ಬೆಂಗಳೂರು: ಮೇಯರ್ ಕಪ್ ವಾಲಿಬಾಲ್ ಪಂದ್ಯಾವಳಿಗೆ ಆಹ್ವಾನಿಸಲು ಮೇಯರ್ ಅವರು ನನಗೆ ಫೋನ್ ಕರೆ ಮಾಡಿಲ್ಲ. ಬೇಕಿದ್ದರೆ ಅವರು ತಮ್ಮ ಮೊಬೈಲ್ ಕರೆಗಳ ಪಟ್ಟಿಯನ್ನು ಪರಿಶೀಲಿಸಲಿ, ಅವರು ಕಳೆದ ಆರು ತಿಂಗಳಿಂದ ನನಗೆ ಕರೆ ಮಾಡಿಲ್ಲ ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಮೇಯರ್‌ಗೆ ತಿರುಗೇಟು ನೀಡಿದ್ದಾರೆ.
ಗುರುವಾರ ಮೇಯರ್ ಜಿ.ಪದ್ಮಾವತಿ ಅವರು, ಶಾಸಕ ಸುರೇಶ್‌ಕುಮಾರ್ ಅವರಿಗೆ ವಾಲಿಬಾಲ್ ಪಂದ್ಯಾವಳಿ ಅಧ್ಯಕ್ಷತೆ ವಹಿಸುವಂತೆ ಹಲವಾರು ಬಾರಿ ಮನವಿ ಮಾಡಿಲಾಗಿತ್ತು. ಆದರೂ, ಅವರು ಪಂದ್ಯಾವಳಿಗೆ ಗೈರಾಗುವ ಮೂಲಕ ತಾವು ಕ್ರೀಡೆಯ ಬಗ್ಗೆ ಎಂತಹ ಅಭಿರುಚಿ ಹೊಂದಿದ್ದಾರೆ ಎಂಬುದನ್ನು ತೋರಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇನೆಂಬ ಹತಾಶೆಗೆ ಅವರು ಒಳಗಾಗಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದರು.
ಅದಕ್ಕೆ ಪ್ರತಿಯಾಗಿ ಶುಕ್ರವಾರ ಪತ್ರ ಬರೆದಿರುವ ಅವರು, ಮೇಯರ್ ಅವರು ತಮ್ಮ ಮೇಲಿನ ತೀವ್ರ ಅಸಮಾಧಾನವನ್ನು ಹೊರಗೆ ಹಾಕಿದ್ದಾರೆ. ತಮ್ಮನ್ನು ಪಂದ್ಯಾವಳಿಗೆ ಆಹ್ವಾನಿಸಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಮೇಯರ್‌ಗೆ ಅವರಿಂದ ಬಂದ ಪತ್ರ ಹಾಗೂ ಆಹ್ವಾನ ಪತ್ರಿಕೆಗೆಗಳಿಗೆ ಧನ್ಯವಾದ ಸಲ್ಲಿಸಿದ್ದೇನೆ. ಜತೆಗೆ ನನ್ನ ಫೋಟೋ ಹಾಕಿಲ್ಲ ಎಂದು ಕಾರ್ಯಕ್ರಮಕ್ಕೆ ಹೋಗಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ.
ಮೇಯರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರ ಫೋಟೋಗಳನ್ನು ಬಿಬಿಎಂಪಿ ಲಾಂಛನದೊಂದಿಗೆ ಫಕ್ಸ್‌ಗಳಲ್ಲಿ ಪ್ರಕಟಿಸಿರುವುದು ಪಕ್ಷದ ಕಾರ್ಯಕರ್ತರು ಎಂದು ಹೇಳಿರುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ದೂರಿದ್ದಾರೆ.
ಮೇಯರ್ ಕಪ್ ಪಂದ್ಯಾವಳಿ ನಡೆಯುವ ಮೈದಾನದಲ್ಲಿ ಸುಮಾರು ಒಂದು ವಾರದಿಂದ ಈ ಫೆಕ್ಸ್‌ಗಳು ರಾರಾಜಿಸುತ್ತಿದ್ದರೂ, ಅವುಗಳನ್ನು ತೆಗೆಸುವ ಪ್ರಯತ್ನವನ್ನು ಜವಾಬ್ದಾರಿಯುತ ಮೇಯರ್ ಏಕೆ ಮಾಡಲಿಲ್ಲ. ತಾವು ಪ್ರತಿಭಟನೆ ನಡೆಸಿದ ರಾತ್ರಿ ಅವುಗಳನ್ನು ತೆರವುಗೊಳಿಸಲಾಗಿದೆ ಎಂದಿರುವ ಅವರು, ತಮಗೆ ಬೇಕಾದ ಗುತ್ತಿಗೆದಾರರಿಗೋಸ್ಕರ ಕೆಲಸ ಮಾಡಿಸಿಲ್ಲ. ಜತೆಗೆ ಮೇಯರ್ ಫಂಡ್ ರೀತಿ ಅಪಾರ ಹಣ ನಮಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೇಯರ್ ಅವರು ತಮ್ಮ ಕೀಳು ಅಭಿರುಚಿಯ ಬಗ್ಗೆ ಮಾತನಾಡಿದ್ದು, ತಾವು ಬರೆದ ಪತ್ರದಲ್ಲಿ ಪಂದ್ಯಾವಳಿಗೆ ಶುಭ ಕೋರಿ ತಾವು ಏಕೆ ಭಾಗವಹಿಸುತ್ತಿಲ್ಲ ಎಂದು ತಿಳಿಸಲಾಗಿದೆ. ತಾವು ಭಾಗಿಯಾಗಿದಿರುವುದು ನನ್ನ ಕೀಳು ಅಭಿರುಚಿಯೆಂದಾದರೆ, ನನ್ನದೇನೂ ಅಭ್ಯಂತರವಿಲ್ಲ. ಆದರೆ, ಮೇಯರ್ ಅನುದಾನವನ್ನು ರಾಜಕೀಯ ದೃಷ್ಟಿಯಿಂದಲೇ ಹಂಚುವವರಿಗೆ ಅಭಿರುಚಿಯ ಪ್ರಜ್ಞೆ ಹೇಗಿರುತ್ತದೆ ಎಂದು ಟೀಕಿಸಿದ್ದಾರೆ.
ಇನ್ನು ಮುಂದಿನ ಚುನಾವಣೆಯಲ್ಲಿ ಸೋಲುವ ಭಯದ ಬಗ್ಗೆ ಅವರು ಪ್ರಸ್ತಾಪಿಸಿದ್ದು, ಮತದಾರರ ವಿವೇಚನೆ ಬಗ್ಗೆ ನಾವಿಬ್ಬರೂ ವಿಶ್ವಾಸವಿಡೋಣ. ಈಗಲೇ ಯಾಕೆ ಈ ರೀತಿಯ ಚುನಾವಣಾ ಪೂರ್ವ ಸಮೀಕ್ಷೆಯ ಮಾತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.