ಬೆಂಗಳೂರು: ಬಿಬಿಎಂಪಿ ವತಿಯಿಂದ ಆ.2ರಿಂದ 6ರವರೆಗೆ ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಶ್ರೀರಾಮಂದಿರ ಆಟದ ಮೈದಾನದಲ್ಲಿ “ಮೇಯರ್ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ’ ನಡೆಯಲಿದೆ ಎಂದು ಮೇಯರ್ ಜಿ.ಪದ್ಮಾವತಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯನ್ನು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಮತ್ತು ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಎ ದರ್ಜೆಯ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಲಿದ್ದು, ತಂಡಗಳಿಗೆ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಂದ್ಯಾವಳಿಯಲ್ಲಿ 8 ಪುರುಷ ತಂಡಗಳು ಹಾಗೂ 7 ಮಹಿಳಾ ತಂಡಗಳು ಭಾಗವಹಿಸಲಿದ್ದು, ಪುರುಷರ ತಂಡದಲ್ಲಿ ಕರ್ನಾಟಕ ಪೋಸ್ಟಲ್ ತಂಡ ರಾಜ್ಯವನ್ನು ಪ್ರತಿನಿಧಿಸಲಿದೆ. ಉಳಿದಂತೆ ಹರಿಯಾಣ ಎಚ್‌ಎಸ್‌ಐಐಡಿಸಿ, ಪಂಜಾಬ್ ಪೊಲೀಸ್, ರೈಲ್ವೇಸ್, ಐಒಸಿ ಚೆನ್ನೈ, ಕೇರಳ, ಇಂಡಿಯನ್ ಇನ್‌ಕಂ ಟ್ಯಾಕ್ಸ್, ಸಿಆರ್‌ಪಿಎಫ್ ದೆಹಲಿ ತಂಡಗಳು ಇರಲಿವೆ. ಜತೆಗೆ ಮಹಿಳಾ ವಿಭಾಗದಲ್ಲಿ ಬೆಂಗಳೂರು ನಗರ, ಚೆನ್ನೈ ಕ್ವೀನ್ಸ್, ಕೇರಳ, ರೈಲ್ವೇಸ್, ಸಿಆರ್‌ಪಿಎಫ್ ದೆಹಲಿ, ಹಿಮಾಚಲ ಪ್ರದೇಶ, ಬೆಂಗಾಲ್ ಟೈಗರ್ ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
4 ತಂಡಗಳಿಗೆ ಬಹುಮಾನ
ಪುರುಷರು ಹಾಗೂ ಮಹಿಳಾ ತಂಡಗಳಿಂದ ತಲಾ ನಾಲ್ಕು ತಂಡಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಪ್ರಥಮ ಬಹುಮಾನ ಪಡೆದ ಪುರುಷರ ತಂಡಕ್ಕೆ 4 ಲಕ್ಷ ರೂ., 2ನೇ ಬಹುಮಾನ 3 ಲಕ್ಷ ರೂ., 3ನೇ ಬಹುಮಾನ 2 ಲಕ್ಷ ರೂ., 4ನೇ ಬಹುಮಾನ ಮೊತ್ತವಾಗಿ 1 ಲಕ್ಷ ರೂ. ನಿಗದಿಪಡಿಸಲಾಗಿದೆ. ಅದೇ ರೀತಿ ಮಹಿಳಾ ತಂಡಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 2.50 ಲಕ್ಷ ರೂ., 2ನೇ ಬಹುಮಾನ 1.50 ಲಕ್ಷ ರೂ. 3ನೇ ಬಹುಮಾನ 1 ಲಕ್ಷ ರೂ. ಮತ್ತು 4ನೇ ಬಹುಮಾನ 50 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದರು.
ಪಂದ್ಯಾವಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರೆ ಶಾಸಕರು ಚಾಲನೆ ನೀಡಲಿದ್ದು, ಐದು ದಿನಗಳು ನಡೆಯುವ ಪಂದ್ಯಾವಳಿಯಲ್ಲಿ ಪ್ರತಿ ದಿನ ಕೇಂದ್ರ, ರಾಜ್ಯ ಸಚಿವರು ಹಾಗೂ ನಗರದ ಶಾಸಕರು ಭಾಗವಹಿಸುವರು. ಅಂತಿಮ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು ಎಂದು ಮಾಹಿತಿ ನೀಡಿದರು. ಈ ವೇಳೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮಹಮದ್ ರಿಜ್ವಾನ್ ನವಾಬ್, ಜೆಡಿಎಸ್ ನಾಯಕಿ ರಮೀಳಾ ಉಮಾಶಂಕರ್, ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹಾಗೂ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಜರಿದ್ದರು.