Advertisement

ಅನುಮೋದನೆ ಹಿಂದೆ ಬೃಹತ್‌ ಭ್ರಷ್ಟಾಚಾರ

12:34 AM Apr 29, 2019 | Lakshmi GovindaRaju |

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಬಿಎಂಪಿಯಲ್ಲಿ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ 4261 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆದ ಆಡಳಿತ ಪಕ್ಷದ ಕ್ರಮ ವಿವಾದದ ಸ್ವರೂಪ ಪಡೆದಿದೆ. ಈ ಕುರಿತಂತೆ ಚುನಾವಣಾ ಆಯೋಗದ ಮೊರೆ ಹೋಗಲು ಬಿಜೆಪಿ ತೀರ್ಮಾನಿಸಿದೆ.

Advertisement

ಇದೊಂದು ಬೃಹತ್‌ ಭ್ರಷ್ಟಾಚಾರವಾಗಿದ್ದು, ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರನ್ನು ಸೋಮವಾರ ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಡಿಯುವ ನೀರು ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ಅನುಮತಿ ನೀಡದಂತೆ ಕೋರಲಾಗುವುದು ಎಂದು ಹೇಳಿದ್ದಾರೆ.

ಬಿಬಿಎಂಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಮತ್ತು ಎಸ್‌ಐಪಿ ಯೋಜನೆಯಡಿ 4261 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಸಂಸ್ಥೆಗೆ ನೀಡಲು ನಿರ್ಧರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್‌ ಇಲ್ಲದೆ ಕಾಮಗಾರಿ ನಡೆಸುವುದು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಹೀಗಾಗಿ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹಾಗೂ ನಗರ ಘಟಕದ ಅಧ್ಯಕ್ಷ ಸದಾಶಿವ ಅವರನ್ನೊಳಗೊಂಡ ನಿಯೋಗ, ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಮೇ 17ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುರಿಂದ ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Advertisement

ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ಕುಮಾರ್‌ ಮೀನಾ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನೀತಿ ನಿರೂಪಣೆಗೆ ಸಂಬಂಧಿಸಿದ ಯಾವುದೇ ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಆದರೆ, ಅವರ ಸಲಹೆಯನ್ನು ಧಿಕ್ಕರಿಸಿ ಕಾಮಗಾರಿಗಳನ್ನು ಆರಂಭಿಸುವ ನಿರ್ಣಯ ಕೈಗೊಂಡಿರುವುದರ ಹಿಂದೆ ಭ್ರಷ್ಟಾಚಾರದ ಅನುಮಾನ ಮೂಡಿದೆ ಎಂದು ಲಿಂಬಾವಳಿ ಆರೋಪಿಸಿದ್ದಾರೆ.

4261 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಿರುವ ತೀರ್ಮಾನದ ಹಿಂದೆ ಸ್ವ ಹಿತಾಸಕ್ತಿ ಅಡಗಿದೆ. ಮುತದಾನಕ್ಕೆ ಮುನ್ನ ಕೆಲವು ಪ್ರಭಾವಿ ಗುತ್ತಿಗೆದಾರರಿಂದ ಚುನಾವಣೆಗಾಗಿ ಲಂಚ ಪಡೆದಿರುವ ಆಡಳಿತ ಪಕ್ಷದ ಮುಖಂಡರು, ಗುತ್ತಿಗೆ ಕಾಮಗಾರಿ ನೀಡುವ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ. ಈ ಕುರಿತು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ರಾಜಕಾಲುವೆ ಹೂಳೆತ್ತುವ ಕಾಮಗಾರಿಯನ್ನು ತುರ್ತಾಗಿ ನಡೆಸಬೇಕಿರುವುದರಿಂದ ಟೆಂಡರ್‌ ಕರೆಯಲು ತೀರ್ಮಾನಿಸಿದ್ದೇವೆ ಎಂದು ಮೇಯರ್‌ ಹೇಳಿರುವುದು ನೇರವಾಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗಿದೆ.

ಯಾರ ಹಿತ ಕಾಪಾಡಲು ಸರ್ಕಾರ ಮತ್ತು ಬಿಬಿಎಂಪಿ ಹೊರಟಿದೆ ಎಂದು ಪ್ರಶ್ನಿಸುತ್ತೇವೆ. ಪಾಲಿಕೆ ಆತುರಾತುರವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದು ಆಯೋಗ ನಿರ್ದೇಶನ ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ವೆಚ್ಚ ಹೊಂದಿಸುವ ಹುನ್ನಾರ – ಶೆಟ್ಟರ್‌: ನವ ಬೆಂಗಳೂರು ಯೋಜನೆಯಡಿ ಟೆಂಡರ್‌ ಕರೆಯದೆ ಕಾಮಗಾರಿಯನ್ನು ಕೆಆರ್‌ಡಿಎಲ್‌ಗೆ ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಸುಮಾರು 4261 ಕೋಟಿ ರೂ. ವೆಚ್ಚದ ಯೋಜನೆಯನ್ನು ತರಾತುರಿಯಲ್ಲಿ ನೀಡುತ್ತಿರುವುದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್‌ ಕರೆಯದೆ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯನ್ನು ವಹಿಸುತ್ತಿರುವುದರ ಹಿಂದೆ ಅವ್ಯವಹಾರ ವಾಸನೆ ಕಂಡು ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಆಗಿರುವ ಖರ್ಚು ವೆಚ್ಚವನ್ನು ಸರಿದೂಗಿಸುವುದಕ್ಕಾಗಿ ಸರ್ಕಾರ ಟೆಂಡರ್‌ ಕರೆಯದೆ ಕೆಆರ್‌ಡಿಎಲ್‌ಗೆ ನೀಡಲಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು.

ಯೋಜನೆ ಕುರಿತು ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರ ವಿರೋಧ ಪಕ್ಷದ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಕೆಆರ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ವೆಂಕಟೇಶ ಎಂಬುವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯದೆ ಕೆಆರ್‌ಡಿಎಲ್‌ಗೆ ಯೋಜನೆ ವಹಿಸಲಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯಲ್ಲಿ ಒಂದಿಷ್ಟು ಹಣ ಲಪಟಾಯಿಸುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದೆ ಎಂದರು.

ಮೈತ್ರಿ ಸರ್ಕಾರದ ಈ ತರಾತುರಿ ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ಗುತ್ತಿಗೆದಾರರಿಂದ ಪಡೆದ ಹಣಕ್ಕೆ ಋಣ ತೀರಿಸುವುದಾಗಿದೆ. ಅಲ್ಲದೆ ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಭಯ ಕಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕೆಆರ್‌ಡಿಎಲ್‌ಗೆ ವಹಿಸಲು ಹುನ್ನಾರ ನಡೆಸಿದೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next