Advertisement

ಮಟ್ಕಾ, ಸಾರಾಯಿ ದೂರು; ಸಾರ್ವಜನಿಕರಿಂದ ದಂಧೆಕೋರರ ಮಾಹಿತಿ’

07:15 AM Aug 20, 2017 | Team Udayavani |

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ ಎಂ. ಪಾಟೀಲ್‌ ಅವರು ಸಾರ್ವಜನಿಕರೊಂದಿಗೆ ಶನಿವಾರ ನಡೆಸಿದ ಇಲಾಖಾ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮಟ್ಕಾ, ಅಕ್ರಮ ಸಾರಾಯಿ ಮಾರಾಟ ವಿಷಯದ ಕುರಿತು ಹೆಚ್ಚಿನ ದೂರುಗಳು ಬಂದಿದ್ದು, ಈ ದಂಧೆಗಳನ್ನು ನಡೆಸುವವರ ಹೆಸರುಗಳ ಸಹಿತ ಹಲವು ಮಾಹಿತಿಗಳನ್ನು ಸಾರ್ವಜನಿಕರು ಎಸ್‌ಪಿಯವರಿಗೆ ನೀಡಿದರು.

Advertisement

ಎಲ್ಲರ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಪಡೆದ ಎಸ್‌ಪಿಯವರು ಮಾಧ್ಯಮದೊಂದಿಗೆ ಮಾತನಾಡಿ, ಮಟ್ಕಾ, ಅಕ್ರಮ ಸಾರಾಯಿ ದೂರುಗಳು ಹೆಚಾಗಿ ಬಂದಿದೆ. ಅಕ್ರಮ ಚಟುವಟಿಕೆಗಳ ನಿರ್ಮೂಲನೆ ಒಂದೇ ಸಲಕ್ಕೆ ಸಾಧ್ಯವಿಲ್ಲ. ಪ್ರಥಮವಾಗಿ ನಿರಂತರ ಕಾರ್ಯಾಚರಣೆಗಳ ಮೂಲಕ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಮೂಡಿಸಲಾಗುವುದು. ಮಟ್ಕಾ ದಂಧೆ ಮಟ್ಟ ಹಾಕಲು ಈಗಾಗಲೇ ಸೂಚನೆ ನೀಡಲಾಗಿದೆ. ಯಾವುದೇ ಅಕ್ರಮ ಚಟುವಟಿಕೆಗಳನ್ನು ಆಯಾ ವೃತ್ತ, ಠಾಣಾ ಮಟ್ಟದಲ್ಲಿನ ಅಧಿಕಾರಿಗಳೇ ನಿಯಂತ್ರಣಕ್ಕೆ ತರಬೇಕು. ಸಮಸ್ಯೆಗಳು ಪದೇ ಪದೇ ಮರುಕಳಿಸುತ್ತಾ ಇದ್ದರೆ ಜನರು ನಿರ್ಭೀತಿಯಿಂದ ಮಾಹಿತಿ ಕೊಟ್ಟರೆ ತಾನೇ ಕ್ರಮ ಕೈಗೊಳ್ಳುವೆ ಎಂದು ಹೇಳಿದ ಎಸ್‌ಪಿ, ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯತೆ, ಉದಾಸೀನ ತೋರಿದಲ್ಲಿ ಇಲಾಖಾ ಮಟ್ಟದಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಎಚ್ಚರಿಸಿದರು. ಮಣಿಪಾಲ, ಕೋಟ, ಶಿರ್ವ, ಗಂಗೊಳ್ಳಿ ಮೊದಲಾದ ಕಡೆಗಳಲ್ಲಿ ಮಟ್ಕಾ ಜುಗಾರಿ ಹೆಚ್ಚಾಗಿರುವ ಕುರಿತು ದೂರುಗಳು ಬಂದಿದ್ದವು. ಡಿವೈಎಸ್‌ಪಿ ಎಸ್‌.ಜೆ. ಕುಮಾರಸ್ವಾಮಿ, ಡಿಸಿಐಬಿ ಇನ್ಸ್‌ಪೆಕ್ಟರ್‌ ಸಂಪತ್‌ ಕುಮಾರ್‌, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಆಟೋರಿಕ್ಷಾ ಮೀಟರ್‌ ಹಾಕೋದಿಲ್ಲ
ಬಸ್ಸಿನವರಿಂದ ಕರ್ಕಶ ಹಾರನ್‌ ಇನ್ನಿತರ ತೊಂದರೆ, ರಾಂಗ್‌ಸೈಡ್‌, ಅಸಮರ್ಪಕ ಬ್ಯಾರಿಕೇಡ್‌, ಮರಳುಗಾರಿಕೆ, ಆಟೋ ಸಂಘಟನೆಯವರು ಬಾವುಟ ಹಾಕಿರುವುದು, ಆಟೋರಿಕ್ಷಾ ಅಧಿಕ ಬಾಡಿಗೆ, ಮೀಟರ್‌ ಹಾಕೋದಿಲ್ಲ. ಕಲ್ಲುಕೋರೆಯಲ್ಲಿ ಇಸ್ಪೀಟ್‌ ಪಡುಬಿದ್ರಿ ಬಾರ್‌ ಸ್ಥಳಾಂತರ, ಪೊಲೀಸ್‌ ಇಲಾಖೆಗೆ ಆ್ಯಂಬುಲೆನ್ಸ್‌ ಇರಬೇಕು, ವಾಹನಗಳ ಇನ್ಶೂರೆನ್ಸ್‌, ಕೆಮ್ಮಣ್ಣು ಕ್ರಾಸ್‌ನಲ್ಲಿ ಪೊಲೀಸರ ವ್ಯವಸ್ಥೆಗೆ ಬೇಡಿಕೆ ಮೊದಲಾದ ವಿಷಯಗಳ ಕುರಿತು ಜನರು ಮಾಹಿತಿ ನೀಡಿದರು. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದರು.

ಮೀನಿನ ನೀರು ರಸ್ತೆಗೆ, ಪಾರ್ಕಿಂಗ್‌ ಅವ್ಯವಸ್ಥೆ
ಮಲ್ಪೆ ಬಂದರ್‌ನಿಂದ ಹೊರಡುವ ಮೀನಿನ ಲಾರಿಗಳಲ್ಲಿರುವ ಮೀನಿನ ನೀರನ್ನು ರಸ್ತೆಗೆ ಚೆಲ್ಲುತ್ತಾ ಹೋಗುತ್ತಾರೆ ಎನ್ನುವ ದೂರಿಗೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್‌ಪಿ, ಅಂತಹವರಿಗೆ ಮೊದಲು ವಾರ್ನಿಂಗ್‌ ಕೊಡಿ, ಆಮೇಲೆ ವಾಹನವನ್ನೇ ಸೀಜ್‌ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಡುಪಿಯಲ್ಲಿ ಬಿಗ್‌ಬಜಾರ್‌ನಿಂದ ಸರ್ವೀಸ್‌ ಬಸ್‌ ನಿಲ್ದಾಣದವರೆಗೆ ಪಾರ್ಕಿಂಗ್‌ ಸಮಸ್ಯೆ ಇದೆ. ಇಲ್ಲಿ ಏಕಮುಖ ಪಾರ್ಕಿಂಗ್‌ ವ್ಯವಸ್ಥೆ ಮಾಡಿ ಎನ್ನುವ ಸಲಹೆ ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಎಸ್‌ಪಿ ಸಂಜೀವ ಪಾಟೀಲ್‌ ತಿಳಿಸಿದರು.

ಮಕ್ಕಳೊಡನೆ ಸಂವಾದ 
ಸಂತೆಕಟ್ಟೆ-ಕಲ್ಯಾಣಪುರ ಡಾ| ಟಿಎಂಎ ಪೈ ಕನ್ನಡ ಮಾಧ್ಯಮ ಪ್ರೌಢಶಾಲೆಯೊಂದರ ಶಿಕ್ಷಕಿಯೊಬ್ಬರು ಕರೆ ಮಾಡಿ, ಪಾಠದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಇದೆ. ಈ ಬಗ್ಗೆ ತಾವು ಮಾಹಿತಿ ನೀಡಬೇಕು ಎಂದು ಮಕ್ಕಳು ಬಯಸಿದ್ದಾರೆ. ಅವರಿಗೆ ಏನಾದರು ಹೇಳುವಿರಾ ಎಂದು ಕೋರಿಕೊಂಡರು. ಫೋನ್‌-ಇನ್‌ ಕಾರ್ಯಕ್ರಮದ ಬಳಿಕ (ಮಧ್ಯಾಹ್ನ 12 ಗಂಟೆಗೆ) ತಾನು ಖುದ್ದಾಗಿ ಶಾಲೆಗೆ ಭೇಟಿ ನೀಡಿ 30 ನಿಮಿಷ ಮಾತನಾಡುತ್ತೇನೆ ಎಂದರು. ಅದೇ ರೀತಿಯಾಗಿ ಮಧ್ಯಾಹ್ನ ಶಾಲೆಗೆ ತೆರಳಿದ ಎಸ್‌ಪಿಯವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕಿಯು ಶನಿವಾರ ಬೆಳಗ್ಗೆ “ಉದಯವಾಣಿ’ಯ ವರದಿ ಓದಿ ಕರೆ ಮಾಡಿದ್ದರು.

Advertisement

ಮುಂದಿನ ವಾರ ಮಾತನಾಡಿ
ಕೆಲವು ಸಾರ್ವಜನಿಕರು “ಉದಯವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿ, ಕರೆ ಬ್ಯುಸಿ ಇತ್ತು. ಕನೆಕ್ಟ್ ಆಗಿಲ್ಲ ಎಂದಿದ್ದಾರೆ. ಈ ಬಗ್ಗೆ ಎಸ್‌ಪಿಯವರಲ್ಲಿ ಹೇಳಿದಾಗ, ತುರ್ತು ಸಭೆಗಳನ್ನು ಹೊರತುಪಡಿಸಿ ಪ್ರತಿ ಶನಿವಾರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಫೋನ್‌ – ಇನ್‌ ಕಾರ್ಯಕ್ರಮ ಇರುತ್ತದೆ. ಕರೆ ಕನೆಕ್ಟ್ ಆಗಿಲ್ಲವೆಂದು ಬೇಸರಿಸಬೇಡಿ. ಮುಂದಿನ ವಾರ ಶನಿವಾರ ಬೆಳಗ್ಗೆ ಫೋನ್‌-ಇನ್‌ನಲ್ಲಿ ತನ್ನೊಂದಿಗೆ ಮಾತನಾಡಬಹುದು ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next