Advertisement

ಮಾತೃಪೂರ್ಣ ಯೋಜನೆ : ಮುಗಿಯದ ಆಹಾರ ಸಾಮಗ್ರಿ ವಿತರಣೆ ಗೊಂದಲ

11:24 AM Oct 23, 2022 | Team Udayavani |

ಉಡುಪಿ : ಸರಕಾರದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ವಿತರಿಸಲಾಗುವ ಪೌಷ್ಟಿಕ ಆಹಾರ ಸಾಮಗ್ರಿ ವಿಚಾರವಾಗಿ ಕೊರೊನಾ ಬಳಿಕ ಹುಟ್ಟಿಕೊಂಡಿರುವ ಗೊಂದಲ ಈಗಲೂ ಮುಂದುವರಿದಿದೆ.

Advertisement

ಕೋವಿಡ್‌ ಸಂದರ್ಭ ಮಾತೃಪೂರ್ಣ ಯೋಜನೆಯಡಿ ನೀಡುವ ಆಹಾರ ಸಾಮಗ್ರಿಯನ್ನು ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ಅನಂತರ ಆದೇಶವನ್ನು ಹಿಂಪಡೆದು ಅಂಗನವಾಡಿಗೆ ಬಂದು ಮಧ್ಯಾಹ್ನದ ಊಟ ಮಾಡಿ ಹೋಗಬೇಕು ಎಂಬ ಸೂಚನೆ ನೀಡಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಉಡುಪಿ, ದ.ಕ. ಹಾಗೂ ಕೊಡಗು ಸಹಿತ 6 ಜಿಲ್ಲೆಗಳಿಗೆ ಮಳೆಗಾಲ ಮುಗಿಯುವ ವರೆಗೂ ಆಹಾರ ಸಾಮಗ್ರಿಯನ್ನು ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಮಳೆಗಾಲ ಮುಗಿಯುವ ವರೆಗೆ ಎಂದು ಸೂಚನೆ ನೀಡಲಾಗಿದೆಯೇ ವಿನಾ ಯಾವ ತಿಂಗಳ ವರೆಗೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಇಲಾಖೆಯ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯಡಿ ನೀಡುವ ಆಹಾರ ಸಾಮಗ್ರಿಯನ್ನು ಮಳೆ ನಿಲ್ಲುವ ವರೆಗೂ ಮನೆಗೆ ಕೊಂಡೊಯ್ಯಲು ನೀಡಿರುವ ಅವಕಾಶವನ್ನು ಇನ್ನಷ್ಟು ತಿಂಗಳು ವಿಸ್ತರಣೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ತಿಂಗಳಿಗೆ ಎರಡು ಅಥವಾ ಮೂರು ಬಾರಿ
ಈ ಮೊದಲು ಪ್ರತೀ ತಿಂಗಳ ಆರಂಭದಲ್ಲಿ ಅಥವಾ ಅಂಗನವಾಡಿಗೆ ಆಹಾರ ಸಾಮಗ್ರಿ ಪೂರೈಕೆಯಾದ ದಿನದ ಅನಂತರದಲ್ಲಿ ಹಂಚಿಕೆ ಮಾಡಲಾಗುತ್ತಿತ್ತು. ಅಂದರೆ ತಿಂಗಳಿಗೆ ಒಂದು ಬಾರಿ ಹಂಚಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಈಗ ಅದೇ ಆಹಾರ ಸಾಮಗ್ರಿಯನ್ನು ವಾರಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ನೀಡಬೇಕು ಎಂಬ ಸೂಚನೆ ಇಲಾಖೆಯಿಂದ ಬಂದಿದೆ. ಹೀಗಾಗಿ ತಿಂಗಳಿಗೆ ಕೊಡಲಾಗುವ ಆಹಾರ ಸಾಮಗ್ರಿಯನ್ನು ವಿಭಜಿಸಿ ವಾರಕ್ಕೊಮ್ಮೆ ನೀಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಹಾರ ಸಾಮಗ್ರಿ ವಿತರಣೆ
ಗರ್ಭಿಣಿಯರಿಗೆ ಗರ್ಭ ಧರಿಸಿರುವುದು ಖಚಿತಪಟ್ಟ ದಿನದಿಂದ ಹೆರಿಗೆಯಾಗುವವರೆಗೆ ಮತ್ತು ಬಾಣಂತಿಯರಿಗೆ ಹೆರಿಗೆಯ ದಿನದಿಂದ ಮುಂದಿನ ಆರು ತಿಂಗಳ ವರೆಗೆ ಮಾತೃಪೂರ್ಣ ಯೋಜನೆಯಡಿ ಆಹಾರ ಸಾಮಗ್ರಿ ನೀಡಲಾಗುತ್ತದೆ. ಅಕ್ಕಿ, ಹಾಲಿನ ಪುಡಿ, ಮೊಟ್ಟೆ (ಮೊಟ್ಟೆ ತಿನ್ನದವರಿಗೆ ಹೆಸರು ಬೇಳೆ) ತೊಗರಿ ಬೇಳೆ, ನೆಲಕಡಲೆ ಚಿಕ್ಕಿ, ಖಾರದ ಪುಡಿ ಇತ್ಯಾದಿ ನೀಡಲಾಗುತ್ತದೆ. ಕೆಲವು ಅಂಗನವಾಡಿಗಳಲ್ಲಿ ಆಹಾರ ಸಮಾಗ್ರಿ ವಿತರಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಇದೆ.

ಮೊಟ್ಟೆ ಪೂರೈಕೆಯೇ ಕಗ್ಗಂಟು
ತಿಂಗಳಿಗೆ ಕನಿಷ್ಠ 25 ಮೊಟ್ಟೆ ನೀಡಬೇಕು. ಆದರೆ ಮೊಟ್ಟೆಯ ದರ ಸದಾ ಏರಿಳಿತ ಆಗುತ್ತಿರುವುದರಿಂದ 18ರಿಂದ 20 ಮೊಟ್ಟೆಗಳನ್ನು ನೀಡಲಾಗುತ್ತಿದೆ. ಮೊಟ್ಟೆ ಪೂರೈಕೆಗೆ ಇ- ಟೆಂಡರ್‌ ಕರೆಯಲು ಸರಕಾರ ನಿರ್ದೇಶನ ನೀಡಿದೆ. ಇ-ಟೆಂಡರ್‌ ಕೂಡ ಕರೆಯಲಾಗಿದೆ. ಆದರೆ ಸರಕಾರ ನಿಗದಿಪಡಿಸಿರುವ ದರಕ್ಕೆ ಮೊಟ್ಟೆ ಪೂರೈಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಅಂಗನವಾಡಿ ಮೇಲ್ವಿಚಾರಕಿಯೇ ಸದ್ಯ ಸ್ಥಳೀಯ ಅಂಗಡಿ ಅಥವಾ ಸ್ಥಳೀಯ ಕೋಳಿ ಫಾರಂಗಳಿಂದ ಮೊಟ್ಟೆ ಖರೀದಿ ಮಾಡುತ್ತಿದ್ದಾರೆ. ಮೊಟ್ಟೆ ಪೂರೈಕೆಯೇ ಸವಾಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next