Advertisement

UV Fusion: ನಾನು ಮತ್ತು ಬದುಕಿನ ಕಿಟಕಿ

05:33 PM Nov 26, 2023 | Team Udayavani |

ಬದುಕಿನಲ್ಲಿ ತಿರುವುಗಳು ಸರ್ವೇಸಾಮಾನ್ಯ. ಹಾಗಂತ ಎಲ್ಲವೂ ಒಳ್ಳೆಯ ದಿಕ್ಕಿನಲ್ಲಿ ಅಥವಾ ಒಂದೊಳ್ಳೆ ದಾರಿಯನ್ನು ತೋರುತ್ತವೆ ಅಂದುಕೊಳ್ಳುವುದು ನಮ್ಮ ಮೌಡ್ಯವೇ ಸರಿ. ಹೀಗಿರುವಾಗ ಒಂದು ದಿನ ಬಂದಿರುವ ಸಂದೇಶ ಇಡೀ ಬದುಕಿನ ಯೋಜನೆಯನ್ನು ಬದಲಿಸುತ್ತದೆ. ಹೊಸ ಜಾಗ, ಹಳೇ ಕಟ್ಟಡ, ಹೊಸ ಮುಖಗಳು, ವಿಭಿನ್ನ-ವಿಚಿತ್ರ ಮನಸ್ಥಿತಿಗಳ ಪರಿಚಯ. ಕತ್ತಲೆ ಬದುಕಿಗೆ ಬೆಳಕು ಬಂದಂತೆ ಅನಿಸಿದರೂ ಇಲ್ಲಿ ಹೇಗೆ ಕಾಲ ಕಳೆಯುವುದು ಎನ್ನುವ ಯೋಚನೆ.

Advertisement

ಮೊದಲ ದಿನ ಖುಷಿಯ ಜತೆಗೊಂದಿಷ್ಟು ಅಳುಕು. ಬಂದಾಗಿದೆ ಮುಂಬರುವ ಎಲ್ಲ ಅಡೆತಡೆಗಳನ್ನು ಎದುರಿಸಲೇಬೇಕು ಎನ್ನುವ ಧೃಡ ನಿರ್ಧಾರವು ಒಂದೆಡೆ ಇದೆ. ನಗುಮುಖದ ಮೊದಲ ಪರಿಚಯದ ಜತೆಗೆ ಹೆಜ್ಜೆ ಇಡುತ್ತಾ ಮುಂದೆ ನಡೆದು ಸೇರಬೇಕಾದ ಜಾಗ ಸೇರಿದಾಗ ಕಂಡಿದ್ದು ಆ ಕಿಟಕಿ.

ಬೇರೋಬ್ಬರು ಕುಳಿತಿದ್ದ ಆ ಕಿಟಕಿ ಬದಿ ಜಾಗ ಪ್ರತಿಬಾರಿ ಅತ್ತ ಸೆಳೆಯುತ್ತಿತ್ತು. ಹೋಗಬೇಕು ಎನಿಸಿದಾಗೆಲ್ಲ ಒಂಥರಾ ಅಂಜಿಕೆಯಾದಂತೆ ಹೊಸ ಜಾಗ ಎಂದೂ ಇರಬಹುದು. ಒಬ್ಬೊಬ್ಬರಂತೆ ಎಲ್ಲರ ಪರಿಚಯವಾಗತೊಡಗಿತು. ಅಂತರಗಳ ಸಂಭಾಷಣೆ ಆತ್ಮೀಯತೆಯ ಹೆಚ್ಚಿಸಿತು, ಬದುಕಿನ ಜ್ಯೋತಿ ಬೆಳಗಿದಂತೆ ದಿನಗಳುರುಳಿದವು. ಕಿಟಕಿ ಕಡೆಗೆ ಒಂದೆರಡು ಬಾರಿ ನೆಪವೊಡ್ಡಿ ಹೋಗಿದ್ದು ಖುಷಿ ಕೊಟ್ಟಿತಾದರೂ, ಹಿಂದಿರುಗಿದಾಗೆಲ್ಲ ಏನೋ ಕಳೆದುಕೊಂಡಂತೆ ಅನಿಸತೊಡಗಿತು.

ಕಿಟಕಿಯಲ್ಲಿ ಅಂತದ್ದೇನಿರಬಹುದು ಎನ್ನುವ ಕುತೂಹಲ ಇದೀಗ ನಿಮಗೂ ಇರಬಹುದು ಅಲ್ವಾ? ನಾನು ಕಿಟಕಿ ನೋಡಿದಾಗೆಲ್ಲ ಬದುಕಿನಲ್ಲಿ ಕಾಣುವ ಅನೇಕ ಮಜಲುಗಳ ನೆನಪಾಗುವುದು ಹೇಗೆ ಎನ್ನುತ್ತೀರಾ. ಕಣ್ಣಿಗೆ ಎಲ್ಲವೂ ಸುಂದರವಾಗಿ ಕಂಡರೂ ಅದನ್ನು ತಲುಪಲು ಕಿಟಕಿಯಲ್ಲಿ ಕಾಣುವ ಸರಳುಗಳ ಹಾಗೆ ಸರದಿ ನಿಂತಿರುವ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಹಾಗಾಗಿ ಈ ಕಿಟಕಿಗಳು ಬದುಕಿನ ಮಜಲುಗಳನ್ನು ತೋರ್ಪಡಿಸುತ್ತ ಎಚ್ಚರಿಸುತ್ತವೆ ಎಂದರೆ ತಪ್ಪಿಲ್ಲ.

ದಿನಗಳುರುಳಿ ತಿಂಗಳಾದರೂ ಕಿಟಕಿ ಗೋಜು ಕಡಿಮೆ ಆಗಲೇ ಇಲ್ಲ. ಖಾಲಿಯಾಗಿ ಕಾಣುವ ಜಾಗ ಪದೇ ಪದೇ ಕಾಡತೊಡಗಿತು,ಆಗಿದ್ಹಾಗಲಿ ಎನ್ನುತ್ತಾ ಮಾತಿನ ಮಧ್ಯೆ ನಾನಲ್ಲಿ ಕುಳಿತುಕೊಳ್ಳಬಹುದೆ ಎಂದೆ ಅಷ್ಟೇ, ಸರಿ ಕುಳಿತುಕೊಳ್ಳಿ ಎಂದಾಗ ಖುಷಿಯ ಪರಿವೇ ಇಲ್ಲ. ಸಮಯ ವ್ಯಯಿಸದೆ ಅಲ್ಲಿ ಸೇರಿದೆ. ತಂಪು ತಂಗಾಳಿ ಕೈಬೀಸಿ ಸ್ವಾಗತಿಸಲು ನಿಂತಂತೆ ಭಾಸವಾಯಿತು. ಬಾನಾಡಿಗಳ ಇಂಪು ಕಲರವ ಹಿತವೆನಿಸಿತು.

Advertisement

ಬಾನೆತ್ತರದ ಕಟ್ಟಡ ನೋಡಿದಾಗೆಲ್ಲ ಸಾಧನೆಯ ಮೆಟ್ಟಿಲುಗಳಂತೆ ಕಂಡರೂ, ಎಲ್ಲವೂ ನಾವು ಅಂದುಕೊಂಡಂತೆ ಆಗದು, ಸಾಲು ಸಾಲು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆಗಿದ್ಹಾಗಲಿ ನನ್ನದೆನ್ನುವುದು ಬಳಿಯೇ ಇರುವಾಗ ಇನ್ನೊಂದರ ಮೇಲೆ ಮೋಹ ಇರಕೂಡದು ಎನ್ನುವ ಹಾಗೆ ಬದುಕಬೇಕು. ಅಂದುಕೊಂಡಿದ್ದು ಸಿಗಬೇಕು ಎಂದರೆ ನಿಸ್ವಾರ್ಥ ಪ್ರಯತ್ನ ಕೂಡ ಮುಖ್ಯವಾಗುತ್ತದೆ. ಸ್ವಾರ್ಥ ಬದುಕು ಕ್ಷಣಿಕ, ಒಡೆದ ಗಾಜಿನಂತೆ ಹೋದಲ್ಲೆಲ್ಲ ಚುಚ್ಚುತ್ತವೆ. ಹಾಗಾಗಿ ಶ್ರಮದ ಬೆಲೆಗೆ ಪ್ರತಿಫ‌ಲ ಖಂಡಿತ. ಬದುಕು ಪಂಜರದಂತೆ ಕಾಣುವ ಕಿಟಕಿಯಂತೆ ಅಲ್ಲಿಂದ ಹೊರಬರುವ ಪ್ರಯತ್ನ ಮಾತ್ರ ನಮ್ಮದಾಗಿರಬೇಕು.

-ವಿಜಿತ ಅಮೀನ್‌

ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next