ಲಾಸ್ಟ್‌ಬಸ್ ನಂತರ ನಿರ್ದೇಶಕ ಅರವಿಂದ್ ಮತ್ಯಾವ ಚಿತ್ರಕ್ಕೆ ಕೈ ಹಾಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅವರೀಗ “ಮಟಾಶ್’ ಅಂತ ಹೇಳತೊಡಗಿದ್ದಾರೆ! ಅಂದರೆ, ಈ ಶೀರ್ಷಿಕೆ ಇಟ್ಟುಕೊಂಡು ಬಹುತೇಕ ಹೊಸಬರ ಜತೆ ಸಿನಿಮಾ ಮಾಡೋಕೆ ಹೊರಟಿದ್ದಾರೆ ಅರವಿಂದ್. ಎಲ್ಲಾ ಸರಿ, ಈ “ಮಟಾಶ್’ ಅಂದರೇನು? ವರ್ಷದ ಹಿಂದೆ ಅಪನಗಧೀಕರಣ ಆಗಿದ್ದರ ಹಿಂದಿನ ಕಥೆಯೇ ಈ “ಮಟಾಶ್’ ಹಿನ್ನೆಲೆ ಎನ್ನುತ್ತಾರೆ ಅರವಿಂದ್.
“ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇರಲಿವೆ. “ಲಾಸ್ಟ್ ಬಸ್’ನಲ್ಲಿ ನಟಿಸಿದ್ದ ಸಮರ್ಥ್ ನರಸಿಂಹರಾಜು, ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದಿರುವ ಯುವ ಪ್ರತಿಭೆ ಗಣೇಶ್, ವಿ.ಮನೋಹರ್, ರಾಘವೇಂದ್ರ ರಾಮಕೊಪ್ಪ , ಅಮೋಘ… ಸೇರಿದಂತೆ ಇನ್ನಷ್ಟು ಹೊಸ ಮುಖಗಳು ಇಲ್ಲಿ ಕಾಣಿಸಿಕೊಳ್ಳಲಿವೆ.
ಇದೊಂದು ಕಾಮಿಕಲ್ ಥ್ರಿಲ್ಲರ್. ಅಪನಗಧೀಕರಣ ನಂತರ ಆದಂತಹ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಸಿನಿಮಾ ಇದು. ಆ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅನುಕೂಲಕ್ಕೆ ಏನೆಲ್ಲಾ ಮಾಡಿದರು. ಯಾವುದನ್ನೆಲ್ಲಾ ಬಳಸಿಕೊಂಡರು ಎಂಬುದನ್ನು ಒಂದು ಯೂತ್ಸ್ಫುಲ್ ಸ್ಟೋರಿ ಮೂಲಕ ಹೇಳಹೊರಟಿದ್ದೇನೆ. ಒಟ್ಟಾರೆ, ಅಪನನಗಧೀಕರಣ ವೇಳೆ ಜನರು ಹೇಗೆಲ್ಲಾ ಪ್ರತಿಕ್ರಿಯಿಸಿದರು ಎಂಬುದು ಈ ಚಿತ್ರದ ಸಾರಾಂಶ’ ಎಂದು ವಿವರ ಕೊಡುತ್ತಾರೆ ಆನಂದ್.
ಇಲ್ಲಿ ಚಿತ್ರಕ್ಕೆ “ಮಟಾಶ್’ ಅಂತಾನೇ ಯಾಕೆ ನಾಮಕರಣ ಮಾಡಲಾಗಿದೆ ಎಂಬ ಪ್ರಶ್ನೆಗೆ, “ಎಲ್ಲವೂ ಮುಗಿದು ಹೋಯ್ತು’ ಅನ್ನುವ ಬದಲು “ಮಟಾಶ್’ ಎನ್ನಲಾಗಿದೆ. ಒಂದು ಸಾವಿರದ ನೂರಾರು ನೋಟುಗಳ ಕಥೆ ಮುಗಿದಾಗ, ಎಲ್ಲಾ ಮಟಾಶ್ ಅಂತಾರೆ. ಹಾಗೆಯೇ, ಕೋಟ್ಯಾಂತರ ರುಪಾಯಿ ಕಳಕೊಂಡವರು ಕೂಡ ಅದೇ ಪದ ಬಳಕೆ ಮಾಡ್ತಾರೆ. ಕಥೆಯ ಸಾರಾಂಶ ಕೂಡ ಅದೇ ಆಗಿದ್ದರಿಂದ ಆ ಶೀರ್ಷಿಕೆ ಇಡಲಾಗಿದೆ ಎಂಬುದು ಅರವಿಂದ್ ಮಾತು.
ಈ ಚಿತ್ರಕ್ಕೆ ನವೆಂಬರ್ 29 ರಂದು ಮುಹೂರ್ತ ನೆರವೇರಲಿದೆ. ಬೆಂಗಳೂರು, ಸಕಲೇಶಪುರ, ಬಿಜಾಪುರ, ಮೈಸೂರು ಸ್ಥಳಗಳಲ್ಲಿ ಒಂದೇ ಹಂತದಲ್ಲಿ ಸುಮಾರು 40 ದಿನ ಚಿತ್ರೀಕರಣ ನಡೆಯಲಿದೆ. ಸತೀಶ್ ಪಾಟಕ್ ಹಾಗು ಗಿರೀಶ್ ಪಾಟೀಲ್ ಈ ಚಿತ್ರದ ನಿರ್ಮಾಪಕರು. ಅವಿನಾಶ್ ಇಲ್ಲಿ ಕಲಾನಿರ್ದೇಶನ ಮಾಡುವುದರ ಜತೆಗೆ ಪ್ರೊಡಕ್ಷನ್ ಡಿಸೈನ್ ಮಾಡುತ್ತಿದ್ದಾರೆ. ನಿರ್ದೇಶಕರೇ ಇಲ್ಲಿ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದು, ರಾಮಿ ಅಬ್ರಹಾಂ ಕ್ಯಾಮೆರಾ ಹಿಡಿಯುತ್ತಿದ್ದಾರೆ.