Advertisement

ಮೇಯರ್‌ ಚುನಾವಣೆ ತಡೆಗೆ ಒತ್ತಾಯ

10:16 AM Feb 01, 2022 | Team Udayavani |

ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಗೆ ಫೆ.5ರಂದು ನಿಗದಿಯಾಗಿರುವ ಚುನಾವಣೆಯನ್ನು ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಬಿಜೆಪಿಯ ಐದು ಜನ ವಿಧಾನ ಪರಿಷತ್‌ ಸದಸ್ಯರನ್ನು ಹೊರಗಿಟ್ಟು ಚುನಾವಣೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಮತದಾರರ ಪಟ್ಟಿಯಲ್ಲಿ ಹೊರ ಜಿಲ್ಲೆಗಳ ನಾಮನಿರ್ದೇಶಿತ ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರ್ಪಡೆ ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷವು ಜಿಲ್ಲಾಧಿಕಾರಿಗಳ ಬಳಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೇ, ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಎರಡೂ ಕಡೆಯಿಂದ ತೀರ್ಪು ಇನ್ನೂ ಬಂದಿಲ್ಲ. ಆದ್ದರಿಂದ ಈ ಆದೇಶಗಳು ಬರುವವರೆಗೂ ಚುನಾವಣೆ ಮುಂದೂಡಬೇಕೆಂದು ಒತ್ತಾಯಿಸಿ ಸೋಮವಾರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಹಾಗೂ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು.

ಈ ಹಿಂದೆ ನ.20ರಂದು ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆ, ಸ್ಥಾಯಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಿಗದಿ ಮಾಡಿ, ಮೀಸಲಾತಿ ಮತ್ತು 63 ಜನ ಮತದಾರರ ಪಟ್ಟಿ ಘೋಷಣೆ ಮಾಡಲಾಗಿತ್ತು. ಆದರೆ, ಆಗ ಚುನಾವಣೆ ನಡೆಸದೇ ಮುಂದೂಡಿಕೆ ಮಾಡಲಾಗಿತ್ತು. ಈಗ ಫೆ.5ರಂದು ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಆದರೆ, ಮತದಾರರ ಪಟ್ಟಿಯನ್ನು 63ರ ಬದಲಿಗೆ 68 ಜನ ಎಂದು ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಈ ಹಿಂದೆ ನಿಗದಿ ಮಾಡಿದ್ದ ಮೇಯರ್‌ ಸ್ಥಾನದ ಸಾಮಾನ್ಯ (ಮಹಿಳೆ) ಮೀಸಲಾತಿ ಮತ್ತು ಉಪ ಮೇಯರ್‌ ಸ್ಥಾನದ ಹಿಂದುಳಿದ ವರ್ಗ-ಬ ಮೀಸಲಾತಿಯನ್ನು ಬದಲಾಯಿಸಿದ್ದು, ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ನಗರದ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ, ಪಾಲಿಕೆ ಚುನಾವಣೆಯ 55 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 27 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಸೇರಿ ಇತರ ಪಕ್ಷಗಳು 1.35 ಲಕ್ಷ ಮತಗಳು ಪಡೆದಿದ್ದರೆ, ಬಿಜೆಪಿ ಕೇವಲ 80 ಸಾವಿರ ಮತಗಳನ್ನು ಪಡೆದಿದೆ. ಬಿಜೆಪಿ ವಿರುದ್ಧ ಜನಾದೇಶ ಇದೆ. ಆದರೆ, ವಾಮಮಾರ್ಗ ಮತ್ತು ಅಧಿಕಾರ ದುರ್ಬಳಕೆ ಮೂಲಕ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಈ ಹಿಂದೆಯೇ ಜಿಲ್ಲೆಗೆ ಸಂಬಂಧಿಸದ ಏಳು ಜನ ವಿಧಾನ ಪರಿಷತ್‌ ಸದಸ್ಯರನ್ನು ಅಕ್ರಮವಾಗಿ ಸೇರ್ಪಡೆ ಮಾಡಲು ಬಿಜೆಪಿ ಯತ್ನಿಸಿತ್ತು. ಆದರೆ, ಚುನಾವಣಾ ದಿನಾಂಕದೊಳಗೆ ಮತದಾರರ ಪಟ್ಟಿಯಲ್ಲಿ ಏಳು ಜನರ ಹೆಸರು ಸೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಗ ನಡೆಯುತ್ತಿದ್ದ ವಿಧಾನ ಪರಿಷತ್‌ ಚುನಾವಣೆಯ ನೆಪವೊಡ್ಡಿ ಮೇಯರ್‌ ಚುನಾವಣೆಯನ್ನು ಬಿಜೆಪಿ ಮುಂದೂಡಿಕೆ ಮಾಡಿಸಿತ್ತು ಎಂದು ದೂರಿದರು.
ಈ ಮೊದಲು ಉತ್ತರ ಮತಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಪರಿಷತ್‌ ಸದಸ್ಯರನ್ನು ಹೆಸರು ಸೇರಿಸುವ ಯತ್ನ ನಡೆದಿತ್ತು. ಆದರೆ, ಅಲ್ಲಿನ ಅಧಿಕಾರಿಗಳು ಒಪ್ಪದೇ ಇದ್ದಾಗ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಟ್ಟು 7 ಜನರಲ್ಲಿ ಇಬ್ಬರ ಅರ್ಜಿಗಳು ತಿರಸ್ಕಾರಗೊಂಡಿದ್ದು, ಈಗ ಐವರು ಎಂಎಲ್‌ಸಿಗಳ ಹೆಸರು ಸೇರ್ಪಡೆಯಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೇ ನೇರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸೇರ್ಪಡೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

Advertisement

ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಮತದಾರರ ಪಟ್ಟಿಯಲ್ಲಿ ಬಿಜೆಪಿಯ ಐವರು ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರ್ಪಡೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಇದು ಐದು ಜನ ಸದಸ್ಯರು ಜಿಲ್ಲೆಗೇನು ಸಂಬಂಧ ಎಂಬ ಬಗ್ಗೆ ಜನತೆಗೆ ಬಿಜೆಪಿ ತಿಳಿಸಬೇಕು. -ಖನೀಜ್‌ ಫಾತಿಮಾ, ಶಾಸಕಿ, ಉತ್ತರ ಮತಕ್ಷೇತ್ರ

ಪಾಲಿಕೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಂಬಂಧ ಜೆಡಿಎಸ್‌ ಜತೆಗೆ ಮಾತುಕತೆ ನಡೆಸಲಾಗಿತ್ತು. ನಮ್ಮ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ. ಆದರೆ, ಬಹುಮತ ಇಲ್ಲದ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. -ಜಗದೇವ ಗುತ್ತೇದಾರ, ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

Advertisement

Udayavani is now on Telegram. Click here to join our channel and stay updated with the latest news.

Next