ಣುಮಕ್ಕಳನ್ನೇ ಅಚ್ಚರಿಯಿಂದ-ಸಿಟ್ಟಿನಿಂದ ನೋಡುವವರು. ಇವರಿಗೆ, ಏಕಾಏಕಿ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವ ಹೆಣ್ಣುಮಕ್ಕಳನ್ನು ಕಂಡರೆ ಹೇಗಾಗಲಿಕ್ಕಿಲ್ಲ? 
ಇಷ್ಟು ವರ್ಷ ಯಾಕೆ ಸುಮ್ಮನಿದ್ಲು  ?
ಹೀಗೆ ಕೇಳುವವರಿಗೆ ಒಂದು ಪ್ರಶ್ನೆ. ಒಂದು ವೇಳೆ ಇವತ್ತೇ ಒಬ್ಬ ಹೆಣ್ಣುಮಗಳು ಕಿರುಕುಳ ಅನುಭವಿಸಿದಳು ಅಂದುಕೊಳ್ಳಿ. ಆಕೆ ಆ ವಿಷಯವನ್ನು ಇವತ್ತೇ ಹೇಳಿದರೂ ನೀವು ನಂಬುತ್ತೀರಾ? ನಂಬುತ್ತೀರಿ, ಆದರೆ ಆಕೆ ನಿಮ್ಮ ಮನೆಯ ಹೆಣ್ಣುಮಗಳಾಗಿದ್ದರೆ ಮಾತ್ರ! 

ಮಿ ಟೂ ಆರೋಪ ಮಾಡುವ ನಟಿಯರೆಲ್ಲ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿ¨ªಾರೆೆ ಎಂದು ಅಪವಾದ ಹೊರಿಸುವವರೆಲ್ಲ ಒಂದು ವಿಷಯವನ್ನು ಗಮನಿಸಬೇಕು. ಚಿತ್ರರಂಗದ ಸ್ಥಿತಿ ಹೇಗಿದೆಯೆಂದರೆ, ಇಂದು ಒಬ್ಬ ಹೆಣ್ಣುಮಗಳು ಒಬ್ಬ ಹೆಸರಾಂತ ಹೀರೋ/ಸಿಂಗರ್‌/ಪ್ರೊಡ್ನೂಸರ್‌ ವಿರುದ್ಧ ಮಾತನಾಡಿದಾಕ್ಷಣ ಆಕೆಯಿಂದ ಎಲ್ಲರೂ ದೂರವಿರಲು ಪ್ರಯತ್ನಿಸುತ್ತಾರೆ. ಪ್ರೊಡ್ನೂಸರ್ಗಳು-ಸ್ಟಾರ್‌ ಹೀರೋಗಳು ಆಕೆಯ ತಂಟೆಯೇ ಬೇಡ ಎಂದು ದೂರ ಸರಿದುಬಿಡುತ್ತಾರೆ. ಈ ಪರಿಸ್ಥಿತಿ ಸಿನೆಮಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಷ್ಟೆಲ್ಲ ಋಣಾತ್ಮಕ ಪರಿಣಾಮಗಳ ಅರಿವಿದ್ದರೂ ಹೆಣ್ಣುಮಕ್ಕಳು ಧೈರ್ಯದಿಂದ ಮಾತನಾಡುತ್ತಿ¨ªಾರೆ ಎಂದರೆ ಅವರ ಮಾತನ್ನು ಕೇಳಿಸಿಕೊಳ್ಳುವ, ನಿಷ್ಠುರ ಸತ್ಯಗಳಿಗೆ ಕಿವಿಯಾಗುವ ಸಂವೇದನೆಯನ್ನು ನಾವು ತೋರಿಸಲೇಬೇಕಿದೆ. 

ನಿಮಗೆ ಅಚ್ಚರಿಯಾಗಬಹುದು. ಮಿ ಟೂ ಕೇವಲ ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಸಾಂಪ್ರದಾಯಿಕ ಚಿತ್ರರಂಗಗಳಲ್ಲಿ, ಉದ್ಯಮ ವಲಯಗಳಲ್ಲಿ ಅಷ್ಟೇ ಅಲ್ಲ…ಅಮೆರಿಕದ ಪೋರ್ನ್ ಇಂಡಸ್ಟ್ರಿಯಲ್ಲೂ(ವಯಸ್ಕರ ಚಿತ್ರ) ಸದ್ದು ಮಾಡಿತ್ತು.  ಅನೇಕ ಮಹಿಳಾ ಪೋರ್ನ್ ಸ್ಟಾರ್‌ಗಳು ಜೇಮ್ಸ್‌ ಡೀನ್‌, ರಾನ್‌ ಜೆರಮಿಯಂಥ ಹೈಪ್ರೋಫೈಲ್‌ ನಟರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆರೋಪ ಮಾಡಿದ್ದರು. ಆದರೆ ಆಗ ಯಾರೂ ಈ ಮಹಿಳಾ ಪೋರ್ನ್ ನಟಿಯರ ಚಾರಿತ್ರÂವನ್ನು ಪ್ರಶ್ನಿಸಲಿಲ್ಲ, ನೀವು ಮಾಡುವ ಕೆಲಸವೇ ಇಂಥದ್ದು ಅನುಭವಿಸಿ ಎಂದು ಅವರ ಬಗ್ಗೆ ಕುಹಕವಾಡಲಿಲ್ಲ. ಬದಲಾಗಿ ಅವರ ಕಥೆಗಳನ್ನು ಕೇಳಿಸಿಕೊಂಡರು. ಪತ್ರಿಕೆಗಳು ಅವರ ಸಂದರ್ಶನಗಳನ್ನು ಪ್ರಕಟಿಸಿದವು. ಅವರ ಪರ ಟೆಲಿವಿಷನ್‌ಗಳಲ್ಲಿ ಚರ್ಚೆಗಳಾದವು. 2018ರ ಎವಿಎನ್‌ ಪ್ರಶಸ್ತಿ ಪ್ರದಾನ (ವಯಸ್ಕರ ಚಿತ್ರಗಳಿಗಾಗಿಯೇ ಇರುವ) ಸಮಾರಂಭದಲ್ಲಿ ವಯಸ್ಕ ನಟಿಯರಿಗೆ ಆಗುವ ಲೈಂಗಿಕ ದೌರ್ಜನ್ಯಗಳನ್ನು, ಕಿರುಕುಳಗಳನ್ನು ತಪ್ಪಿಸುವ ಬಗ್ಗೆ ಚರ್ಚೆಗಳಾದವು…

ಆದರೆ ನಮ್ಮಲ್ಲಿ ಮುಖ್ಯವಾಹಿನಿ ಸಿನೆಮಾಗಳಲ್ಲಿ ನಟಿಸುವ ಹೆಣ್ಣುಮಗಳಿಗೂ ನಾವು ಇಂಥದ್ದೊಂದು ಸಂವೇದನೆಯನ್ನು ದಯಪಾಲಿಸುವುದಿಲ್ಲ. “ಆಕೆ ಆಯ್ಕೆ ಮಾಡಿಕೊಂಡಿರುವ ವೃತ್ತಿಯಲ್ಲಿ ಅಂಥದ್ದೆಲ್ಲ ಕಾಮನ್‌’ ಎನ್ನುವ ಧೋರಣೆ. 
ಇಡೀ ಪುರುಷ ವರ್ಗ ಇಂದು ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳ ವಿರುದ್ಧ ತೋರಿಸುತ್ತಿರುವ ಗೂಂಡಾಗಿರಿ ನೋಡಿದರೆ, ಇನ್ಮುಂದೆ ಯಾವ ಹೆಣ್ಣುಮಗಳೂ ಮಿ ಟೂ ಬಗ್ಗೆ ಮಾತನಾಡುವುದು ಅನುಮಾನ.

ಹಾಲಿವುಡ್‌ನ‌ಲ್ಲಿ ಏನಾಗಿದೆಯೋ ನೋಡಿ. ಅಲ್ಲಿನ ಅತ್ಯಂತ ಪ್ರಭಾವಿ ಪ್ರೊಡ್ನೂಸರ್‌, ಬಹುಕೋಟಿ ಸಂಪತ್ತಿನ ಒಡೆಯ ಹಾರ್ವಿ ವೈನ್‌ಸ್ಟೈನ್‌ನನ್ನೂ ಮಿ ಟೂ ಬಿಡಲಿಲ್ಲ. ಆತನ ಸಾವಿರಾರು ಕೋಟಿ ಮೌಲ್ಯದ 8 ಸಿನೆಮಾಗಳನ್ನು ನಿಲ್ಲಿಸಿರುವುದಷ್ಟೇ ಅಲ್ಲದೆ, ಹಾಲಿವುಡ್‌ ಆತನನ್ನು ಬ್ಯಾನ್‌ ಮಾಡಿದೆ. 

ಎರಡು ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದಿರುವ ಕೆವಿನ್‌ ಸ್ಪೇಸಿಯ ವಿಷಯದಲ್ಲೂ ಹೀಗೆಯೇ ಆಗಿತ್ತು. ಆತ ಲೈಂಗಿಕ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಾಗ, ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಧಾರಾವಾಹಿ ಸರಣಿಯೆಂದು ಪ್ರಖ್ಯಾತಿ ಪಡೆದಿದ್ದ  “ಹೌಸ್‌ ಆಫ್ ಕಾರ್ಡ್ಸ್‌’ನಲ್ಲಿ  ಪ್ರಮುಖ ಪಾತ್ರಧಾರಿಯಾಗಿದ್ದ. ಆಗ ಧಾರಾವಾಹಿ ನಿರ್ಮಾಣ ಸಂಸ್ಥೆ ನೆಟ್‌ಫ್ಲಿಕ್ಸ್‌ ತನಗೆ 285 ಕೋಟಿ ರೂಪಾಯಿ ಲುಕ್ಸಾನಾಗುತ್ತದೆ ಎಂದು ಗೊತ್ತಿದ್ದರೂ ಸ್ಪೇಸಿಯನ್ನು ಕಿತ್ತುಹಾಕಿತ್ತು. 

ನೆನಪಿರಲಿ, ಇಷ್ಟೊಂದು ದಾಂಧಲೆ ಎಬ್ಬಿಸಿದ್ದ ಕೆವಿನ್‌ ಸ್ಪೇಸಿ ಪ್ರಕರಣ ನಡೆದದ್ದು 26 ವರ್ಷಗಳ ಹಿಂದೆ. ಅಂದರೆ, 1986ರಲ್ಲಿ! ಅಲ್ಲಿ ಪ್ರಕರಣ ಬೆಳಕಿಗೆ ಬಂದಾಗ ಇಷ್ಟು ವರ್ಷ ಏಕೆ ಸುಮ್ಮನಿದ್ದೆ ಎಂದು ದೂರು ನೀಡಿದವನನ್ನು ಯಾರೂ ದೂಷಿಸಲಿಲ್ಲ.   
ಸಿನೆಮಾ ಇಂಡಸ್ಟ್ರಿಯಲ್ಲಿ ಕಿರುಕುಳ ಇದೆಯೆಂದಾದರೆ ಹೆಣ್ಮಕ್ಕಳೇಕೆ ಅಲ್ಲಿರಬೇಕು, ಕೆಲಸ ಬಿಟ್ಟು ಹೊರಡಬೇಕು ಎಂಬ ವಾದಕ್ಕೆ ಅರ್ಥವಿಲ್ಲ. ಎಲ್ಲಿಗೆ ಹೋದರೆ ಅವರು ಸುರಕ್ಷಿತವಾಗಿರುತ್ತಾರೆ? ಮಿ ಟೂ ಕಥೆಗಳು ಕೇವಲ ಇಂಡಸ್ಟ್ರಿಯ ಹೆಣ್ಣುಮಕ್ಕಳಷ್ಟೇ ಎದುರಿಸುತ್ತಾರೆ ಎನ್ನುವ ಭ್ರಮೆ ಬೇಡ. ಶಾಲೆಗಳಲ್ಲಿ, ಹಾಸ್ಟೆಲ್‌ಗ‌ಳಲ್ಲಿ, ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ, ಕಾರ್ಖಾನೆಗಳಲ್ಲಿ, ಬಸ್‌-ರೈಲು 
ಫ‌ುಟ್‌ಪಾತ್‌ಗಳಲ್ಲಿ…ಕಡೆಗೆ ಮನೆಗಳಲ್ಲೂ… ಪ್ರತಿಯೊಬ್ಬ
ಹೆಣ್ಣುಮಗಳೂ ಬೆಚ್ಚಿಬೀಳಿಸುವ ಹತ್ತಾರು ಮಿ ಟೂ ಕಥೆಗಳನ್ನು ಹೇಳಬಲ್ಲಳು. 
ಕೇಳಿಸಿಕೊಳ್ಳುವ ಮನಸ್ಸು ನಮಗಿರಬೇಕಷ್ಟೆ…

ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next