ಅವರೆಲ್ಲರೂ ಆಗಷ್ಟೇ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ ಕಾಲೇಜಿನಿಂದ ಹೊರಬಂದಿರುವ ಹುಡುಗರು. ತಮ್ಮದೇ ಆದ ಸ್ವಂತ ನ್ಯೂಸ್ ಚಾನೆಲ್ ಶುರು ಮಾಡಿ ಆ ಮೂಲಕ ಪತ್ರಿಕೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ಅವರ ಕನಸು. ಆದರೆ ನ್ಯೂಸ್ ಚಾನೆಲ್ ಶುರು ಮಾಡುವುದೆಂದರೆ, ಹುಡುಕಾಟದ ಮಾತೆ? ನ್ಯೂಸ್ ಚಾನೆಲ್ ಶುರುಮಾಡಲು ಕೋಟ್ಯಾಂತರ ರೂಪಾಯಿ ಬಂಡವಾಳ ಬೇಕು. ಆ ಬಂಡವಾಳವನ್ನು ಕ್ರೂಢೀಕರಿಸುವುದು ಹೇಗೆ? ಎಂಬ ಯೋಚನೆಯಲ್ಲಿದ್ದಾಗ ಇವರಿಗೆ ಹೊಳೆಯುವ ಐಡಿಯಾ ಸಿನಿಮಾ ಮಾಡುವುದು. ಹೌದು, ಒಂದು ಒಳ್ಳೆಯ ಸಿನಿಮಾ ಮಾಡುವುದು ಆ ಸಿನಿಮಾದ ಮೂಲಕ ಹಣ ಮತ್ತು ಹೆಸರು ಎರಡನ್ನೂ ಮಾಡಿ, ತಮ್ಮ ಕನಸಿನ ನ್ಯೂಸ್ ಚಾನೆಲ್ ಶುರು ಮಾಡುವುದು. ಹೀಗೆ ತಮ್ಮ ದೊಡ್ಡ ಕನಸು ನನಸು ಮಾಡುವ ಸಲುವಾಗಿ “ಮತ್ತೆ ಮತ್ತೆ’ ಸಿನಿಮಾ ಮಾಡಲು ಈ ಹುಡುಗರ ತಂಡ ಮುಂದಾಗುತ್ತದೆ. ಸಿನಿಮಾ ಮಾಡಲು ಹೊರಡುವ ಈ ಹುಡುಗರಿಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗುತ್ತ ಹೋಗುತ್ತದೆ. ಅದೆಲ್ಲವನ್ನೂ ದಾಟಿ ಇವರೆಲ್ಲರೂ ತಾವಂದುಕೊಂಡಂತೆ ಸಿನಿಮಾ ಮಾಡಿ ಮುಗಿಸುತ್ತಾರಾ? ಆ ಸಿನಿಮಾ ಹೇಗಿರುತ್ತದೆ? ಎಂಬುದೇ ಈ ವಾರ ತೆರೆಗೆ ಬಂದಿರುವ “ಮತ್ತೆ ಮತ್ತೆ’ ಸಿನಿಮಾದ ಕಥಾಹಂದರ.
ಇದೊಂದು ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಸಿನಿಮಾ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಅದರ ಬೆನ್ನತ್ತಿ ಹೊರಟ ಹುಡುಗರ ಹಠ, ಹೋರಾಟ ಎಲ್ಲವನ್ನೂ ನಿರ್ದೇಶಕರು ಹಾಸ್ಯಭರಿತವಾಗಿ ತೆರೆಮೇಲೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ಒಂದು ಗಂಭೀರ ವಿಷಯವನ್ನು ಕಾಮಿಡಿ ಟಚ್ ಕೊಟ್ಟು ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಕಥೆ ಮತ್ತು ಸಂಭಾಷಣೆ ಸಿನಿಮಾದ ಹೈಲೈಟ್ಸ್. ನಟಿ ಸಂಜನಾ ಗಲ್ರಾನಿ ಸಿನಿಮಾದ ಹಾಡೊಂದು ಮತ್ತು ಕೆಲ ದೃಶ್ಯಗಳಲ್ಲಿ ಅಭಿನಯಿಸಿ “ಮತ್ತೆ ಮತ್ತೆ’ ಸಿನಿಮಾದ ಮೂಲಕ “ಮತ್ತೆ’ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ.
ತಾಂತ್ರಿಕವಾಗಿ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳು ಅಲ್ಲಲ್ಲಿ ಗುನುಗುವಂತಿದೆ. ಹಿರಿಯ ಕಲಾವಿದರು, ಕಿರಿಯ ಕಲಾವಿದರ ಸಮಾಗಮದಲ್ಲಿ ಮೂಡಿಬಂದಿರುವ, ಕೂತಲ್ಲಿ ಕಚಗುಳಿಯಿಡುವ “ಮತ್ತೆ ಮತ್ತೆ’ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್