Advertisement

ನೈಸ್‌ ಸಮಗ್ರ ವರದಿಗೆ ಮೇಯರ್‌ ಸೂಚನೆ

12:08 PM Mar 14, 2018 | Team Udayavani |

ಬೆಂಗಳೂರು: ಈಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡ ಅಶೋಕ್‌ ಖೇಣಿ ಅವರ ನೈಸ್‌ (ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌) ಕಂಪೆನಿ ಮೇಲೆ ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಮುಗಿಬಿದ್ದ ಸದಸ್ಯರು, ಸಂಸ್ಥೆಗೆ ಮಂಜೂರಾದ ಭೂಮಿ, ಅನ್ಯ ಉದ್ದೇಶಕ್ಕೆ ಬಳಕೆಯಾದದ್ದು ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನೈಸ್‌ ರಸ್ತೆ ಹೊರತುಪಡಿಸಿ, ಲಭ್ಯವಿರುವ ಭೂಮಿ ಹಾಗೂ ಆ ಪೈಕಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ಭೂಮಿಯ ಬಗ್ಗೆ ಪಾಲಿಕೆ ಅಧಿಕಾರಿಗಳು ವಾರದಲ್ಲಿ ಸಮಗ್ರ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಕೂಡ ದಾಖಲಿಸಲಾಗುವುದು ಎಂದು ಮೇಯರ್‌ ಸಂಪತ್‌ರಾಜ್‌ ಎಚ್ಚರಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಕೆಂಗೇರಿ ಹೋಬಳಿಯ ಪಂತರಪಾಳ್ಯದಲ್ಲಿ ಸರ್ವೆ ನಂಬರ್‌ 12ರಲ್ಲಿ ರಸ್ತೆ ನಿರ್ಮಾಣಕ್ಕೆ ನೀಡಿದ್ದ 30 ಗುಂಟೆ ಜಮೀನನ್ನು ನೈಸ್‌ ಕಂಪೆನಿಯು ಸತ್ಯನಾರಾಯಣರಾವ್‌ ಎಂಬುವರಿಗೆ ಮಾರಾಟ ಮಾಡಿದೆ. ಇದಕ್ಕೆ ಪಾಲಿಕೆಯ ವಲಯ ಅಧಿಕಾರಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು. 

ಪಡೆದಿದ್ದು ರಸ್ತೆಗೆ; ನಿರ್ಮಿಸಿದ್ದು ಚೌಲ್ತ್ರಿ!: ಅದೇ ರೀತಿ, ವಾರ್ಡ್‌ ಸಂಖ್ಯೆ 192ರಲ್ಲಿ ಹೊಸೂರು ರಸ್ತೆಗೆ ಕೂಡುವ ಮಾರ್ಗದಲ್ಲಿ ಇದೇ ನೈಸ್‌ ಕಂಪೆನಿಯು 1.27 ಎಕರೆ ಜಾಗದಲ್ಲಿ ಬೃಹತ್‌ ಕಲ್ಯಾಣ ಮಂಟಪ ನಿರ್ಮಿಸಿದೆ. ಇದರ ಬಾಡಿಗೆ 25 ಲಕ್ಷ ರೂ. ಇದೆ. ಇದೇ ಮಾರ್ಗದಲ್ಲಿ 2-3 ಎಕರೆ ಜಾಗದಲ್ಲಿ ವಾಹನ ನಿಲುಗಡೆಗೆ ಜಾಗ ಬಳಕೆ ಮಾಡಲಾಗಿದೆ. ರೈತರ ಜಮೀನು ವಶಪಡಿಸಿಕೊಂಡು, ರಸ್ತೆ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ.

ಆದರೆ, ಅನ್ಯ ಉದ್ದೇಶಕ್ಕೆ ಈ ಜಾಗ ಬಳಕೆಯಾಗುತ್ತಿದೆ. ಇಂತಹ ಜಮೀನನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ದನಿಗೂಡಿಸಿದ ಸದಸ್ಯ ಮಂಜುನಾಥ ರೆಡ್ಡಿ, ಪಾಲಿಕೆ ಕೇಂದ್ರ ಕಚೇರಿಯ ಕಾನೂನು ಘಟಕವು ಮಾರಾಟಕ್ಕೆ ಅವಕಾಶ ಇಲ್ಲ ಎಂದು ಲಿಖೀತವಾಗಿ ಬರೆದ ನಂತರವೂ ಖಾತೆ ಮಾಡಿರುವುದು ಖಂಡನೀಯ ಎಂದರು.

Advertisement

ಭೂಮಿ ವಾಪಸ್‌ಗೆ ಒತ್ತಾಯ: ಸದಸ್ಯ ಭದ್ರೇಗೌಡ ಮಾತನಾಡಿ, ನೋಂದಣಿ ಮಾಡಿಸಿಕೊಟ್ಟ ಖಾತೆಗಳನ್ನು ರದ್ದುಪಡಿಸಿ, ಭೂಮಿಯನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಶಿವರಾಜು ಮಾತನಾಡಿ, ಸುಮಾರು ವರ್ಷಗಳ ಹಿಂದೆಯೇ ಇದು ನಡೆದಿದ್ದರೂ ಆಗ ಈ ಬಗ್ಗೆ ಬೆಳಕು ಚೆಲ್ಲಲಿಲ್ಲ ಯಾಕೆ? ಕಟ್ಟೆ ಸತ್ಯನಾರಾಯಣ ಮೇಯರ್‌ ಆಗಿದ್ದಾಗ ಈ ಹಿಂದೆ ಇದೇ ಅಶೋಕ್‌ ಖೇಣಿ ಅವರಿಂದ ಎಂಟು ಗೋಪುರಗಳ ನಿರ್ಮಾಣಕ್ಕೆ ಮುಂದಾಗಿದ್ದರು ಎಂದರು.

ಪ್ರತಿಕ್ರಿಯಿಸಿದ ಕಟ್ಟೆ ಸತ್ಯನಾರಾಯಣ, ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದು ನಿಜ ಹಾಗೂ ಖೇಣಿ ಅವರು ನಾಲ್ಕು ಗೋಪುರಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ, ಶಂಕುಸ್ಥಾಪನೆಯೂ ಆಗಿತ್ತು. ನೈಸ್‌ ವಿವಾದ ಕೋರ್ಟ್‌ನಲ್ಲಿ ಇದ್ದ ಕಾರಣ ಸ್ತಗಿತಗೊಳಿಸಬೇಕಾಯಿತು ಎಂದರು.

ಸದಸ್ಯ ರಿಜ್ವಾನ್‌ ಮೊಹಮ್ಮದ್‌ ಮಾತನಾಡಿ, ನೈಸ್‌ ಭೂವಿವಾದ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದೆಯೇ ಅಥವಾ ಪಾಲಿಕೆಗೆ ಸಂಬಂಧಿಸುತ್ತದೆಯೇ ಎಂದು ಮೇಯರ್‌ ಅವರನ್ನು ಕೇಳಿದರು. ರಸ್ತೆ ಬಿಟ್ಟು ಉಳಿದಿದ್ದು ಬಿಬಿಎಂಪಿಗೆ ಬರುತ್ತದೆ.

ನೈಸ್‌ಗೆ ನೀಡಿದ ಭೂಮಿ ಎಷ್ಟಿದೆ? ರಸ್ತೆ ಹೊರತುಪಡಿಸಿ ಲಭ್ಯವಿರುವ ಭೂಮಿ ಎಷ್ಟು ಮತ್ತು ಎಷ್ಟೆಷ್ಟು ಖಾತೆಗಳನ್ನು ಮಾಡಿಕೊಡಲಾಗಿದೆ ಎಂಬುದರ ಸಮಗ್ರ ವರದಿಯನ್ನು ವಾರದಲ್ಲಿ ಸಲ್ಲಿಸಬೇಕು. ಅಗತ್ಯ ಬಿದ್ದರೆ ಕ್ರಮಿನಲ್‌ ಮೊಕದ್ದಮೆ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಬಯೋಮೆಟ್ರಿಕ್‌ ಅವ್ಯವಸ್ಥೆ: ನಂತರ ಪಾರ್ಥಿಬನ್‌ ಮಾತನಾಡಿ, ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್‌ ಕಡ್ಡಾಯಗೊಳಿಸಲಾಗಿದೆ. ಆದರೆ, ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಂಬಳವೂ ಸರಿಯಾಗಿ ಬರುತ್ತಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯೆ ಜಿ. ಪದ್ಮಾವತಿ, ಕಸ ಸಾಗಿಸುವ ಆಟೋ ಚಾಲಕರಿಗೂ ವೇತನ ನಿಯಮಿತವಾಗಿ ಆಗುತ್ತಿಲ್ಲ. ಹಬ್ಬ ಮುಂದಿರುವುದರಿಂದ ಕಸದ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಹೇಳಿದರು. 

ಸದಸ್ಯೆ ನೇತ್ರಾ ಪಲ್ಲವಿ ಮಾತನಾಡಿ, ಪೌರಕಾರ್ಮಿಕರಲ್ಲಿ ವಯಸ್ಸಾದವರೂ ಇದ್ದಾರೆ. ಸ್ವಲ್ಪ ತಡವಾಗಿ ಬಂದರೂ ಬಯೋಮೆಟ್ರಿಕ್‌ ಸ್ವೀಕರಿಸುವುದಿಲ್ಲ. ಇದೇ ಕಾರಣಕ್ಕೆ ಸಂಬಳಕ್ಕೆ ಕತ್ತರಿ ಬೀಳುತ್ತಿದೆ ಎಂದರು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಭರವಸೆ ನೀಡಿದರು. 

ಇದಕ್ಕೂ ಮುನ್ನ ಸಭೆ ಆರಂಭದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ಮಾಡಬೇಕು ಎಂದು ಸಭೆಯಲ್ಲಿ ಒಕ್ಕೊರಲ ಒತ್ತಾಯ ಕೇಳಿಬಂದಿತು. ಇದಕ್ಕೆ ಎಲ್ಲ ಕಾಮಗಾರಿಗಳಿಗೂ ಎರಡು ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಮೇಯರ್‌ ತಿಳಿಸಿದರು. 

3 ಅಂತಸ್ತಿನ ಕಟ್ಟಡ; 7 ಸಾವಿರ ರೂ. ಬಾಡಿಗೆ!: ದಯಾನಂದ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಡಿಕಲ್‌ ಡೇ ಕೇರ್‌ ಸೆಂಟರ್‌ ಹೆಸರಿನಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಇದನ್ನು ಪಾಲಿಕೆಯ ಮಾಜಿ ಸದಸ್ಯರೊಬ್ಬರಿಗೆ ಮೂರು ಅಂತಸ್ತಿನ ಕಟ್ಟಡವನ್ನು ಕೇವಲ 7 ಸಾವಿರ ರೂ. ಬಾಡಿಗೆಗೆ ನೀಡಲಾಗಿದೆ.

ಆದರೆ, ಲೋಕೋಪಯೋಗಿ ಇಲಾಖೆ ಇದಕ್ಕೆ 1.84 ಲಕ್ಷ ರೂ. ಬಾಡಿಗೆ ನಿಗದಿಪಡಿಸಿದೆ ಎಂದು  ಸದಸ್ಯೆ ಕುಮಾರಿ ಪಳನಿಕಾಂತ್‌ ಆರೋಪಿಸಿದರು. ಅಷ್ಟಕ್ಕೂ ಉದ್ದೇಶಿತ ಕಟ್ಟಡವನ್ನು ಆ ಸದಸ್ಯರ ಕಚೇರಿಯಾಗಿ ಮಾರ್ಪಟ್ಟಿದೆ. ವೈದ್ಯಕೀಯ ಸೇವೆಯೂ ನಡೆಯುತ್ತಿಲ್ಲ ಎಂದು ಕುಮಾರಿ ಪಳನಿಕಾಂತ್‌ ಆರೋಪಿಸಿದರು. ಶೀಘ್ರದಲ್ಲೇ ಈ ಕಟ್ಟಡಕ್ಕೆ ಉಪಮೇಯರ್‌ ಮತ್ತು ಆಯುಕ್ತರೊಂದಿಗೆ ಭೇಟಿ ನೀಡುವುದಾಗಿ ಮೇಯರ್‌ ಸಂಪತ್‌ರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next