ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರನ್ನು ಜಿಲ್ಲಾ ಅಧ್ಯಕ್ಷರು, ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕಡೆಗಣಿಸುತ್ತಿರುವುದು ವಿರೋಧಿಸಿ ಮಾ.21ರಂದು ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಶ್ರೀಧರ್ ಪಾಟೀಲ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸ್ವಯಂಘೋಷಿತ ನಾಯಕರಾಗಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಅವರದ್ದೇ ಆದ 40 ಸಾವಿರ ಸಮಾಜ ಬಾಂಧವರಿದ್ದಾರೆ. ಅವರ ಮತಗಳನ್ನೇ ಕೊಡಿಸಿದರೆ ಜೆಡಿಎಸ್ ಅಭ್ಯರ್ಥಿಗಳಿಗೆ ಹತ್ತಾರು ಸಾವಿರ ಮತಗಳು ಬರುತ್ತಿದ್ದವು. ಆದರೆ, ಅದನ್ನು ಎಂದಿಗೂ ಮಾಡಿಲ್ಲ. ಹಿಂದಿನಿಂದಲೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಮಾ.21ರಂದು ನಿಜವಾದ ಚಿತ್ರಣ ದೊರೆಯಲಿದೆ. ಸ್ಫೋಟಕ ಸುದ್ದಿ ನೀಡಲಾಗುವುದು ಎಂದರು.
ಪಕ್ಷದ ಸದಸ್ಯತ್ವ ನೋಂದಣಿ ಒಳಗೊಂಡಂತೆ ಯಾವುದೇ ಕಾರ್ಯಕ್ರಮಗಳಿಗೆ ಉತ್ತರ ಕ್ಷೇತ್ರದ ಕಾರ್ಯಕರ್ತರನ್ನು ಕರೆಯುವುದೇ ಇಲ್ಲ. ಅವರ ಮನಸ್ಸಿಗೆ ಬಂದಂತೆ ಕಾರ್ಯಕ್ರಮ ನಡೆಸುತ್ತಾರೆ. ಜಿಲ್ಲಾ ಅಧ್ಯಕ್ಷರು ಶಿವಶಂಕರ್ ಅವರ ಕೈಗೊಂಬೆಯಂತೆ ಇದ್ದಾರೆ. ವೇದಿಕೆಯ ಮೇಲೆ 14 ಜನರು, ಕೆಳಗೆ 9 ಜನರ ಕೂರಿಸಿ ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರೂ ಪಕ್ಷದ ಸಂಘಟನೆಗೆ ಗಮನ ನೀಡುತ್ತಿಲ್ಲ. ಈ ಎಲ್ಲದರಿಂದ ಬೇಸತ್ತು ಮಾ.21ರಂದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ. ಅಂದೇ ಒಳ್ಳೆಯ ಸುದ್ದಿ ನೀಡಲಾಗುವುದು ಎಂದು ತಿಳಿಸಿದರು.
ಪಕ್ಷದ ಮುಖಂಡ ಲಕ್ಷ್ಮಣರಾಜ್ ಮಾತನಾಡಿ, ಕಳೆದ 10-15 ವರ್ಷದಿಂದ ಜೆಡಿಎಸ್‌ನಲ್ಲಿದ್ದರೂ ಜಿಲ್ಲಾ ಅಧ್ಯಕ್ಷರು ಒಳಗೊಂಡಂತೆ ಯಾರೂ ಸಹ ನಮಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ ಅಧ್ಯಕ್ಷರು ಒಮ್ಮೆಯೂ ನಮ್ಮ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿಲ್ಲ. ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ನನ್ನ ಹರಿಹರ ಕ್ಷೇತ್ರ ನೋಡಿಕೊಂಡರೇ ಸಾಕು ಎನ್ನುತ್ತಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ವಿಷಯವನ್ನ ಗಮನಕ್ಕೆ ತರಲಾಗಿದೆ. ಮಾ.21ರ ವರೆಗೆ ಕಾಯುತ್ತೇವೆ. ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಆನಂತರ ಮುಂದಿನ ಹೆಜ್ಜೆಯ ಬಗ್ಗೆ ಗಮನ ನೀಡುತ್ತೇವೆ ಎಂದು ತಿಳಿಸಿದರು. ಪಕ್ಷದ ಚನ್ನಪ್ಪ, ವಿಶ್ವನಾಥ್, ದೇವರಾಜ್, ರಂಗಪ್ಪ, ಬಸವರಾಜ್, ಮಹೇಶ್ ಭಾರತಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.