Advertisement

ಮಾಯೆಯ ಶಂಖ

06:00 AM Aug 05, 2018 | |

ಒಂದು ಗ್ರಾಮದಲ್ಲಿ ಅಸ್ಸಾ ಎಂಬ ಅಣ್ಣ , ಒಯೋಟೊ ಎಂಬ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಇಬ್ಬರ ಸ್ವಭಾವವೂ ಒಂದೇ ರೀತಿ ಆಗಿರಲಿಲ್ಲ. ಅಣ್ಣ ಅಸ್ಸಾ ತುಂಬ ಸ್ವಾರ್ಥಿಯಾಗಿದ್ದ. ಇನ್ನೊಬ್ಬರ ಬಳಿ ಯಾವ ವಸ್ತುವೂ ಇರಬಾರದು, ಎಲ್ಲವೂ ತನ್ನ ಬಳಿಯೇ ಇರಬೇಕು ಎಂಬುದು ಅವನ ಬಯಕೆ. ತಮ್ಮ ಹಾಗಲ್ಲ, ಬೇರೆಯವರು ಕಷ್ಟದಲ್ಲಿರುವಾಗ ಉಪಕಾರ ಮಾಡಬೇಕು, ನಮ್ಮಲ್ಲಿರುವ ವಸ್ತುವನ್ನು ಇಲ್ಲದವರೊಂದಿಗೆ ಹಂಚಿ ತಿನ್ನಬೇಕು ಎನ್ನುವ ಒಳ್ಳೆಯ ಗುಣ ಅವನದು. ಅಸ್ಸಾ ತನ್ನಲ್ಲಿರುವ ಸಂಪತ್ತನ್ನು ದುಬಾರಿ ಬಡ್ಡಿಗೆ ಬಡವರಿಗೆ ಸಾಲ ಕೊಟ್ಟು ತುಂಬ ಹಣ ಸಂಪಾದಿಸಿದ್ದ. ಒಯೋಟೊ ಸಣ್ಣಪುಟ್ಟ ವ್ಯಾಪಾರ ಮಾಡಿ ಬರುವ ಅಲ್ಪಆದಾಯದಿಂದಲೇ ಸಂತೃಪ್ತನಾಗಿ ಜೀವನ ಸಾಗಿಸಿಕೊಂಡಿದ್ದ.

Advertisement

ಒಂದು ಸಲ ನೆರೆಯ ಊರಿನ ಜಾತ್ರೆಯಲ್ಲಿ ಮಾರಾಟ ಮಾಡಲು ಒಯೋಟೊ ಸರಕುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟ. ದಾರಿಯಲ್ಲಿ ಒಂದು ನಿರ್ಜನವಾದ ದಟ್ಟ ಕಾಡು ಇತ್ತು. ಕಾಡಿನೊಳಗೆ ಅವನು ಮುಂದೆ ಹೋಗುತ್ತ ಇದ್ದ. ಆಗ ಒಂದು ಕೊಳದ ಬಳಿ ಪುಟ್ಟ ಮಗುವೊಂದು ಜೋರಾಗಿ ಅಳುತ್ತ ಇತ್ತು. ಅದನ್ನು ಕಂಡು ಒಯೋಟೊ ಮಮ್ಮಲ ಮರುಗಿದ. ಹೊರೆಯನ್ನು ಕೆಳಗಿಳಿಸಿ ಮಗುವಿನ ಬಳಿಗೆ ಹೋಗಿ ಸಾಂತ್ವನಪಡಿಸಿದ. “”ಯಾರು ನೀನು, ಇಲ್ಲಿ ಯಾಕೆ ಒಬ್ಬನೇ ನಿಂತಿರುವೆ?” ಎಂದು ಕೇಳಿದ. ಮಗುವು ದುಃಖೀ ಸುತ್ತಲೇ, “”ನಾನು ಪಟ್ಟಣದಲ್ಲಿರುವವನು. ಹಣ್ಣುಗಳನ್ನು ಆಯ್ದುಕೊಳ್ಳಲೆಂದು ಕಾಡಿಗೆ ಒಂಟಿಯಾಗಿ ಬಂದಿದ್ದೆ. ಆದರೆ ಈಗ ಮನೆ ಸೇರಲು ದಾರಿ ತಿಳಿಯದೆ ಅಳುತ್ತಿದ್ದೇನೆ” ಎಂದು ಹೇಳಿತು.

ಒಯೋಟೊ ಮಗುವಿಗೆ ಧೈರ್ಯ ತುಂಬುತ್ತ, “”ಭಯಪಡಬೇಡ, ನಾನು ನಿನ್ನನ್ನು ಮನೆಗೆ ಸೇರಿಸುತ್ತೇನೆ. ತುಂಬ ಹಸಿದಿರುವೆಯಲ್ಲವೆ? ನನ್ನ ಬಳಿ ರೊಟ್ಟಿಗಳಿರುವ ಬುತ್ತಿಯಿದೆ. ತೆಗೆದುಕೋ, ಊಟ ಮಾಡು” ಎಂದು ಹೇಳಿ ಅವನಿಗೆ ಊಟವನ್ನೂ ಬಡಿಸಿಕೊಟ್ಟ. ಮರುಕ್ಷಣವೇ ಹುಡುಗ ಮಾಯವಾದ. ಅವನ ಜಾಗದಲ್ಲಿ ನೀಳವಾದ ಬಿಳಿಯ ಗಡ್ಡವಿರುವ ಒಬ್ಬ ಮುದುಕ ಕಾಣಿಸಿಕೊಂಡ. ಒಂದು ಮರದಷ್ಟು ಎತ್ತರವಿದ್ದ ಅವನು ಯಾವನೋ ಮಹಿಮಾವಂತನೆಂಬುದು ಒಯೋಟೊವಿಗೆ ಅರ್ಥವಾಯಿತು. ವಿನಯದಿಂದಲೇ, “”ತಾವು ಯಾರು? ದಿಕ್ಕುತಪ್ಪಿದೆನೆಂದು ಹೇಳಿದ ಒಂದು ಮಗುವಿನ ಜಾಗದಲ್ಲಿ ಕಾಣಿಸಿಕೊಳ್ಳಲು ಏನು ಕಾರಣ?” ಎಂದು ಕೇಳಿದ.

ಮುದುಕನು, “”ನಾನು ಈ ಕೊಳದಲ್ಲಿ ವಾಸವಾಗಿರುವ ಪಿಶಾಚಿ. ಬದುಕಿರುವಾಗ ಯಾರಿಗೂ ಸಹಾಯ ಮಾಡಲಿಲ್ಲ. ಇದರಿಂದಾಗಿ ಈ ಜನ್ಮ ಬಂದಿದೆ. ಈಗ ಇಲ್ಲಿ ಹೋಗುವವರಲ್ಲಿ ದಯೆ, ದಾನ ಪ್ರವೃತ್ತಿಗಳು ಇವೆಯೇ ಎಂದು ಪರೀಕ್ಷಿಸಿ ಅವರು ಅಂತಹ ಗುಣವಂತರಾಗಿದ್ದರೆ ಅವರಿಗೆ ಸಹಾಯ ಮಾಡುತ್ತಿದ್ದೇನೆ. ಮಗುವಾಗಿ ನಿನ್ನ ಮುಂದೆ ಬಂದವನು ನಾನೇ. ನಿನ್ನ ಒಳ್ಳೆಯ ಗುಣಕ್ಕೆ ಮೆಚ್ಚಿದ್ದೇನೆ. ಇದಕ್ಕಾಗಿ ನಿನಗೆ ಒಂದು ಮಾಯೆಯ ಶಂಖವನ್ನು ಕೊಡುತ್ತೇನೆ. ಇದನ್ನು ಕಷ್ಟ ಬಂದಾಗ ಊದಿದರೆ ಸಹಾಯವಾಗುತ್ತದೆ. ಆದರೆ ಕೆಟ್ಟ ಕೆಲಸಕ್ಕೆ ಬಳಸಬಾರದು. ಅದರಿಂದ ಹಾನಿಯಾಗುತ್ತದೆ” ಎಂದು ಹೇಳಿ ಕಾಮನ ಬಿಲ್ಲಿನಂತೆ ಏಳು ಬಣ್ಣಗಳಿರುವ ಶಂಖವನ್ನು ನೀಡಿ ಮಾಯವಾದನು.

ಒಯೋಟೊ ಅಲ್ಲಿಂದ ಪಯಣ ಮುಂದುವರೆಸಿ ಜಾತ್ರೆಗೆ ಹೋದ. ಸಂಜೆಯ ಹೊತ್ತಿಗೆ ಸರಕುಗಳನ್ನು ಮಾರಾಟ ಮಾಡಿ ಸಿಕ್ಕಿದ ಹಣವನ್ನು ತೆಗೆದುಕೊಂಡು ಮನೆಗೆ ಹೊರಟ. ಆದರೆ ಅದೇ ಕಾಡನ್ನು ತಲುಪಿದಾಗ ಸರಿರಾತ್ರೆಯಾಗಿತ್ತು. ಕಾಡಿನ ಮಧ್ಯೆ ಕಳ್ಳರ ಗುಂಪೊಂದು ಅವನನ್ನು ಅಡ್ಡಗಟ್ಟಿ ಕೈಯಲ್ಲಿರುವ ಹಣವನ್ನೆಲ್ಲ ಕಿತ್ತುಕೊಂಡಿತು. ತನ್ನ ವ್ಯಾಪಾರದ ಹಣವನ್ನು ಹೀಗೆ ಎಳೆದುಕೊಂಡರೆ ತನ್ನನ್ನೇ ನಂಬಿರುವ ಸಂಸಾರ ಉಪವಾಸ ಬೀಳಬೇಕಾಗುತ್ತದೆಂದು ಅವನು ಎಷ್ಟು ಕೇಳಿಕೊಂಡರೂ ಅವರಿಗೆ ದಯೆ ಬರಲಿಲ್ಲ. ತನ್ನ ಗಳಿಕೆಯೆಲ್ಲವೂ ಕಳ್ಳರ ಪಾಲಾದರೂ ಪಿಶಾಚಿಯು ಕೊಟ್ಟ ಶಂಖ ಮಾತ್ರ ಜೇಬಿನೊಳಗೆ ಇದೆಯೆಂಬುದು ಅವನ ಗಮನಕ್ಕೆ ಬಂದಿತು. ಕಷ್ಟ ಬಂದಾಗ ಶಂಖವನ್ನು ಊದುವಂತೆ ಪಿಶಾಚಿ ಹೇಳಿದ್ದ ಕಾರಣ ಅವನು ಅದನ್ನು ಗಟ್ಟಿಯಾಗಿ ಊದಿದ. ಆ ದನಿ ಕಿವಿಗೆ ಬೀಳುತ್ತಲೇ ಕಳ್ಳರೆಲ್ಲರೂ ನಿದ್ರೆಯಿಂದ ಮೈಮರೆತು ನೆಲಕ್ಕೆ ಕುಸಿದರು.

Advertisement

ಇದೇ ಸುಸಮಯವೆಂದು ಒಯೋಟೊ ಕಳ್ಳರು ಅಪಹರಿಸಿದ ತನ್ನ ಹಣವನ್ನಷ್ಟೇ ಅಲ್ಲ ಅವರ ಬಳಿಯಿದ್ದ ಅಪಾರ ನಗ-ನಾಣ್ಯಗಳನ್ನೂ ಮೂಟೆ ಕಟ್ಟಿಕೊಂಡು ಮನೆಗೆ ಬಂದ. ಅದನ್ನು ಬಳಸಿ ಒಳ್ಳೆಯ ಮನೆ ಕಟ್ಟಿಸಿದ. ಕೃಷಿ ಭೂಮಿಯನ್ನು ತೆಗೆದುಕೊಂಡ. ಬದುಕಿನಲ್ಲಿ ಅಭಿವೃದ್ಧಿ ಹೊಂದಿದ. ಇದನ್ನು ಗಮನಿಸಿದ ಅಣ್ಣ ಅಸ್ಸಾ ಅವನ ಬಳಿಗೆ ಬಂದು, “”ರಾತ್ರೆ ಬೆಳಗಾಗುವ ಮೊದಲು ಸಿರಿವಂತನಾಗಿಬಿಟ್ಟೆ! ಏನು ಸಮಾಚಾರ? ಎಲ್ಲಾದರೂ ದರೋಡೆ ಮಾಡಿದೆಯಾ ಹೇಗೆ?” ಎಂದು ಕೇಳಿದ. ಒಯೋಟೊ ಏನನ್ನೂ ಮುಚ್ಚಿಡಲಿಲ್ಲ. ತನಗೆ ಸಂಪತ್ತು ಹೇಗೆ ಬಂತು ಎಂಬುದನ್ನು ಮುಚ್ಚಿಡದೆ ಹೇಳಿದ.

ಅಣ್ಣನಿಗೆ ಮನದಲ್ಲಿ ಆಶೆ ಅಂಕುರಿಸಿತು. ಕಾಡಿಗೆ ಹೋಗಿ ಪಿಶಾಚಿಯ ಮನಸ್ಸು ಗೆದ್ದರೆ ತಾನೂ ಇದನ್ನು ಮೀರಿಸುವ ಧನಿಕನಾಗಬಹುದು ಎಂದು ಯೋಚಿಸಿ ಕಾಡಿಗೆ ಹೋದ. ಒಯೋಟೊ ಹೇಳಿದ ಕೊಳವನ್ನು ತಲುಪಿದ. ಒಬ್ಬಳು ಹಣ್ಣು ಮುದುಕಿ ಅವನ ಬಳಿಗೆ ಬಂದಳು. ಅವಳ ಕಾಲುಗಳಲ್ಲಿ ವ್ರಣಗಳಾಗಿ ಕೀವು ತುಂಬಿತ್ತು. ನಡೆಯಲಾಗದೆ ಕಷ್ಟಪಡುತ್ತಿದ್ದ ಮುದುಕಿ ಅಸ್ಸಾನೊಂದಿಗೆ, “”ನಡೆದಾಡಲು ಪ್ರಯಾಸವಾಗಿದೆ, ವೈದ್ಯರ ಬಳಿಗೆ ಹೋಗಬೇಕು. ನನ್ನನ್ನು ಹೆಗಲಿನಲ್ಲಿ ಹೊತ್ತುಕೊಂಡು ಹೋಗುತ್ತೀಯಾ?” ಎಂದು ಕೇಳಿದಳು. ಅವಳನ್ನು ಕಂಡು ಅಸ್ಸಾ ಕೋಪದಿಂದ, “”ಕೊಳಕು ಮುದುಕಿ, ಬಳಿಗೆ ಬಂದರೆ ಮೂಗು ಬಿಡಲಾಗದಷ್ಟು ದುರ್ಗಂಧ ಬರುತ್ತಿದ್ದೀ. ನಿನ್ನನ್ನು ಹೊತ್ತುಕೊಂಡು ಹೋಗಲು ನನ್ನಿಂದ ಸಾಧ್ಯವೇ ಇಲ್ಲ” ಎಂದು ತಿರಸ್ಕರಿಸಿದ.

ಮರುಕ್ಷಣವೇ ಮುದುಕಿಯ ಜಾಗದಲ್ಲಿ ಮುದುಕನಾದ ಪಿಶಾಚಿಯು ಕಾಣಿಸಿಕೊಂಡಿತು. “”ನೀನು ಮಹಾಸ್ವಾರ್ಥಿ. ನಿನ್ನ ಹೃದಯದಲ್ಲಿ ದಯೆಗೆ ಜಾಗವಿಲ್ಲ. ಆದಕಾರಣ ನೀನು ಗಳಿಸಿದ ಸಂಪತ್ತನ್ನು ಕಳೆದುಕೊಂಡು ಅಧೋಗತಿ ಹೊಂದುತ್ತೀಯಾ” ಎಂದು ಶಪಿಸಿ ಮಾಯವಾಯಿತು. ನಿರಾಸೆಯಿಂದ ಅಸ್ಸಾ ಮನೆಗೆ ಮರಳಿದ. ಕೆಲವೇ ದಿನಗಳಲ್ಲಿ ಅವನು ವ್ಯವಹಾರದಲ್ಲಿ ನಷ್ಟ ಅನುಭವಿಸಿ ಬಡತನದ ಅಂಚನ್ನು ತಲುಪಿದ. ಆದರೂ ಬುದ್ಧಿ ಕಲಿಯುವ ಬದಲು ಅವನ ಮನಸ್ಸಿನಲ್ಲಿ ಒಂದು ಕೆಟ್ಟ ಯೋಚನೆ ಬಂದಿತು. ಒಯೋಟೊ ಬಳಿಯಿರುವ ಶಂಖವನ್ನು ಊದಿದರೆ ಅದರ ದನಿ ಕೇಳಿದವರು ಮೈಮರೆತು ನಿದ್ದೆ ಮಾಡುತ್ತಾರೆ. ಈ ಶಂಖವನ್ನು ತೆಗೆದುಕೊಂಡು ನೆಟ್ಟಗೆ ಅರಮನೆಯ ಬಳಿಗೆ ಹೋಗಿ ಊದಬೇಕು. 

ಕಾವಲುಗಾರರೆಲ್ಲರೂ ನಿದ್ರೆಗೊಳಗಾದಾಗ ಖಜಾನೆಯಲ್ಲಿರುವ ನಗ ನಾಣ್ಯಗಳನ್ನು ದೋಚಿಕೊಂಡು ಬರಬೇಕು ಎಂದು ನಿರ್ಧರಿಸಿದ. ರಾತ್ರೆ ತಮ್ಮನ ಮನೆಯೊಳಗೆ ನುಗ್ಗಿದ. ಒಯೋಟೊ ತನ್ನ ತಲೆಯ ಬಳಿ ಶಂಖವನ್ನಿಟ್ಟುಕೊಂಡು ಮಲಗುವುದು ಅವನಿಗೆ ಗೊತ್ತಿತ್ತು. ಸುಲಭವಾಗಿ ಶಂಖವನ್ನು ಅಪಹರಿಸಿಕೊಂಡು ಹೊರಗೆ ಬಂದ.

ಅಸ್ಸಾ ಶಂಖದೊಂದಿಗೆ ಅರಮನೆಗೆ ಹೋಗಿ ಒಳಗೆ ಪ್ರವೇಶಿಸಿದ. ಶಂಖವನ್ನು ಗಟ್ಟಿಯಾಗಿ ಊದಿದ. ಅದರ ಧ್ವನಿ ಕೇಳಿ ಕಾವಲುಗಾರರು ನಿದ್ರೆ ಹೋಗುವ ಬದಲು ಎಚ್ಚೆತ್ತು ಓಡಿ ಬಂದರು. ಅವನನ್ನು ಕಂಡು ಕಳ್ಳತನಕ್ಕೆ ಒಳಗೆ ಬಂದಿದ್ದಾನೆಂದು ನಿರ್ಧರಿಸಿ ಹಿಡಿದು ಸೆರೆಮನೆಗೆ ದೂಡಿದರು. ಅಲ್ಲಿ ಅಸ್ಸಾನೆದುರು ಕಾಡಿನ ಪಿಶಾಚಿ ಪ್ರತ್ಯಕ್ಷವಾಯಿತು. ಅವನಲ್ಲಿದ್ದ ಶಂಖವನ್ನು ತೆಗೆದುಕೊಂಡಿತು. “”ಈ ಶಂಖವನ್ನು ಕಷ್ಟ ಕಾಲದಲ್ಲಿ ಮಾತ್ರ ಬಳಸಬೇಕು, ಕೆಟ್ಟ ಕೆಲಸಕ್ಕೆ ಬಳಸಿದರೆ ಹಾನಿಯಾಗುತ್ತದೆಂದು ಮೊದಲೇ ಹೇಳಿದ್ದೇನೆ. ನಿನ್ನಂತಹ ಸ್ವಾರ್ಥಿಗೆ ಸೆರೆಮನೆಯೇ ಯೋಗ್ಯ ವಾಸಸ್ಥಳ” ಎಂದು ಹೇಳಿ ಮಾಯವಾಯಿತು.

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next