Advertisement

ಮಾಯಕೊಂಡ ಶಾಸಕರ ಮನೆ ಬಳಿ ಧರಣಿ

01:09 PM Apr 05, 2017 | |

ದಾವಣಗೆರೆ: ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ರದ್ದು ಸಂಬಂಧಿಸಿದಂತೆ ಸರ್ವೋತ್ಛ ನ್ಯಾಯಾಲಯದ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಕೆ ಹಾಗೂ ನ್ಯಾಯಮೂರ್ತಿ ಎ.ಜೆ. ಸದಾಶಿವ  ಆಯೋಗದ ವರದಿಯ ಯಥಾವತ್ತು ಜಾರಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಮಂಗಳವಾರ ದಾವಣಗೆರೆಯ ವಿನೋಬ ನಗರದಲ್ಲಿರುವ ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಿವಾಸದ ಎದುರು ಧರಣಿ ನಡೆಸಿದರು. 

Advertisement

ಸಂವಿಧಾನಶಿಲ್ಪಿ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ರವರು ಸಮಾನತೆ, ಸ್ವಾತಂತ್ರ, ಸಹೋದರತ್ವದ ಸಾಧನಗಾಗಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಿದ್ದಾರೆ. ಅಂತೆಯೇ ಉದ್ಯೋಗ ಕ್ಷೇತ್ರದಲ್ಲೂ ಮೀಸಲಾತಿ ಸೌಲಭ್ಯ ಒದಗಿಸುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನೇಕರು ವಿವಿಧ ಹುದ್ದೆಗಳಿಂದ ಬಡ್ತಿ ಪಡೆಯಲು ಸಾಧ್ಯವಾಗಿತ್ತು.

ಸರ್ವೋತ್ಛ ನ್ಯಾಯಾಲಯ ಕಳೆದ ಫೆ. 9ರಂದು ನೀಡಿರುವ ಆದೇಶ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿ ತಪ್ಪಿದಂತಾಗುತ್ತದೆ ಎಂದು ಧರಣಿ ನಿರತರು ಆತಂಕ ವ್ಯಕ್ತಪಡಿಸಿದರು. ಸರ್ವೋತ್ಛ ನ್ಯಾಯಾಲಯದ ಆದೇಶದಿಂದಾಗಿ ವಿವಿಧ ಇಲಾಖೆಯಲ್ಲಿನ ಸಾವಿರಾರು ನೌಕರರು ಹಿಂಬಡ್ತಿ ಪಡೆಯುವಂತಾಗಿದೆ.

ರಾಜ್ಯ ಸರ್ಕಾರ ಮುಂಬಡ್ತಿ ಮೀಸಲಾತಿಯಿಂದ ಆಡಳಿತದಲ್ಲಿ ದಕ್ಷತೆಗೆ ಧಕ್ಕೆ ಆಗದಿರುವ, ಸಮುದಾಯಗಳ ವಾಸ್ತವ ಸ್ಥಿತಿಗತಿ, ಉನ್ನತ ಹುದ್ದೆಯಲ್ಲಿ ಪರಿಶಿಷ್ಟ ಸಮುದಾಯಗಳವರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟ ಮಾಹಿತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರಿಂದ ಪರಿಶಿಷ್ಟರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೂಡಲೇ ಸರ್ವೋತ್ಛ ನ್ಯಾಯಾಲಯದ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸುವ ಜೊತೆಗೆ ಪರಿಶಿಷ್ಟ ಜಾತಿ, ಪಂಗಡದ ನೌಕರರ ಹಿತ ಕಾಪಾಡಬೇಕು. ಸಂವಿಧಾನಬದ್ಧ ಮೀಸಲಾತಿ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. 

Advertisement

ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯವರಿಗೆ ಈಗ ನೀಡಲಾಗಿರುವ ಮೀಸಲಾತಿ ಸೌಲಭ್ಯ ಸಮಾನವಾಗಿ ದೊರಕದ ಹಿನ್ನೆಲೆಯಲ್ಲಿ ಮಾದಿಗ ಸಮಾಜಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂಬ ಒತ್ತಾಯದ 20 ವರ್ಷದ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ನ್ಯಾ| ಎ.ಜೆ. ಸದಾಶಿವ ಆಯೋಗ ರಚಿಸಿತ್ತು. ಆಯೋಗ ವರದಿ ಸಲ್ಲಿಸಿ 5 ವರ್ಷವೇ ಆಗಿದೆ.

ಆದರೆ, ಯಾವುದೇ ಸರ್ಕಾರ ಈವರೆಗೆ ಆಯೋಗದ ಶಿಫಾರಸು ಜಾರಿ ಬಗ್ಗೆ ಗಮನ ನೀಡಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಸದಾಶಿವ ಆಯೋಗದ ಶಿಫಾರಸು ಜಾರಿಯ ಮಾತುಗಳಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಾಯಿ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿ ಬಗ್ಗೆ ಚರ್ಚಿಸಿ, ಕೇಂದ್ರಕ್ಕೆ ಶಿಫಾರಸ್ಸಿಗೆ ಸಲ್ಲಿಸುವ ಮೂಲಕ ಶೋಷಿತ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಸಬೇಕು. 

ಪರಿಶಿಷ್ಟ ಜಾತಿ ಪಟ್ಟಿಗೆ ಇತರೆ ಜಾತಿಗಳ ಸೇರ್ಪಡೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ, ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಸಿ. ಬಸವರಾಜಪ್ಪ, ಮಳ್ಳೆಕಟ್ಟೆ ಪರಶುರಾಮ್‌, ಹನುಮಂತಪ್ಪ ಲೋಕಿಕೆರೆ, ಗುಮ್ಮನೂರು ರಾಮಚಂದ್ರ, ಅಳಗವಾಡಿ ನಿಂಗರಾಜ್‌ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next