Advertisement
ನನ್ನ ಪದವಿ ಕಾಲೇಜಿನಲ್ಲಿ ಕಳೆದ ದಿನಗಳನ್ನು ಒಮ್ಮೆ ಹಿಂತಿರುಗಿ ನೋಡಿದರೆ ಅಬ್ಟಾ! ಅವು ದಿನಗಳಲ್ಲ ಸುವರ್ಣಯುಗವೇ ಸರಿ. ಕಳೆದು ಹೋದ ದಿನಗಳಿಗೆ ಮತ್ತೆ ಹೋಗಿ ಬರಬಹುದಾದ ತಂತ್ರಜ್ಞಾನ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆಲ್ಲ ಅನ್ನಿಸುವುದುಂಟು. ಐದಕ್ಕಿಂತ ಸ್ವಲ್ಪವೇ ಸ್ವಲ್ಪ ಹೆಚ್ಚು ಅಡಿ ಎತ್ತರವಿದ್ದ ನಾನು ಕುಳಿತುಕೊಳ್ಳುತ್ತಿದ್ದುದು ಫಸ್ಟ್ ಬೆಂಚಿನಲ್ಲಿ.
ಮೊದಲಿಗೆ ಅವಳ ನೋಡಿದೆ ಕಾಲೇಜಲ್ಲಿ…
ಅವಳ ಹೆಸರೂ ತಿಳಿದಿತ್ತು “ಮಲ್ಲಿ’
ನಮಗಿಬ್ಬರಿಗೂ ಅಗಿತ್ತು ಮಾತುಕತೆ, ಸನ್ನೆಯಲ್ಲಿ
ಸಿಲುಕಿಬಿಟ್ಟೆನಾ ನಾನು ಪ್ರೀತಿಯ ಬಲೆಯಲ್ಲಿ?
ಗೊತ್ತಿತ್ತು ನನಗೆ, ನಾನಿದ್ದೆ ಅವಳದೇ ಗುಂಗಿನಲ್ಲಿ
ಅವಳಿಗೆ ಚಿಂತೆ, ನಾ ಫೇಲಾದರೆ, ಎಕ್ಸಾಮಿನಲ್ಲಿ!
ಗೊತ್ತಿಲ್ಲ ಅವಳಿಗೆ, ನಾನು ಬಲು ಚಾಲಾಕಿ…
ಬರುತ್ತಿದ್ದೆ 3 ಗಂಟೆಯದ್ದನ್ನು 1 ಗಂಟೆಯಲ್ಲಿ ಗೀಚಾಕಿ!
ನಾನೂ ಸೆಳೆದಿದ್ದೆ “ಮಲ್ಲಿ’ಯ ಮನಸ್ಸನ್ನು
ಹೇಳಿಕೊಂಡೆವು ಇಬ್ಬರೂ, ಸರಿಸಿ ನಾಚಿಕೆಯನ್ನು
ಆಗೋಣವೇ ಮದುವೆ, ಒಪ್ಪಿಸಿ ಎಲ್ಲರನ್ನೂ?
ವರುಣನೂ ಸೂಚಿಸಿದ್ದನೊಪ್ಪಿಗೆ ಸುರಿಸಿ ಮಳೆಯನ್ನು!
ಎಲ್ಲರಿಚ್ಛೆಯಂತೆಯೇ ಆಯಿತು ಮದುವೆ
ಕಳೆದದ್ದೇ ಗೊತ್ತಾಗಲಿಲ್ಲ ಒಂದಿಡೀ ವರುಷವೇ!
ಅರಿವಾಗಿದೆ ಆಗಕ್ಕೂ-ಈಗಕ್ಕೂ ಇರುವ ವ್ಯತ್ಯಾಸ
ಬೇರೇನೂ ಇಲ್ಲ, ಮಾತು ಬಿಚ್ಚುವದೇ ದುಸ್ಸಾಹಸ! ಎಂದು ಕವನ ಬರೆದು, ಮರುದಿನ ನಮ್ಮ ಕಾಲೇಜಿನ ನೋಟೀಸು ಬೋರ್ಡಿನಲ್ಲಿ, ಸಂಬಂಧಿಕರಿಗೆ, ಫೇಸುಬುಕ್ಕಿನಲ್ಲಿ ಹಾಕಿದೊಡನೆಯೇ ಸಾಕಷ್ಟು ಅಭಿನಂದನೆಗಳು ಬಂತು. ಕೆಲವರು ಅದು ಯಾರು ಮಲ್ಲಿ? ಎಂದು ಕೇಳುತ್ತಿದ್ದರೆ, ನನ್ನದೊಂದೇ ಉತ್ತರ, ಯಾರೂ ಇಲ್ಲ. ಅದು ಕೇವಲ ಕಾಲ್ಪನಿಕವೆಂದು. ಕೆಲವೊಬ್ಬರು “ಪ್ರೇಮಕವಿ’ ಎಂದು ತಾತ್ಕಾಲಿಕ ಬಿರುದನ್ನೂ ನೀಡಿದರು. ಅದೇನೆ ಇರಲಿ, ತರಗತಿಯಲ್ಲಿ ಪಾಠ ಕೇಳಲು ಇಲ್ಲದಿದ್ದ ಮನಸ್ಸು, ಯಾರಲ್ಲಿ ಯಾವ್ಯಾವ ಪ್ರತಿಭೆ ಅಡಗಿದೆ ಎಂತಲೂ ಕಂಡುಹಿಡಿಯಲು ಸಹಕಾರಿ ಎಂದು ಆಗಲೇ ತಿಳಿದದ್ದು. ವಿಪರ್ಯಾಸವೆಂದರೆ ಹೀಗೆಯೇ ಕವನಗಳ ಬರವಣಿಗೆಯ ಮೇಲೆ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ನನ್ನ ಕತೆ ಇದಾದರೆ, ನನ್ನ ಆಪ್ತಮಿತ್ರ ದೀಪಕ್ ನದ್ದು ಇನ್ನೊಂದು ರೀತಿ. ಅವನು ಕಲಿಯಲು ಹುಷಾರು, ಹಾಗೆಂದು ತರಗತಿಯಲ್ಲಿ ಪಾಠ ಸರಿಯಾಗಿ ಕೇಳುತ್ತಿದ್ದನೆಂದಲ್ಲ. ಕಾರಣ ಅವನು ನನ್ನಂತೆಯೇ ಇದ್ದರೂ ಸ್ವಲ್ಪ ಭಿನ್ನ. ಅವನು ಕವನ ಬರೆಯುತ್ತಿರಲಿಲ್ಲ, ಕಾದಂಬರಿ ಬರೆಯಲು ಪ್ರಾರಂಭಿಸಿದ್ದ. ನನ್ನಂತೆ ಕನ್ನಡ ಭಾಷೆಯಲ್ಲಿ ಬರೆಯುತ್ತಿರಲಿಲ್ಲ, ಇಂಗ್ಲಿಷ್‌ನಲ್ಲಿ ಬರೆಯಲಾರಂಭಿಸಿದ್ದ. ನಮ್ಮ ಬಾಂಧವ್ಯ, ಗೆಳೆತನ ಹೇಗೆ ಪ್ರಾರಂಭವಾಯಿತು ಎನ್ನುವುದೇ ಇನ್ನೂ ನಿಗೂಢ. ಆದರೂ ಜೀವನಪರ್ಯಂತ ಹುಡುಕಿದರೂ ಅವನಂತಹ ಗೆಳೆಯ ಸಿಗಲು ಸ್ವಲ್ಪ ಕಷ್ಟವೇ ಸರಿ. ಅದೇನೆ ಇರಲಿ ಮತ್ತದೇ ಫಸ್ಟ್ ಬೆಂಚ್ ವಿಷಯಕ್ಕೆ ಬರುವುದಾದರೆ, ನಾವೇನು ಬಯಸಿ ಅಲ್ಲಿ ಕೂತದ್ದಲ್ಲ. ನಮ್ಮ ಹಣೆಯಲ್ಲಿ ಬರೆದಿತ್ತೋ ಅದೂ ಗೊತ್ತಿಲ್ಲ ಆದರೆ ನಮ್ಮ ಎತ್ತರವಂತೂ ಅಧ್ಯಾಪಕರಲ್ಲಿ “ಇವರನ್ನು ಫಸ್ಟ್ ಬೆಂಚಿನಲ್ಲಿಯೇ ಕುಳ್ಳಿರಿಸಿ’ ಎಂದು ಕೂಗಿ ಹೇಳುತ್ತಿತ್ತೋ ಏನೋ.
Related Articles
Advertisement
– ಅವನೀಶ್ ಭಟ್, ಸವಣೂರು