ಮುಂಬೈ: ಭಾರತ ಬ್ಯಾಟರ್ ಮಯಾಂಕ್ ಅಗರ್ವಾಲ್ ಜೂನ್ 27 ರಂದು ಟೀಂ ಇಂಡಿಯಾವನ್ನು ಕೂಡಿಕೊಳ್ಳಲು ಬರ್ಮಿಂಗ್‌ಹ್ಯಾಮ್ ಗೆ ತೆರಳಿದರು. ನಾಯಕ ರೋಹಿತ್ ಶರ್ಮಾ ಗೆ ಕೋವಿಡ್ ಸೋಂಕು ದೃಢವಾದ ಕಾರಣ ಮಯಾಂಕ್ ಅಗರ್ವಾಲ್ ರನ್ನು ತಂಡಕ್ಕೆ ಸೇರಿಸಲಾಗಿದೆ.
ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಬಹು ನಿರೀಕ್ಷಿತ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಶನಿವಾರ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಕೋವಿಡ್ -19 ಸೋಂಕು ದೃಢವಾದ ಕಾರಣ ಅವರು ಟೆಸ್ಟ್ ಪಂದ್ಯ ಆಡುವುದು ಅನುಮಾನವಾಗಿದೆ. ರೋಹಿತ್ ಐಸೋಲೇಶನ್ ನಲ್ಲಿದ್ದಾರೆ. ಲೀಸೆಸ್ಟರ್ ಶೈರ್ ನಲ್ಲಿರುವ ಬಿಸಿಸಿಐ ವೈದ್ಯಕೀಯ ತಂಡದಿಂದ ನಿಗಾ ಇರಿಸಲಾಗಿದೆ.
ಬರ್ಮಿಂಗ್‌ಹ್ಯಾಮ್‌ಗೆ ನಿರ್ಗಮಿಸುವ ಫೋಟೋವನ್ನು ಮಯಾಂಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಮಯಾಂಕ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ.
ಸದ್ಯಕ್ಕೆ ಯುಕೆಯಲ್ಲಿ ಯಾವುದೇ ಕ್ವಾರಂಟೈನ್ ನಿಯಮಗಳಿಲ್ಲದ ಕಾರಣ ಮಾಯಾಂಕ್ ತಕ್ಷಣವೇ ಇಂಗ್ಲೆಂಡ್‌ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಸೇರಿಕೊಳ್ಳಬಹುದು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಸ್ವದೇಶಿ ಸರಣಿಗಳಿಗೆ ಜೈವಿಕ-ಬಬಲ್ ವ್ಯವಸ್ಥೆಗಳನ್ನು ತೆಗೆದುಹಾಕಿದೆ.