ಶಿವಮೊಗ್ಗ: ಜಯಂತಿಗಳನ್ನು ಜಾತ್ರೆಗಳಂತೆ ಮಾಡದೆ ಸಮಾಜವನ್ನು ಕಟ್ಟುವ ಕೆಲಸಕ್ಕೆ ವೇದಿಕೆಯಾಗಿ ಬಳಿಸಿಕೊಳ್ಳಬೇಕು. ಹಲವು ಸಮುದಾಯಕ್ಕೆ ಸಂಬಂಧಪಟ್ಟ ಮಠಗಳು ಲಾಬಿ ಮಾಡುತ್ತಿದ್ದು, ಸರಕಾರದಿಂದ ಅನುದಾನದ ತರುತ್ತಿವೆ. ನೊಳಂಬ ಸಮಾಜ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಲಿ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸಲಹೆ ನೀಡಿದರು.
ನಗರದ ನಂದಿ ವಿದ್ಯಾಸಂಸ್ಥೆಯಲ್ಲಿ ನೊಳಂಬ ವೀರಶೈವ ಯುವ ವೇದಿಕೆ, ನಂದಿ ವಿದ್ಯಾಸಂಸ್ಥೆ, ನಂದಿ ಮಹಿಳಾ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಭಕ್ತಿ ಹಾಗೂ ದೇಣಿಗೆ ಸಮರ್ಪಣೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಹಲವು ಜಯಂತಿಗಳ ಆಚರಣೆಗೆ ಅನುದಾನ ಮಂಜೂರು ಮಾಡುತ್ತಿದೆ. ಅದನ್ನು ಬಳಸಿಕೊಂಡು ಸಮಾಜದಲ್ಲಿ ಸಂಘಟನೆ ತರಲು ಪ್ರಯತ್ನಿಸಬೇಕು. ಸಮಾಜ ಯುವಪೀಳಿಗೆ ಉತ್ತಮ ವಿದ್ಯಾರ್ಹತೆ ಹೊಂದಿ ಉನ್ನತ ಸ್ಥಾನಕ್ಕೆ ಹೋಗಬೇಕು. ಅದಕ್ಕಾಗಿ ಬಡವರಿಗೆ ವಿದ್ಯೆ ಮತ್ತು ದಾಸೋಹ ನೀಡಬೇಕು ಎಂದು ಹೇಳಿದರು.
ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಸಮಾಜದ ಅಭಿವೃದ್ಧಿಗೆ ಜಿಲ್ಲೆಯಲ್ಲಿ 12-15 ಕೋಟಿ ರೂ.ಅನುದಾನ ಮಂಜೂರು ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬಂದ ಬಳಿಕ ಸಮುದಾಯದ ಅಭಿವೃದ್ಧಿಯಾಗಿದೆ.
ವೀರಶೈವ ಲಿಂಗಾಯತ ಸಮಾಜವನ್ನು 2ಎಗೆ ಸೇರಿಸುವುದಕ್ಕಾಗಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಯತ್ನಿಸಿದ್ದರು. ಆದರೆ, ಆಗ ಸರಿಯಾದ ಬೆಂಬಲ ಸಿಗದ ಕಾರಣದಿಂದ ಫಲಿಸಲಿಲ್ಲ. ಈಗ ಮಠಗಳು ಮನಸ್ಸು ಮಾಡಿದ್ದಲ್ಲಿ ಎಲ್ಲರನ್ನೂ ಸಂಘಟಿಸಿ ಈ ನಿಟ್ಟಿನಲ್ಲಿ ಕಾರ್ಯಗತರಾಗಬಹುದು. ವೀರಶೈವ ಸಮಾಜದ ಯುವಪೀಳಿಗೆ ಮುಂದೆ ಬರಬೇಕು. ಸಮಾಜವನ್ನು ಸಂಘಟಿಸಬೇಕು. ಕಾಯಕಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದರು. ನಂದಿಗುಡಿ ಬೃಹನ್ಮಠ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ನೊಳಂಬ ವೀರಶೈವ ಯುವ ವೇದಿಕೆ ಅಧ್ಯಕ್ಷ ಜೆ.ಪಿ. ಚಂದ್ರು ಅಧ್ಯಕ್ಷತೆ ವಹಿಸಿದ್ದರು. ವಕೀಲ ಡಿ.ಎನ್. ಹಾಲಸಿದ್ದಪ್ಪ ಉಪನ್ಯಾಸ ನೀಡಿದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಶ್ರೀ ಬಸವೇಶ್ವರ ಸಮಾಜ ಸೇವಾಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಪಿ. ರುದ್ರೇಶ್, ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಕೃಷಿ ಉಪ ನಿರ್ದೇಶಕ ಡಿ.ಎಂ. ಬಸವರಾಜ್, ಜಾನಪದ ಗಾಯಕ ಕೆ. ಯುವರಾಜ್, ವೇದಿಕೆ ಸಹ ಕಾರ್ಯದರ್ಶಿ ಜಯರಾಜ್ ಗಾಮದ, ಈಶ್ವರ್ ಎಣ್ಣೆರ್ ಎ.ವಿ. ನಟರಾಜ್ ಇತರರಿದ್ದರು.