ಮುಂಬೈ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ಭವಿಷ್ಯ ಹೊರಬಿದ್ದ ಬೆನ್ನಲ್ಲೇ ಸೋಮವಾರ (ಜೂನ್ 03) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆ ಕಂಡಿದೆ.
ಕಳೆದ ನಾಲ್ಕು ವರ್ಷಗಳ ವಹಿವಾಟಿನಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಏರಿಕೆ ಕಂಡಿರುವುದು ಇದೇ ಮೊದಲ ಬಾರಿಯಾಗಿದೆ. ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬರೋಬ್ಬರಿ 2,500 ಅಂಕ ಜಿಗಿತ ಕಂಡಿದೆ.
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಇಂದು ದಾಖಲೆಯ ಏರಿಕೆ ಕಂಡಿದೆ. ಸೋಮವಾರ ಬೆಳಗ್ಗೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 2,621.98 ಅಂಕ ಏರಿಕೆಯಾಗಿದ್ದು, 76,583.29 ಅಂಕಗಳ ಗಡಿ ತಲುಪಿ ದಾಖಲೆ ಬರೆದಿದೆ.
ನಿಫ್ಟಿ ಕೂಡಾ 800 ಅಂಕ ಏರಿಕೆಯೊಂದಿಗೆ 23,227.90 ಅಂಕಗಳ ಮಟ್ಟ ತಲುಪಿದೆ. ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕೇರಳ ಮತ್ತು ತಮಿಳುನಾಡಿನಲ್ಲೂ ಖಾತೆ ತೆರೆಯುವ ಮೂಲಕ ದಕ್ಷಿಣದಲ್ಲಿ ಛಾಪು ಮೂಡಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿತ್ತು.