Advertisement

ದೆಹಲಿಯಲ್ಲಿ ರೈತರ ಬೃಹತ್‌ ಪ್ರತಿಭಟನೆ

06:00 AM Nov 30, 2018 | Team Udayavani |

ನವದೆಹಲಿ: ಸಾಲ ಮನ್ನಾ, ಬೆಳೆಗಳಿಗೆ ಲಾಭಕರ ಬೆಂಬಲ ಬೆಲೆ, 5,000 ರೂ.ಗಳ ಮಾಸಾಶನ ಸೇರಿದಂತೆ ರೈತರ ದೀರ್ಘ‌ಕಾಲದ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ನಾನಾ ರಾಜ್ಯಗಳಿಂದ ದೆಹಲಿಗೆ ಗುರುವಾರ ಆಗಮಿಸಿರುವ ಸಾವಿರಾರು ರೈತರು ಬೃಹತ್‌ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

Advertisement

ಆಲ್‌ ಇಂಡಿಯಾ ಕಿಸಾನ್‌ ಸಂಘರ್ಷ ಕೋ-ಆರ್ಡಿನೇಷನ್‌ ಕಮಿಟಿ (ಎಐಕೆಎಸ್‌ಸಿಸಿ) ಅಡಿಯಲ್ಲಿ ಸಕ್ರಿಯವಾಗಿರುವ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಗಳಿಗೆ ಸೇರಿದ 200ಕ್ಕೂ ಹೆಚ್ಚು ರೈತ ಸಂಘಗಳ ರೈತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಗುರುವಾರ ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆದಿದ್ದು, ಶುಕ್ರವಾರ ಪಾರ್ಲಿಮೆಂಟ್‌ ಸ್ಟ್ರೀಟ್‌ನತ್ತ ರೈತರ ಜಾಥಾ ತೆರಳಲಿದೆ.

ಹರ್ಯಾಣ, ಚಂಡೀಗಢದ ರೈತರು ಬೆಳಗ್ಗೆ 10:30ರ ಸುಮಾರಿಗೆ ದೆಹಲಿಗೆ ಬಂದಿಳಿದಿದ್ದರು. ಆದರೆ, ದೂರದ ರಾಜ್ಯಗಳಿಂದ ರೈಲುಗಳಲ್ಲಿ ಸುಮಾರು 36 ಗಂಟೆಗಳಿಗೂ ಅಧಿಕ ಕಾಲದ ಪ್ರಯಾಣ ಮಾಡಿ ಆಗಮಿಸಿದ್ದರು. ಕೈಯ್ಯಲ್ಲಿ ಕೆಂಪು ಧ್ವಜ ಹಿಡಿದ ಇವರೆಲ್ಲರೂ “ಅಯೋಧ್ಯೆ ಬೇಡ, ಸಾಲ ಮನ್ನಾ ಬೇಕು’ ಎಂಬ ಘೋಷಣೆ ಕೂಗುತ್ತಿದ್ದರು.

ಬೆತ್ತಲೆ ಪ್ರತಿಭಟನೆ; ಎಚ್ಚರಿಕೆ:
ಎರಡು ದಿನಗಳ ಕಿಸಾನ್‌ ರ್ಯಾಲಿಗಾಗಿ ತಮಿಳುನಾಡಿನ ರೈತರೊಂದಿಗೆ ಆಗಮಿಸಿರುವ “ನ್ಯಾಷನಲ್‌ ಸೌತ್‌ ಇಂಡಿಯನ್‌ ರಿವರ್‌ ಇಂಟರ್‌ಲಿಂಕಿಂಗ್‌ ಅಗ್ರಿಕಲ್ಟರಿಸ್ಟ್ಸ್ ಅಸೋಸಿಯೇಷನ್‌’ನ ಸುಮಾರು 1,200 ಸದಸ್ಯರು, ಶುಕ್ರವಾರ ತಮಗೆ ಸಂಸತ್‌ ಭವನದೊಳಗೆ ಪ್ರವೇಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರವೇಶ ನಿರಾಕರಿಸಿದಲ್ಲಿ ಸಂಸತ್‌ ಭವನದ ಮುಂದೆ ಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇತ್ತೀಚೆಗೆ, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ತಮ್ಮ ಸಂಘಟನೆಯ ಇಬ್ಬರು ರೈತರ ತಲೆಬುರುಡೆಗಳನ್ನೂ ತಮ್ಮೊಂದಿಗೆ ಈ ರೈತರು ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next