Advertisement
ರೈತ ಬರಲಿರುವ ಮಳೆಯನ್ನು ನಂಬಿ ಹೊಲವನ್ನು ಹಸನು ಮಾಡಿ ಆಸೆಗಣ್ಣಿನಲ್ಲಿ ಕಾಯುವಿಕೆ, ಗಂಡು-ಹೆಣ್ಣು ಪರಸ್ಪರ ನಂಬಿಕೆಯ ಬನದೊಳಗೆ ಬದುಕುತ್ತಲೇ ಹೂ ಗಿಡಗಳ ಬೆಳೆಸುವ ಪರಿ ವಿನೂತನ. ಈ ಬಗೆಯ ನಂಬಿಕೆಗಳೇ ನಮ್ಮ ಬದುಕಿನ ಮುನ್ನಡೆಗೆ ಸಹಾಯ ಮಾಡುತ್ತದೆ. ಈ ರೀತಿಯಲ್ಲಿ ನಂಬಿಕೆಯ ವಿಚಾರಗಳು-ಸಂಗತಿಗಳು ಕೇವಲ ಮನುಷ್ಯರಿಗೆ ಮಾತ್ರ ಅನ್ವಯವಾಗದೆ ಪ್ರಾಣಿ-ಪಕ್ಷಿಗಳು ಆತ್ಮೀಯ ಬಾಂಧವ್ಯತೆಯಿಂದ ಒಮ್ಮೊಮ್ಮೆ ಕೋಪವನ್ನು ವ್ಯಕ್ತಪಡಿಸಿದರೂ ತಾವು ನಂಬಿಕೆ ಇಟ್ಟಿರುವುದನ್ನು ದೂರ ಮಾಡಿಕೊಳ್ಳದೆ ಸದಾ ಕಾಲ ನಮ್ಮ ನೆರಳಲ್ಲಿಯೇ ಉಳಿಯುವುದು, ಮರಳಿ ಬರುವುದು ನಂಬಿಕೆಯ ಬಲವನ್ನು ವೃದ್ಧಿಸುತ್ತದೆ. ಅವುಗಳಿಗೆ ಕಾಡುವ ಭಾವ ಅನ್ನದ ಋಣ ಹಾಗೂ ಸ್ವಾಮಿ ನಿಷ್ಠೆಯ ನಂಬಿಕೆ.
Related Articles
Advertisement
ಹೀಗೆ ಮಾಡಿದರೆ ನಂಬಿಕೆಯ ಕತ್ತು ಹಿಸುಕಿದಂತಾಗುತ್ತದೆ. ಆದರೂ ಕೆಲವರು ನಂಬಿದವರಿಗೆ ಪ್ರಾಣ ಕೊಡಲು ಸಿದ್ಧವಾಗಿರುತ್ತಾರೆ, ಅದೇ ನಿಜವಾದ ನಂಬಿಕೆ, ಅವರೇ ನಿಜವಾದ ನಂಬಿಕಸ್ಥರು. ಈ ನೆಲದ ಬಯಲಲ್ಲಿ ದೇವರು ಮಾತ್ರ ವಾಸವಾಗಿಲ್ಲ, ದೇವತಾ ಮನುಷ್ಯರು ವಾಸವಾಗಿದ್ದಾರೆ. ಅದೇ ರೀತಿ ಇದೇ ನೆಲದಲ್ಲಿ ರಾಕ್ಷಸರು ವಾಸವಾಗಿಲ್ಲ. ನರಭಕ್ಷಕರೂ ವಾಸವಾಗಿದ್ದಾರೆ. ಅತ್ಯಂತ ಭೀಕರ ಸಮಯ-ಕಷ್ಟವೆಂದು ಪಡೆದ ಹಣಕ್ಕೆ ದ್ರೋಹ ಬಗೆದು ವಿಶ್ವಾಸ ಕಗ್ಗೊಲೆಗೆ ಸುಪಾರಿ ಕೊಟ್ಟಿರುತ್ತಾರೆ. ಇಂತಹ ವ್ಯಕ್ತಿಗಳು ವಿಶ್ವಾಸ ಘಾತುಕರಾಗಿರುತ್ತಾರೆ.
ಹಿಂದಿನ ಕಾಲದಲ್ಲಿ ಕೇವಲ ಮಾತಿನಿಂದಲೇ ಎಷ್ಟೋ ಕೆಲಸ-ಕಾರ್ಯಗಳು ಅಲ್ಲದೆ ಹಣದ ವ್ಯವಹಾರವು ಕೂಡ ನಡೆಯುತ್ತಿದ್ದವು ಎಂದರೆ ಆ ಮಾತಿನ ಮೇಲೆ ಇದ್ದ ನಂಬಿಕೆಯೇ ಕಾರಣ ಎಂದರೆ ತಪ್ಪಾಗದು. ಆಗ ತುಂಬಾ ನಂಬಿಕಸ್ತ ಜನ ಇದ್ದರು. ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದರು. ಆದರೆ ಈ ಕಾಲದಲ್ಲಿ ಯಾರನ್ನ ನಂಬಬೇಕೋ, ಯಾರನ್ನು ಬಿಡಬೇಕೋ ಒಂದು ತಿಳಿಯದು. ನಂಬಿಕೆ ಇಟ್ಟವರು ನಂಬಿಕೆ ಕಳ್ಕೊತ್ತಾರೆ.
ಒಂದು ಕಾಲದಲ್ಲಿ ಜನಪ್ರಿಯವಾದ ಗೀತೆಯಾಗಿದ್ದ ಹೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ಆದರೆ ಏನು ಮಾಡುವುದು ಹೊರಗಿನ ಕಳ್ಳರನ್ನಾದರೂ ಪತ್ತೆ ಮಾಡಬಹುದು, ಒಳಗಿನ ಕಳ್ಳರನ್ನು ಪತ್ತೆ ಮಾಡಲು ಎಂದಿಗೂ ಸಾಧ್ಯವಾಗದೆ ಇರಬಹುದು. ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುವಿನ ಮೇಲೆ ನಂಬಿಕೆ ಇರಲೇಬೇಕು. ನಂಬಿಕೆಯ ಭಾವದಿಂದ ಉಸಿರಾಡುವುದು ಬಹಳಾನೇ ಕಷ್ಟ. ಅದಕ್ಕಾಗಿಯೇ ಹೇಳುವುದು ಎಲ್ಲರನ್ನು ನಂಬಬೇಕು. ಆದರೆ ನಮ್ಮನ್ನು ನಾವೇ ಕಳೆದುಕೊಳ್ಳುವ ಹಾಗೆ ನಂಬಬಾರದು ಎಂದು. ಜೀವನದಲ್ಲಿ ನಂಬಿಕೆ ಎನ್ನುವುದು ಅತೀ ಮುಖ್ಯವಾದುದು. ಅದನ್ನು ಕಳೆದುಕೊಂಡರೆ ಮತ್ತೆ ಸಂಪಾದಿಸಲು ಮಣ್ಣಿಗೋದರೂ ಸಾಧ್ಯವಿಲ್ಲ.
ನಂಬಿಕೆ
ನಂಬಿಕೆಯೇ ವಿಶ್ವಾಸ-ಆತ್ಮವಿಶ್ವಾಸದ ಮೆಲುಕು, ನಂಬಿಕೆಯೇ ಜೇವಿಸುವ ಜೀವನದ ಜೀವಂತ ಬದುಕು, ನಂಬಿಕೆಯೇ ತಿಳಿಮುಗಿಲ ಅಂಚಲ್ಲಿ ಭರವಸೆಯ ಬೆಳಕು, ನಂಬಿಕೆ ಇಲ್ಲದಿರೆ ವಿರಸ-ವೈಮನಸ್ಸು-ಮೂಡುವುದು ಒಡಕು, ನಂಬಿಕೆಯಿಂದಲೇ ಅಗಾಧ ಕಾರ್ಯಗಳ ಸಿದ್ದಿಗಾಗಿ ಅದುವೇ ಜಗಕೆ ಬೇಕು, ನಂಬಿಕೆ ಇಲ್ಲದ ಮನಸ್ಸು ಎಂದಿಗೂ ಕೊಳಕು, ನಂಬಿಕೆ ತೊರೆದರೆ ಅಳುಕು-ನಂಬಿಕೆಯನ್ನೇ ಸಂಶಯಪಡುತಾ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಎಲ್ಲರ ಜೀವನವ ಮುಕ್ಕುವುದು ಅಪನಂಬಿಕೆಯ ಉಳುಕು. ನಂಬಿಕೆ ಬೇಕು ಅದಕು-ಇದಕು- ಎದಕೂ-ನಂಬಿಕೆಯೇ ಬಾಳಿನ ಜೀವಾಳದ ಬದುಕು ಎಂದಳು ನನ್ನವ್ವ ಸಾಕವ್ವ
-ಪರಮೇಶ ಕೆ. ಉತ್ತನಹಳ್ಳಿ
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹಿಂದೂಸ್ಥಾನ್ ಕಾಲೇಜು, ಮೈಸೂರು