ಎಚ್.ಡಿ.ಕೋಟೆ: ಪಟ್ಟಣದ ಸಾರ್ವಜನಿಕಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಕಾಲದಲ್ಲಿ ಸುಲಲಿತವಾಗಿ ಹೆರಿಗೆ ಮಾಡಿಸುವ ಮೂಲಕ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಖಾಸಗಿ ಆಸ್ಪತ್ರೆ ಕೈಚೆಲ್ಲಿದಾಗ ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಶ್ರೀನಿವಾಸ್ ಮತ್ತು ತಂಡದವರು ಸೋಮವಾರ ತಡರಾತ್ರಿ ಸಕಾಲದಲ್ಲಿ ಸಹಜ(ನಾರ್ಮಲ್) ಹೆರಿಗೆ ಮಾಡಿಸಿ ಆಕೆ ಪ್ರಾಣ ಉಳಿಸಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ.ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಸಮೀಪದ ಹುಣಸೇಕುಪ್ಪೆ ಗ್ರಾಮದ ವರಲಕ್ಷ್ಮಿ 2ನೇಮಗುವಿಗೆ ಗರ್ಭಿಣಿಯಾಗಿದ್ದು, ಗರ್ಭಧರಿಸಿದಾಗಿನಿಂದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿಕೊಳ್ಳುತ್ತಿದ್ದರು.
ತುಂಬು ಗರ್ಭಿಣಿಯಾದ ವರಲಕ್ಷ್ಮಿ ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದಾಗ ಆಕೆಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ನಿಯಮಾವಳಿಯಂತೆ ಕೊರೊನಾ ಸೋಂಕಿತ ಗರ್ಭಿಣಿಯರು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕಿದೆ. ಈ ಪ್ರಕಾರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ಶಿಫಾರಸು ಮಾಡಿದ್ದರು.ಅದರಂತೆಯೇ ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತೆಗೆ ಆಗಮಿಸಿದ ಮಹಿಳೆ ಮತ್ತು ಕುಟುಂಬದ ಸದಸ್ಯರು ಜಿಲ್ಲಾ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ವಾಹನಕ್ಕಾಗಿ ಮೈಸೂರಿನ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು,ರಾಜಕೀಯ ಮುಖಂಡರಿಂದ ಶಿಫಾರಸು ಮಾಡಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತವೈದ್ಯ ಡಾ| ಶ್ರೀನಿವಾಸ್ ಮತ್ತು ಸಿಬ್ಬಂದಿ, ಸೋಮವಾರ ರಾತ್ರಿ 3ಗಂಟೆ ಸಮಯದಲ್ಲಿ ಆಸ್ಪತ್ರೆ ಹೊರಗಿದ್ದ ಗರ್ಭಿಣಿಯನ್ನು ತಪಾಸಣೆ ನಡೆಸಿದಾಗ, ಕೆಲವೇ ಕ್ಷಣದಲ್ಲಿ ಆಕೆಗೆ ಹೆರಿಗೆಯಾಗುವ ಸಾಧ್ಯತೆಯನ್ನು ಗಮನಿಸಿದ್ದಾರೆ. ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಬೇಕೆಂಬ ನಿಯಮ ಇದೆಯಾದರೂ ಸುಮಾರು 20ನಿಮಿಷದಲ್ಲೇ ಹೆರಿಗೆಯಾಗುವುದನ್ನು ಅರಿತ ಡಾ|ಶ್ರೀನಿವಾಸ್ ಅವರು ಆಸ್ಪತ್ರೆ ಸಿಬ್ಬಂದಿಗಳೊಡಗೂಡಿಪಿಪಿಇ ಕಿಟ್ ಧರಿಸಿ ಸುಲಲಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಣ್ಣು ಮಗುಜನಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಸೋಂಕಿನ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿರುವ ಡಾ.ಶ್ರೀನಿವಾಸ್ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ, ಮಗು ಸುರಕ್ಷಿತವಾಗಿದ್ದು, ಹೆರಿಗೆಯಾದ ಮರುದಿನ ತಾಯಿ ಮಗುವನ್ನು ಆಸ್ಪತ್ರೆಯಲ್ಲಿ ಸೋಂಕಿತರಿಗಾಗಿ ಆಯೋಜಿಸಿದ್ದ ಕೊರೊನಾ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸ ಲಾಗಿದೆ. ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಜಗದೀಶ್, ಕೋಮಲ, ಸೌಮ್ಯಾ ಸಹಕಾರಿಯಾಗಿದ್ದರು.
ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲೇ ಹೆರಿಗೆ ಮಾಡಿಸಬೇಕೆಂಬ ನಿಯಮ ಇದೆಯಾದರೂ ಅನಿವಾರ್ಯಸಂದರ್ಭದಲ್ಲಿ ಎಚ್.ಡಿ.ಕೋಟೆಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮಾಡಿಸಲಾಗಿದೆ. ಮೈಸೂರು ಜಿಲ್ಲೆಯಲ್ಲೇ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿರುವುದು ಪ್ರಥಮ ತಾಲೂಕು ಎಚ್.ಡಿ.ಕೋಟೆಯಾಗಿದೆ.
- ಡಾ| ಭಾಸ್ಕರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
ಎಚ್.ಬಿ.ಬಸವರಾಜು