ರಾಯಪುರ: ಛತ್ತೀಸ್‌ಗಢದಲ್ಲಿ ರಾಜ, 2019ರಲ್ಲಿ ಅಧಿಕಾರಕ್ಕೆ ಸೂತ್ರಧಾರ! ಹೀಗೆಂದು ಜನತಾ ಕಾಂಗ್ರೆಸ್ ಛತ್ತೀಸ್‌ಘಡ (ಜೆಸಿಸಿ) ಪಕ್ಷದ ನಾಯಕ ಅಜಿತ್ ಜೋಗಿ ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿ ನಾವು ಬಹುಜನ ಸಮಾಜವಾದಿ ಪಕ್ಷ ಹಾಗೂ ಎಡಪಕ್ಷಗಳ ಜೊತೆ ಮೈತ್ರಿ ಮಾಡಿ ಕೊಂಡಿದ್ದೇವೆ. ನಾನೇ ಛತ್ತೀಸ್‌ಗಢದ ಸಿಎಂ ಆಗುತ್ತೇನೆ ಎಂದು ಜೋಗಿ ಹೇಳಿದ್ದಾರೆ. 2000 ರಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢವನ್ನು ಪ್ರತ್ಯೇಕ ರಾಜ್ಯವನ್ನಾಗಿಸಿದ ನಂತರದಲ್ಲಿ ಜೋಗಿ ಮೊದಲ ಸಿಎಂ ಆಗಿದ್ದರು. 2019ರ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಮೈತ್ರಿಯೇ ಬಹುಮತ ಪಡೆಯುತ್ತದೆ. ಈ ಮೈತ್ರಿಯಲ್ಲಿ ಯಾರು ಪ್ರಧಾನಿ ಯಾಗುತ್ತಾರೆ ಎಂಬುದನ್ನು ನಂತರ ನಿರ್ಧರಿಸಲಾ ಗುತ್ತದೆ. ವೈಯಕ್ತಿಕವಾಗಿ ನನಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯೇ ಸೂಕ್ತ ಅಭ್ಯರ್ಥಿ ಎನಿಸುತ್ತದೆ ಎಂದಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುದ್ನಿಯಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
1 ರೂ. ನಾಣ್ಯದ ಇಡುಗಂಟು!
ಮಧ್ಯಪ್ರದೇಶದ ಇಂದೋರ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದೇ ಚುನಾವಣಾ ಅಧಿಕಾರಿಗಳಿಗೆ ತಲೆನೋವು ತಂದಿದೆ! ಇಡುಗಂಟು ರೂಪದಲ್ಲಿ ನೀಡಬೇಕಾದ 10 ಸಾವಿರ ರೂ. ಅನ್ನು ಅಭ್ಯರ್ಥಿ ದೀಪಕ್ ಪವಾರ್ 1 ರೂ. ನಾಣ್ಯದ ರೂಪದಲ್ಲಿ ನೀಡಿದ್ದಾರೆ. ಅದನ್ನು ಲೆಕ್ಕ ಮಾಡಲು ಐವರು ಅಧಿಕಾರಿಗಳು ಸುಮಾರು ಒಂದೂವರೆ ಗಂಟೆ ವ್ಯಯಿಸಿದ್ದಾರೆ. ಹಣ ಲೆಕ್ಕ ಮಾಡಿ ರಸೀದಿ ನೀಡಿದ ನಂತರ, ಅದನ್ನು ಅಭ್ಯರ್ಥಿ ತನ್ನ ನಾಮಪತ್ರದೊಂದಿಗೆ ಲಗತ್ತಿಸಬೇಕಿರುತ್ತದೆ.