ಪದವಿಪೂರ್ವ ಶಿಕ್ಷಣದ ನಂತರ ನನ್ನ ಪದವಿ ವ್ಯಾಸಂಗಕ್ಕಾಗಿ ಸೀಟ್ ಸಿಗಲು ನನ್ನ ಅಲೆದಾಟ ಅದಾಗಲೇ ಶುರುವಾಗಿತ್ತಷ್ಟೆ. ಕೈಯಲ್ಲಿ ಮಾರ್ಕ್ಸ್ಕಾರ್ಡ್ ಹಿಡಿದುಕೊಂಡು ಸೂಕ್ತ ಕಾಲೇಜಿಗೆ ಸೇರಲು ಅಲೆದಾಟ ಶುರುವಾಗಿತ್ತು. ಹುಡುಕುತ್ತ ಹುಡುಕುತ್ತ ಬಂದು ನಿಂತಿದ್ದೇ ಒಂದು ಪುರಾತನ ಕಾಲೇಜಿಗೆ. ಅದು ಎಷ್ಟು ಪುರಾತನ, ಭವ್ಯ ಕುಂಕುಮ ವರ್ಣದ, ಹಸಿರೈಸಿರಿಯ ವಿಶ್ವವಿದ್ಯಾನಿಲಯ ಕಾಲೇಜಿಗೆ ಬಿಕಾಂಗೆ ಸೇರೋಣ ಅಂತಾ ಕಲ್ಪಿಸಿಕೊಂಡು ಬಂದಾತ ನನ್ನ ಮಾರ್ಕ್ಸ್ ವಿಷಯಕ್ಕೆ ಹೊಂದಾಣಿಕೆ ಕಾಣದಿದ್ದಾಗ ಶತಾಯಗತಾಯ ಈ ಕಾಲೇಜ್ ಮೆಟ್ಟಿಲೇರಲೇಬೇಕೆನ್ನುವ ಹಠ ಮನದೊಳಗಿತ್ತು. ಜಾತಕದಲ್ಲಿ , ಅಲ್ಲಿ ಇಲ್ಲಿ ಕಾಣುತ್ತಿದ್ದ ಭವಿಷ್ಯವಾಣಿಗಳಲ್ಲಿಯೂ ಸಹ “ನಿಮಗೆ ಪತ್ರಿಕೋದ್ಯಮದಲ್ಲಿ ಉತ್ತಮ ಭವಿಷ್ಯವಿದೆ’ ಎಂಬ ಮಾತೇ ಕಾಣಬರುತ್ತಿದ್ದರಿಂದಾಗಿ ಪತ್ರಿಕೋದ್ಯಮವನ್ನೇ ಆಯ್ದುಕೊಳ್ಳಲು ಪ್ರೇರೇಪಿಸಿತು.
ಬಿ.ಕಾಂ. ಬೇಕು ಅನ್ನುವಂತಿದ್ದರೆ ತುಂಬಾ ಆಯ್ಕೆಗಳಿದ್ದವು. ಅಂದರೆ ಬೇರೆ ಕಾಲೇಜ್‌ಗಳಿದ್ದವು. ಆದರೆ ಅದ್ಯಾಕೋ ಗೊತ್ತಿಲ್ಲ ಆ ಕಾಲೇಜು ತುಂಬಾನೇ ಇಷ್ಟವಾಗಿತ್ತು. ಕಾಲೇಜು ಪ್ರಾರಂಭವಾಗಿ ದಿನ ಕಳೆದಂತೆ, ಆ ಕ್ಲಾಸ್ ಈ ಕ್ಲಾಸ್ ಅಂತ ತರಗತಿಯ ರಂಗು ಮೆತ್ತಿಕೊಂಡು, ಅಲ್ಲೇ ಅಂಟಿಕೊಂಡು ಬಿಡುವ ಜಾಯಮಾನ ನನ್ನದಾಗಿರಲಿಲ್ಲ. ಬಹುಶಃ ನನ್ನೊಳಗಿನ ಸಂಶೋಧನಾ ಹುಚ್ಚು ವಿಶ್ವವಿದ್ಯಾನಿಲಯ ಕಾಲೇಜು ಎಷ್ಟು ವರ್ಷ ಹಳೆಯದು? ಇದರ ಇತಿಹಾಸ – ವೈಶಿಷ್ಟ್ಯ ಇತ್ಯಾದಿಗಳ ಕುರಿತಾದ ಕುತೂಹಲದ ಪ್ರಶ್ನೆಗಳಿಗೆ ತೆರೆ ಎಳೆಯಲು ಹೊರಟಿತ್ತು.
ಅದರಲ್ಲೂ ಕೆಲವು ತರಗತಿಗಳ ಪ್ರಾಕಾರ, ಗೋಡೆ, ಅಂಚು – ಹೆಂಚು – ಬೆಂಚುಗಳು ಹೇಗಿತ್ತು ಅಂದರೆ ಯಾರಾದರೂ ಸಿನೆಮಾ ನಿರ್ಮಾಪಕರು ಭೂತದ ಸಿನೆಮಾ ತೆಗೆಯುವುದಾದರೆ ನಮ್ಮ ಕಾಲೇಜಿನ ಕ್ಲಾಸ್‌ಗಳು ಯಾವುದೇ ಪರಿಷ್ಕರಣೆಯಿಲ್ಲದೆ ಸಂಪೂರ್ಣ ಸನ್ನಾಹಗೊಂಡು ನಿಂತಿದ್ದಂತೆ ಭಾಸವಾಗುತ್ತಿತ್ತು. ಆದರೆ, ನನಗಿದು ಕಾಲೇಜು ತುಂಬಾ ಹಳೆಯದ್ದು ಮತ್ತು ಬ್ರಿಟಿಷರು ಕಟ್ಟಿಸಿದ್ದು ಅನ್ನುವುದು ಗೊತ್ತಾಗಿದ್ದು ತಡವಾಗಿಯೇ! ಆದರೆ, ಎಷ್ಟು ವರ್ಷ ಹಳೆಯದು ಅನ್ನುವುದಕ್ಕೆ ಯಾವುದೇ ಪುರಾವೆ ನನಗೆ ಸಿಕ್ಕಿರಲಿಲ್ಲ. ಆವತ್ತೂಮ್ಮೆ ಹೀಗೆ ಕಾರಿಡಾರ್ ಬಳಿ ಹಾಕುತ್ತಿದ್ದ ಲೇಖನಗಳ ರಸದೌತಣವನ್ನು ಸವಿಯುತ್ತಿರುವಾಗ, ನಮ್ಮ “ಅರ್ಥಶಾಸ್ತ್ರ’ದ ಕ್ಷಮಿಸಿ! “ನಗುಶಾಸ್ತ್ರ’ದ ಉಪನ್ಯಾಸಕಿ ಹಾಗೂ ಖ್ಯಾತ ಹಾಸ್ಯ ಲೇಖಕಿ ಆಗಿರುವ ಭುವನೇಶ್ವರಿ ಹೆಗಡೆಯವರು ಆ ಕಾಲೇಜಿನ ಇತಿಹಾಸದ ಬಗ್ಗೆ ಒಂದು ಲೇಖನ ಬರೆದಿದ್ದರು. ನನ್ನ ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಆ ಲೇಖನ ಉತ್ತರವಾಗಿತ್ತು ಮತ್ತು ಅನೇಕ ಆಶ್ಚರ್ಯವನ್ನು ತಂದೊಡ್ಡಿತು. ಮತ್ತೆ ಈ ವಿದ್ಯಾಸಂಸ್ಥೆಯ ಬಗ್ಗೆ ಅನೇಕ ಲೇಖನಗಳನ್ನು ಓದಿದ ನನಗೆ ಈ ಕಾಲೇಜಿನಲ್ಲಿ ಸೀಟ್ ಸಿಕ್ಕಿದ್ದು ಪೂರ್ವಜನ್ಮದ ಸುಕೃತ ಫಲವೋ ಅನ್ನುವ ಭಾವನೆ ಮೂಡಿದ್ದು ಮಾತ್ರ ಮಿಥ್ಯೆಯಲ್ಲ !
ಅಂಥಾದ್ದೇನಿದೆ ಈ ಕಾಲೇಜಿನಲ್ಲಿ? ಹಾಗಾದರೆ, ಈ ಕಾಲೇಜ್ ಎಲ್ಲಿದೆ? ಏನು ವಿಶೇಷ? ಎಂಬ ಹತ್ತಾರು ಪ್ರಶ್ನೆಗಳಿಗೆ ಜವಾಬು ಇಲ್ಲಿದೆ. ನಾನು ಹೇಳುತ್ತಿರುವ ಕಾಲೇಜು ಇರುವುದು ಮಂಗಳೂರಿನ ಹೃದಯಭಾಗದ ಅಪ್ಪಣ್ಣನಕಟ್ಟೆಯ (ಈಗಿನ ಹಂಪನಕಟ್ಟೆ )ಯಲ್ಲಿ . ವಿಶ್ವವಿದ್ಯಾನಿಲಯ ಕಾಲೇಜು ನೂರು ವರ್ಷದಾಚೆಗೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಸ್ಥಾಪನೆ ಆದ ಕಾಲೇಜು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಹಸುವು-ಕಸುವು ನಿರೂಪಣೆಗೊಳ್ಳುತ್ತಿದ್ದ ಶುಭಶಕೆ ಅದು! ಆಗಿನ ಕಾಲದಲ್ಲಿ ಭಾರತೀಯ ಗುರುಕುಲ ಶಿಕ್ಷಣ ಪದ್ಧತಿ ಮಾಯವಾಗಿ ಮೆಕಾಲೆ ಶಿಕ್ಷಣ ಬಂದ ಕಾಲ ಜರ್ಮನಿ ಮೂಲದ ಬಾಸೆಲ್ ಮಿಶನ್ ಅವರು ಪ್ರೊವಿನ್ಶಿಯಲ್ ಸ್ಕೂಲ್ ಎಂಬ ಪ್ರಥಮ ಆಂಗ್ಲ ಮಾಧ್ಯಮ ಶಾಲೆಯೊಂದಿಗೆ ಆರಂಭವಾಗಿ ನಂತರದ ದಿನಗಳಲ್ಲಿ ಪದವಿ ತರಗತಿಗಳನ್ನು ಆರಂಭಿಸಿ ಸರಕಾರಿ ಗವರ್ನಮೆಂಟ್ ಕಾಲೇಜು ಎಂದು ಮರುನಾಮಕರಣಗೊಂಡಿತು. ಕರಾವಳಿ ಸುತ್ತಮುತ್ತಲಿನ ಜನರು ಶಿಕ್ಷಣ ದಾಹಕ್ಕಾಗಿ ದೂರದೂರಿಗೆ ಅಲೆದಾಡುವ ಪ್ರಸಂಗ ಕಡಿಮೆ ಆಯಿತು ಎನ್ನಬಹುದು.
ಕಾಲೇಜಿನ ಕಟ್ಟಡದ ವಿನ್ಯಾಸ “ಇಂಡೋ ಗೋಥಿಕ್’ ಶೈಲಿಯಲ್ಲಿ ನೋಡುಗರನ್ನು ಬೆರಗುಗೊಳಿಸುವಂತಹ ಕಲಾತ್ಮಕ ರಚನೆಯಿದೆ. ಅಲ್ಲದೆ ಸಿಮೆಂಟ್ ರಹಿತವಾಗಿ ಬೆಲ್ಲದ ಸಹಾಯದಿಂದ ಕಟ್ಟಿದ್ದಾರೆ ಎನ್ನುವುದು ಮತ್ತೂಂದು ಆಶ್ಚರ್ಯದ ಸಂಗತಿ. ಕೆಂಪು ವರ್ಣದ ಕಾಲೇಜಾಗಿ ದೇಶದ ಪ್ರಮುಖ ಹದಿನೇಳು ಕಟ್ಟಡಗಳಲ್ಲಿ ಒಂದೆನಿಸಿದೆ. ದಕ್ಷಿಣಕನ್ನಡ ಬುದ್ಧಿವಂತರ ಜಿಲ್ಲೆಯೆನಿಸಲು ಈ ಕಾಲೇಜಿನ ಪಾತ್ರ ಅತೀ ಮುಖ್ಯ ಎನ್ನುವುದು ನನ್ನ ಅನಿಸಿಕೆ. ಈ ಕಾಲೇಜಿನಿಂದ ಜ್ಞಾನಾರ್ಜಿಸಿದ ಅದೆಷ್ಟೋ ಮಂದಿ ದೇಶ-ವಿದೇಶದಲ್ಲಿ ಪ್ರಖ್ಯಾತರಾಗಿದ್ದಾರೆ. ಅದೆಷ್ಟು ಮಹಾನ್ ಸಾಹಿತಿಗಳು ನಾವು ಕುಳಿತುಕೊಂಡು ಪಾಠ ಕೇಳುತ್ತಿರುವ ಕ್ಲಾಸಿನಲ್ಲೇ ಓದುತ್ತಿದ್ದರು ಎಂದು ನೆನೆದಾಗ ಮೈಯ ರೋಮಗಳು ಉತ್ತಿಷ್ಠ ಸ್ಥಿತಿಯಲ್ಲಿರುತ್ತದೆ. ಹೌದು, ಖ್ಯಾತ ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರು, ಖ್ಯಾತ ಸಾಹಿತಿ ಪಂಜೆ ಮಂಗೇಶ ರಾಯರು, ರಾಷ್ಟ್ರಕವಿ ಗೋವಿಂದ ಪೈ, ದಲಿತ ಸಮಾಜ ಸುಧಾರಕ ಕುದುಲ್ ರಂಗರಾವ್, ಸಾಹಿತಿ ಬೆನಗಲ್ ರಾಮರಾವ್, ಸಾಮಾಜಿಕ ಕಾರ್ಯಕರ್ತೆ-ರಾಷ್ಟ್ರೀಯ ಕರಕುಶಲ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ರಾಜಕೀಯ ಕ್ಷೇತ್ರದಲ್ಲಿ ಲೋಕಸಭೆಯ ಮಾಜಿ ಉಪ ಸ್ಪೀಕರ್ ಪಿ.ಎಂ ಸಯೀದ್, ರಾಜ್ಯ ಅರಣ್ಯಖಾತೆ ಸಚಿವ ರಮಾನಾಥ ರೈ ಮತ್ತು ಈ ಕಾಲೇಜಿನ ಗುಣಮಟ್ಟವನ್ನು ತುತ್ತತುದಿಗೆ ಕೊಂಡೊಯ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ- ಇಂತಹ ಹಲವು ಸಾಧಕರೆಲ್ಲ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದರು ಎನ್ನುವುದೇ ನಮ್ಮ ಕಾಲೇಜಿನ ಹಿರಿಮೆ-ಗರಿಮೆಯನ್ನು ಇನ್ನಷ್ಟು ಎತ್ತರಕ್ಕೇರಿಸುವುದು. ಇದೇ ಕಾರಣಕ್ಕಾಗಿ ಲಕ್ಷ ಲಕ್ಷ ಕೊಟ್ಟು ಖಾಸಗಿ ಶಿಕ್ಷಣ ಪಡೆಯುವಲ್ಲಿ ಕಾಣುವ ಗುಣಮಟ್ಟದ ಕೊರತೆಯನ್ನು ನೀಗಿಸಬಲ್ಲ ದಾಡ್ಯìತೆ ಇಲ್ಲಿನ ವೈಶಿಷ್ಟ್ಯ.
ನಮ್ಮ ಕಾಲೇಜು ಎಷ್ಟು ಹಳೆಯದಾದರೂ ಇಲ್ಲಿ ಅದೆಷ್ಟೋ ಕೌತುಕದ ಘಟನೆಗಳು ಈ ಕಾಲೇಜಿನ ಸುತ್ತ ಸುತ್ತಿಕೊಂಡಿದೆ. ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೋರ್ ಅವರು ಕಾಲೇಜಿಗೆ 1922 ರಲ್ಲಿ ಬಂದು ಭಾಷಣ ಮತ್ತು ಕವಿತೆಯನ್ನು ವಾಚಿಸಿದ್ದರು. ನಂತರ ಅವರ ನೆನಪಿಗಾಗಿ ಅವರು ಮಾತನಾಡಿದ ವೇದಿಕೆಯನ್ನು 1966 ನವೀಕರಣಗೊಂಡ ಬಳಿಕ “ರವಿಂದ್ರ ಕಲಾಭವನ’ ಎಂದು ನಾಮಕರಣ ಮಾಡಿಕೊಳ್ಳಲಾಯಿತು. ಇದೇ ವೇದಿಕೆಯಲ್ಲಿ ಗಾಂಧೀಜಿಯ ಚಿತಾಭಸ್ಮವನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತಂತೆ.
ಇಲ್ಲಿರುವ ಹಳೆಯ ಕಾಲದ ಗ್ರಂಥಾಲಯವನ್ನು ಹುಡುಕಿಕೊಂಡು ಎಲ್ಲೂ ಸಿಗದ ಪುಸ್ತಕಕ್ಕಾಗಿ ದೂರದ ರಾಜ್ಯದವರು ಬಂದು ಓದುತ್ತಾರೆ ಎಂದಾಗ ಇಲ್ಲಿರುವ ಪುಸ್ತಕದ ಸಂಪತ್ತು ಎಷ್ಟಿದೆಯೆನ್ನುವುದು ಊಹಿಸಲೂ ಸಹ ಅಸಾಧ್ಯ. ತನ್ನ ನೂರೈವತ್ತು ವರ್ಷಗಳ ವಿದ್ಯಾದಾನದ ಹಾದಿಯಲ್ಲಿ ಲೆಕ್ಕಕ್ಕೆ ಸಿಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟಿರುವ ಈ ಕಾಲೇಜು ನಿಜ ಅರ್ಥದಲ್ಲಿ ಜ್ಞಾನ ದೇಗುಲವೇ.
ದೇಶದ ಪಾರಂಪರಿಕ ಕಟ್ಟಡಗಳನ್ನು ಕಾಪಾಡುವ ನಿಟ್ಟಿನಲ್ಲಿ ಯುಜಿಸಿ ದೇಶದ 19 ಕಾಲೇಜುಗಳಿಗೆ ಪಾರಂಪರಿಕ ಸ್ಮಾರಕ ನೀಡಿದೆ. ಈ ಪೈಕಿ 150 ವರ್ಷ ಇತಿಹಾಸ ಇರುವ ನಮ್ಮ ಕಾಲೇಜು ಈ ಗೌರವಕ್ಕೆ ಪಾತ್ರವಾಗಿರುವುದು ನಮ್ಮ ಈ ಶಿಕ್ಷಣ ಸಂಸ್ಥೆಗಿರುವ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸಿಬಿಟ್ಟಿದೆ ಮತ್ತು ಕರ್ನಾಟಕದಿಂದ ಏಕೈಕ ಕಾಲೇಜು ಇದಾಗಿದೆ ಎನ್ನುವುದು ಅಭಿಮಾನದ ವಿಚಾರ.
ಇಂತಹ ಅಮೋಘ ಇತಿಹಾಸ ಹೊಂದಿರುವ ಇಂದು ಕಾಲೇಜು ನೂರೈವತ್ತರ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೊನ್ನೆ ಇದೇ ವಿಷಯದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರಾಜಕಾರಣಿಗಳು, ಹಿರಿಯ ಹಳೆ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಕಾಲೇಜಿನ ಉಪನ್ಯಾಸಕರು ಎಲ್ಲ ಸೇರಿದ್ದರು. ಆ ಸಂದರ್ಭದಲ್ಲಿ ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಕಾರಣ ಸಭೆಯ ಸಂಪೂರ್ಣ ಚಿತ್ರೀಕರಣದ ಜವಾಬ್ದಾರಿ ನನ್ನ ಮೇಲಿತ್ತು. ಆ ಸಭೆಯಲ್ಲಿ ಈ ಕಾಲೇಜಿನ ಬಗ್ಗೆ ಎಲ್ಲರಿಗೂ ತಿಳಿಸಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜಿನ ವಾರ್ಷಿಕೋತ್ಸವದ ಬಗ್ಗೆ ಪ್ರಚಾರ ಆಗಬೇಕು ಎನ್ನುವುದು ಎಲ್ಲರ ಒಕ್ಕೊರಲ ಅಭಿಪ್ರಾಯ ಆಗಿತ್ತು.
ವಿಶ್ವಾಸ್ ಅಡ್ಯಾರ್
ಪತ್ರಿಕೋದ್ಯಮ ವಿದ್ಯಾರ್ಥಿ ವಿ.ವಿ. ಕಾಲೇಜು, ಮಂಗಳೂರು