Advertisement
ಎರಡೆಯನೆಯದ್ದಾದ ದೈನಂದಿನ ಪ್ರಳಯದಲ್ಲಿ ಅತಿವೃಷ್ಟಿಯಾಗಿ ಮೂರು ಲೋಕಗಳು ಜಲಾವೃತವಾಗಿ ಮುಳುಗುವವು. ಆಗ ಬ್ರಹ್ಮದೇವರ ಒಂದು ಹಗಲು ಕಳೆದು ರಾತ್ರಿ ಪ್ರಾರಂಭವಾಗುವುದರಿಂದ ತಮ್ಮ ಎಲ್ಲ ಚಟುವಟಿಕೆಯನ್ನು ನಿಲ್ಲಿಸಿ ನಿದ್ರೆಗೊಳಗಾಗುವರು. ಇದರ ಅಂತ್ಯದಲ್ಲಿ ಆಕಸ್ಮಿಕ ಪ್ರಳಯವು ಪ್ರವರ್ತಿಸುವುದು.
Related Articles
Advertisement
ಮೀನು ಮಾತನಾಡುವುದನ್ನು ಕಂಡು ಆಶ್ಚರ್ಯಚಿಕಿತನಾದ ಸತ್ಯವ್ರತನು ಅದರ ಬಗ್ಗೆ ದಯೆ ತೋರಿ, ಅದನ್ನು ತನ್ನ ಕಮಂಡಲದಲ್ಲಿ ಇರಿಸಿಕೊಂಡು ಕುಟೀರಕ್ಕೆ ಬಂದನು. ಮರುದಿನವೇ ಆ ಮೀನು ಕಮಂಡಲದ ತುಂಬಾ ಬೆಳೆದುಬಿಟ್ಟಿತು, ದೊಡ್ಡದಾದ ಮೀನು ” ರಾಜ… ಈ ಕಮಂಡಲವು ನನ್ನ ವಾಸಕ್ಕೆ ಚಿಕ್ಕದಾಯಿತು…. ದಯಮಾಡಿ ನನ್ನನ್ನು ದೊಡ್ಡ ಪಾತ್ರೆಗೆ ಹಾಕು” ಎಂದಿತು
ಚಿಕ್ಕದಾಗಿದ್ದ ಈ ಮೀನು ಒಂದೇ ರಾತ್ರಿಯಲ್ಲಿ ಇಷ್ಟು ದೊಡ್ಡದಾಗಿ ಹೇಗೆ ಬೆಳೆಯಿತು ಎಂದು ಯೋಚಿಸುತ್ತ ಅದನ್ನು ದೊಡ್ಡ ಪಾತ್ರೆಯಲ್ಲಿ ಬಿಟ್ಟನು. ಒಂದೇ ಗಳಿಗೆಯಲ್ಲಿ ಆ ಮತ್ಸ್ಯವು ಪಾತ್ರೆಯ ತುಂಬಾ ಬೆಳೆದು ರಾಜನಿಗೆ ಮತ್ತಷ್ಟು ಆಶ್ಚರ್ಯವನ್ನುಂಟುಮಾಡಿತು. ಆದರೂ ಮಾತನಾಡದೆ ಅದನ್ನು ಎತ್ತಿ ತಂದು ಒಂದು ಸರೋವರದಲ್ಲಿ ಬಿಟ್ಟನು, ಸ್ವಲ್ಪಹೊತ್ತಿನಲ್ಲಿ ಆ ಸರೋವರವನ್ನು ವ್ಯಾಪಿಸುವಷ್ಟು ದೊಡ್ಡದಾಗಿ ಮತ್ಸ್ಯವು ಬೆಳೆದುನಿಂತಿತು. ಅದನ್ನು ಕಂಡ ರಾಜನು ಆ ಮತ್ಸ್ಯವನ್ನು ಸಮುದ್ರಕ್ಕೆ ತಂದು ಬಿಟ್ಟನು.
ಆಗ ಆ ಮತ್ಸ್ಯವು ” ರಾಜ.. ಈಗ ನೀನೇನು ನನಗೆ ಉಪಕಾರ ಮಾಡಿದಂತಾಯಿತು, ನಾನು ನದಿಯಲ್ಲಿದ್ದಾಗಲೇ ದೊಡ್ಡ ಮೀನುಗಳಿಗೆ ಅಂಜಿ ನನ್ನನ್ನು ರಕ್ಷಿಸಲು ನಿನ್ನನ್ನು ಬೇಡಿಕೊಂಡೆನು. ಆದರೆ ಈಗ ನೀನು ನನ್ನನ್ನು ಸಮುದ್ರದಲ್ಲಿ ತಂದು ಬಿಟ್ಟೆ, ಇಲ್ಲಿ ಬೃಹದಾಕಾರದ ಮೊಸಳೆಗಳು ತಿಮಿಂಗಿಲಗಳು ಹಾಗು ಜಲರಾಕ್ಷಸಗಳಿರುವವು, ಅವು ನನ್ನನ್ನು ತಿನ್ನದೇ ಬಿಡಲಾರವು. ನನ್ನನ್ನು ಮರಣ ಭಯದಿಂದ ಪಾರುಮಾಡಲು ನಿನ್ನನ್ನು ಬೇಡಿಕೊಂಡರೆ ನೀನು ನನ್ನನ್ನು ಮರಣದ ದವಡೆಯಲ್ಲಿ ತಂದಿಟ್ಟೆಯಲ್ಲ…..? ಇದು ನ್ಯಾಯವೇ ? ಎಂದಿತು.
ಆಗ ರಾಜನು ‘ಎಲೈ ಮತ್ಸ್ಯವೇ ನೀನು ಮಾನವರಂತೆ ಮಾತನಾಡಿ ಕೆಲವೇ ದಿನಗಳಲ್ಲಿ ಅಸಾಧಾರಣವಾಗಿ ಬೆಳೆದಿರುವೆ, ನೀನು ಯಾರು ? ಸಾಮಾನ್ಯ ಮತ್ಸ್ಯವಂತೂ ಅಲ್ಲವೇ ಅಲ್ಲ, ಶ್ರೀಮನ್ನಾರಾಯಣನೇ ನನ್ನನ್ನು ಪರೀಕ್ಷಿಸಲು ಮತ್ಸ್ಯರೂಪದಿಂದ ಬಂದಿರುವನೆಂದು ನನ್ನ ಬಲವಾದ ನಂಬಿಕೆ’ ಎಂದು ಹೇಳುತ್ತಾ ರಾಜನು ಅದರೆದುರು ಕರಜೋಡಿಸಿ ಶಿರಬಾಗಿ ಭಗವಂತನನ್ನು ಸ್ತುತಿಸ ತೊಡಗಿದನು.
‘ನಾರಾಯಣನೇ, ನನ್ನಂತಹ ಭಕ್ತರ ಉದ್ದಾರಕ್ಕಾಗಿ ಅನೇಕ ರೀತಿಯ ರೂಪತಳೆದ ನೀನು ಈಗ ಮತ್ಸ್ಯಾವತಾರವನ್ನು ಹೊಂದಿದ ಉದ್ದೇಶವೇನು’ ಎಂದು ಕೇಳಿದನು. ಆಗ ಮತ್ಸ್ಯವು ‘ರಾಜ ನೀನು ನನ್ನ ಬಗ್ಗೆ ಸರಿಯಾಗಿಯೇ ತಿಳಿದುಕೊಂಡಿರುವೆ. ನಾನು ಪ್ರಳಯಕಾಲದಲ್ಲಿ ಮತ್ಸ್ಯರೂಪದಿಂದ ಇರುವೆನು . ಇಂದಿಗೆ ಏಳನೇ ದಿನದಲ್ಲಿ ಅತಿವೃಷ್ಟಿಯಾಗಿ ಇಡೀ ಸೃಷ್ಟಿಯೇ ಜಲಮಯವಾಗುವುದು, ಆಗ ಆ ನೀರಿನಲ್ಲಿ ಒಂದು ದೋಣಿಯು ತೇಲಿಬರುವುದು, ಅದರಲ್ಲಿ ಸಪ್ತಋಷಿಗಳು ಇರುವರು. ನೀನು ಆ ದೋಣಿಯಲ್ಲಿ ಎಲ್ಲ ರೀತಿಯ ಬೀಜಗಳು ಹಾಗು ವನಸ್ಪತಿಗಳನ್ನು ತುಂಬಿಸಿ ನೀನು ಸಹ ಕುಳಿತುಕೋ’ ಎಂದಿತು.
‘ಬ್ರಹ್ಮನ ಒಂದು ರಾತ್ರಿ ಮುಗಿಯುವವರೆಗೂ ಸಪ್ತಋಷಿಗಳೊಂದಿಗೆ ನೀನು ಇರು. ನಾನು ನಿನಗೆ ಇದೇ ರೂಪದಿಂದ ಬಂದು ಪರಬ್ರಹ್ಮ ತತ್ವವನ್ನು ಉಪದೇಶಿಸುವೆನು’ ಎಂದು ಹೇಳಿ ಅದೃಶ್ಯವಾಯಿತು. ರಾಜನು ಆನಂದ ಪರವಶನಾಗಿ ಆಶ್ರಮಕ್ಕೆ ಹಿಂದಿರುಗಿ ಪ್ರಳಯಕಾಲದ ಮಳೆಯನ್ನೂ ನಿರೀಕ್ಷಿಸತೊಡಗಿದನು.
ಏಳನೆಯದಿನ ಇದ್ದಕಿದ್ದಂತೆ ಬಿರುಗಾಳಿ ಸಹಿತವಾದ, ಗುಡುಗು ಸಿಡಿಲುಗಳಿಂದ ಕೂಡಿದ, ಅತ್ಯಂತ ವಿನಾಶಕಾರಿಯಾದ ಮಳೆ ಬೀಳತೊಡಗಿತು. ಎಲ್ಲ ಕಡೆಯಲ್ಲಿಯೂ ಜಲಾವೃತವಾಯಿತು. ರಾಜನು ಏಕಾಗ್ರಚಿತ್ತನಾಗಿ ಶ್ರೀಹರಿಯನ್ನು ಧ್ಯಾನಿಸುತ್ತ ಶಾಂತನಾಗಿ ಕುಳಿತಿದ್ದನು, ಅಷ್ಟರಲ್ಲಿ ಸಪ್ತಋಷಿಗಳು ಕುಳಿತಿದ್ದ ದೋಣಿಯು ರಾಜನಲ್ಲಿಗೆ ಬಂದಿತು.
ಸತ್ಯವ್ರತನು ಬೀಜ ಹಾಗು ವನಸ್ಪತಿಗಳೊಂದಿಗೆ ದೋಣಿಯಲ್ಲಿ ಕುಳಿತುಕೊಂಡನು. ಸಪ್ತಋಷಿಗಳು ರಾಜನಿಗೆ ಅಭಯವನ್ನಿತ್ತು ಶ್ರೀಹರಿಯ ಧ್ಯಾನದಲ್ಲಿ ತನ್ಮಯರಾಗಿರಲು ಸೂಚಿಸಿದರು. ಸಾಗರದ ಬೃಹದಾಕಾರದ ತೆರೆಗಳ ಹೊಯ್ದಾಟದಲ್ಲಿ ದೋಣಿಯು ಅಲ್ಲೋಲಕಲ್ಲೋಲವಾಗುತ್ತಿದ್ದರೂ ರಾಜನು ಹರಿಯನ್ನು ಧ್ಯಾನಿಸುತ್ತ ಧೈರ್ಯದಿಂದ ಇದ್ದನು. ಅಷ್ಟರಲ್ಲಿ ಬಂಗಾರದ ಬಣ್ಣದ ಬೃಹದಾಕಾರದ ಮತ್ಸ್ಯವು ವಿಹರಿಸುತ್ತ ದೋಣಿಯ ಸಮೀಪಕ್ಕೆ ಬರುವುದನ್ನು ಕಂಡರು.
ಅದೇ ಸಮಯದಲ್ಲಿ ಬೃಹದಾಕಾರದ ಸರ್ಪವೊಂದು ದೋಣಿಯ ಹತ್ತಿರಕ್ಕೆ ಬಂದಿತು. ರಾಜನು ಆ ಸರ್ಪದ ಒಂದು ತುದಿಯನ್ನು ದೋಣಿಗೂ ಮತ್ತೊಂದನ್ನು ಮತ್ಸ್ಯಕ್ಕೂ ಕಟ್ಟಿದನು. ಆಗ ದೋಣಿಯ ಹೊಯ್ದಾಟ ನಿಂತು ಬ್ರಹ್ಮ್ಮನ ಒಂದು ರಾತ್ರಿ ಕಾಲದವರೆಗೂ ನಿಧಾನಕ್ಕೆ ತೇಲತೊಡಗಿತು. ಆ ಸಮಯದಲ್ಲಿ ಭಗವಂತನು ಸತ್ಯವ್ರತನಿಗೆ ಆತ್ಮಸ್ವರೂಪ, ಭಕ್ತಿ ಯೋಗ, ಮತ್ಸ್ಯಪುರಾಣ ಸಂಹಿತೆಯನ್ನು ಉಪದೇಶಿಸಿದನು.
ಬ್ರಹ್ಮದೇವರು ನಿದ್ರಿಸುತ್ತಿರುವಾಗ ಅವರಲ್ಲಿದ್ದ ವೇದಗಳನ್ನು ಹಯಗ್ರೀವನೆಂಬ ದೈತ್ಯನು ಕದ್ದು ಸಮುದ್ರದ ತಳದಲ್ಲಿ ಬಚ್ಚಿಟ್ಟನು, ಪ್ರಳಯಕಾಲ ಕಳೆದು ಬ್ರಹ್ಮನ ಹಗಲು ಪ್ರಾರಂಭವಾದಾಗ, ಮತ್ಸ್ಯರೂಪಿ ಪರಮಾತ್ಮನು ಆ ದಾನವನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವನಿಗೆ ಒಪ್ಪಿಸಲು ಹೊಸ ಮನ್ವಂತರ ಪ್ರಾರಂಭವಾಯಿತು ಅದಕ್ಕೆ ಸತ್ಯವ್ರತ ರಾಜನೇ ಮನುವಾದನು.