Advertisement

MBBS, BDS ಶುಲ್ಕ ನಿಗದಿ

09:17 PM Aug 06, 2023 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪಡೆಯುವ ಸರ್ಕಾರಿ ಮತ್ತು ಖಾಸಗಿ ಎಂಬಿಬಿಎಸ್‌ ಸೀಟುಗಳ ಶುಲ್ಕದಲ್ಲಿ ಪ್ರಸಕ್ತ ವರ್ಷದಲ್ಲಿ ಯಥಾಸ್ಥಿತಿ (ಕಳೆದ ವರ್ಷದ ಶುಲ್ಕದಷ್ಟು) ಇರಲಿದೆ. ಆದರೆ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಕಳೆದ ವರ್ಷಕ್ಕಿಂತ ಶೇ.10ರಷ್ಟು ಏರಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Advertisement

ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಸಂಘ (ಕೆಆರ್‌ಎಲ್‌ಎಂಪಿಸಿಎ) ಮತ್ತು ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (ಎಎಂಪಿಸಿಕೆ)ದ ಸದಸ್ಯ ವೈದ್ಯಕೀಯ ಮತ್ತು ದಂತವೈದ್ಯಕೀಯ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆಯನ್ನು ಸರ್ಕಾರ ಮಾಡಿಲ್ಲ. ಆದರೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (ಕೆಪಿಸಿಎಫ್)ದ ಸದಸ್ಯ ಕಾಲೇಜುಗಳ ಖಾಸಗಿ ಕೋಟಾದ ಶುಲ್ಕದಲ್ಲಿ ಮಾತ್ರ ಏರಿಕೆ ಮಾಡಲಾಗಿದೆ.

ಹಿಂದಿನ ವರ್ಷ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳ ಶುಲ್ಕವನ್ನು ಸರ್ಕಾರ ಏರಿಸಿರಲಿಲ್ಲ. ಆದರೆ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ಶುಲ್ಕವನ್ನು ಶೇ.10ರಷ್ಟು ಏರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಶುಲ್ಕವನ್ನು ಮಾತ್ರ ವೈದ್ಯಕೀಯ ಶಿಕ್ಷಣ ಇಲಾಖೆ ಏರಿಸಿದೆ.

ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್‌ ಸೀಟ್‌ಗೆ 50 ಸಾವಿರ ರೂ ಮತ್ತು ದಂತ ವೈದ್ಯಕೀಯ ಸೀಟ್‌ಗೆ 40 ಸಾವಿರ ರೂ. ನಿಗದಿಪಡಿಸಲಾಗಿದೆ.
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಂಘದಲ್ಲಿ ನೋಂದಾಯಿಸಲ್ಪಟ್ಟಿರುವ ಎಂಬಿಬಿಎಸ್‌ ಕಾಲೇಜುಗಳ ಸರ್ಕಾರಿ ಕೋಟಾದ ಅಭ್ಯರ್ಥಿಗಳ ಶುಲ್ಕ 1,28,746 ರೂ. ಮತ್ತು ಬಿಡಿಎಸ್‌ ಶುಲ್ಕ 83,358 ರೂ.ಗೆ ನಿಗದಿಪಡಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜಿನ ಖಾಸಗಿ ಎಂಬಿಬಿಎಸ್‌ ಸೀಟ್‌ನ ಶುಲ್ಕ ಕಳೆದ ವರ್ಷ 9,81,956 ರೂ.ಗಳಿದ್ದರೆ, ಈ ವರ್ಷ 10,80,152 ರೂ.ಗಳಿಗೆ ಏರಿಕೆ ಕಂಡಿದೆ. ಬಿಡಿಎಸ್‌ ಕೋರ್ಸ್‌ನ ಖಾಸಗಿ ವಿದ್ಯಾರ್ಥಿಯ ಶುಲ್ಕ 6,66,023 ರೂ.ಗಳಿದ್ದದ್ದು ಈ ವರ್ಷ 7,32,625ರೂ.ಗೆ ಏರಿಸಲಾಗಿದೆ. ಈ ಶುಲ್ಕಗಳೇ ಖಾಸಗಿ ಮತ್ತು ಡೀಮ್ಡ್ ವಿವಿಯ ಸರ್ಕಾರಿ ಕೋಟಾದ ಸೀಟುಗಳಿಗೂ ಅನ್ವಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

ಖಾಸಗಿ ವಿವಿಗಳಿಗೂ ಶುಲ್ಕ ನಿಗದಿ
ಇನ್ನು ಖಾಸಗಿ ವಿವಿಗಳಾದ ಎಐಎಂಎಸ್‌, ಬಾಲಗಂಗಾಧರನಾಥ ನಾಗಮಂಗಲ, ಎಸ್‌ಡಿಎಂ ಧಾರವಾಡ, ಕೆಬಿಎನ್‌ ಕಲಬುರಗಿ, ಸಿಡಿಎಸ್‌ಎನ್‌ಇಆರ್‌ ಬೆಂಗಳೂರಿನಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ 1,28,746 ರೂ. ನಿಗದಿ ಮಾಡಲಾಗಿದೆ. ಉಳಿದಂತೆ ಎಐಎಂಎಸ್‌ ವಿವಿಯಲ್ಲಿ ಖಾಸಗಿ ಕೋಟಾದ ಸೀಟ್‌ಗೆ 20 ಲಕ್ಷ ರೂ., ಎನ್‌ಆರ್‌ಐ ಮತ್ತು ಇತರ ಕೋಟಾದ ಸೀಟ್‌ಗೆ ತಲಾ 36 ಲಕ್ಷ ರೂ. ನಿಗದಿ ಮಾಡಲಾಗಿದೆ.

ಎಸ್‌ಡಿಎಂನಲ್ಲಿ ಖಾಸಗಿ ಸೀಟ್‌ಗೆ 20 ಲಕ್ಷ ರೂ, ಎನ್‌ಆರ್‌ಐ ಮತ್ತು ಇತರ ಕೋಟಾದ ಸೀಟ್‌ಗೆ ತಲಾ 30 ಲಕ್ಷ ರೂ, ಕೆಬಿಎನ್‌ನಲ್ಲಿ ಖಾಸಗಿ ಸೀಟ್‌ಗೆ 16,14,965 ರೂ, ಎನ್‌ಆರ್‌ಐ ಮತ್ತು ಇತರ ಕೋಟಾದ ಸೀಟ್‌ಗೆ ತಲಾ 32 ಲಕ್ಷ ರೂ. ನಿಗದಿಪಡಿಸಲಾಗಿದೆ. ಬೆಂಗಳೂರಿನ ಸೆಂಟ್‌ ಜಾನ್ಸ್‌ ವಿವಿಯಲ್ಲಿ ಖಾಸಗಿ ಕೋಟಾದ ಸೀಟುಗಳಿಗೆ 7,76,385 ರೂ. ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next