Advertisement

ಮುಸ್ಲಿಮರಿಂದ ಉತ್ತಮ ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ

07:05 AM Jun 06, 2019 | Lakshmi GovindaRaj |

ಕೋಲಾರ: ಪವಿತ್ರ ರಂಜಾನ್‌ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಮುಸ್ಲಿಮರು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಿದರು. ನಗರದ ಈದ್ಗಾ ಮೈದಾನ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿಯ ದರ್ಗಾ ಸಮೀಪ ಆಯೋಜಿಸಿದ್ದ ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

Advertisement

ಹಬ್ಬದ ಹಿನ್ನೆಲೆಯಲ್ಲಿ ವಾರದಿಂದಲೂ ಸಿದ್ಧತೆಗಳು ಜೋರಾಗಿ ನಡೆದಿದ್ದವು. ದರ್ಗಾಗಳಿಗೆ ದೀಪಾಲಂಕಾರ ಮಾಡಲಾಗಿತ್ತು, ಹೊಸ ಬಟ್ಟೆ ತೊಟ್ಟು ಕುಟುಂಬ ಸಮೇತರಾಗಿ ಪ್ರಾರ್ಥನೆಗಳಿಗೆ ಆಗಮಿಸಿದ ಮುಸ್ಲಿಂ ಸಮುದಾಯದವರು, ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದರು.

1 ಗಂಟೆಗೂ ಹೆಚ್ಚು ಕಾಲ ನಡೆದ ಪ್ರಾರ್ಥನೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳಲಾಯಿತು. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯಗಳನ್ನು ಹೇಳಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಅಂತೆಯೇ ಬಡವರಿಗೆ ಹಣ ಸೇರಿ ಇನ್ನಿತರೆ ವಸ್ತುಗಳನ್ನು ದಾನವಾಗಿ ನೀಡಲಾಯಿತು.

ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿವರ್ಷದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದಾಗಿ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕ್ಲಾಕ್‌ ಟವರ್‌ನಿಂದ ಬೈಪಾಸ್‌ವರೆಗಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ, ಟೇಕಲ್‌ ಮಾರ್ಗದಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಶಾಂತಿಯುತವಾಗಿ ಹಬ್ಬ ಆಚರಣೆಗೊಂಡಿತು.

ಪ್ರಾರ್ಥನೆಯಲ್ಲಿ ಹಾಲಿ, ಮಾಜಿ ಸಂಸದರು: ರಂಜಾನ್‌ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಹಾಲಿ ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಪಾಲ್ಗೊಂಡಿದ್ದರಾದರೂ ಪರಸ್ಪರ ಮುಖಾಮುಖೀಯಾಗಲಿಲ್ಲ. ಪ್ರಾರ್ಥನೆ ಆರಂಭಕ್ಕೂ ಮುನ್ನ ಆಗಮಿಸಿದ ಸಂಸದ ಎಸ್‌.ಮುನಿಸ್ವಾಮಿ ಕೆಲಕಾಲ ಪೆಂಡಾಲ್‌ ಕೆಳಗೆ ಕುಳಿತುಕೊಂಡರು.

Advertisement

ಪ್ರಾರ್ಥನೆ ಆರಂಭಗೊಳ್ಳುವ ಸಮಯಕ್ಕೆ ಬಂದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ನೇರವಾಗಿ ಪ್ರಾರ್ಥನೆಯತ್ತ ತೆರಳಿ, ಮುಂದಿನ ಸಾಲಿನಲ್ಲಿ ಕುಳಿತರು. ಹಿಂದೆಯೇ ಬಂದ ಎಸ್‌.ಮುನಿಸ್ವಾಮಿ ಮುಂದಿನ ಸಾಲಿನಲ್ಲಿ ಸ್ಥಳಾವಕಾವಿದ್ದರೂ ಹೋಗದೆ ಎರಡನೇ ಸಾಲಿನಲ್ಲಿ ಕುಳಿತುಕೊಂಡರು. ಮೊದಲಿಗೆ ಕೆ.ಎಚ್‌.ಮುನಿಯಪ್ಪ ಆನಂತರ ಎಸ್‌.ಮುನಿಸ್ವಾಮಿ ಹಬ್ಬದ ಶುಭಾಶಯಗಳನ್ನು ನೆರೆದಿದ್ದವರಿಗೆ ತಿಳಿಸಿದರು.

ಭಾಷಣ ಆರಂಭದ ವೇಳೆಯಲ್ಲಿ ಇಬ್ಬರೂ ಪರಸ್ಪರ ಹೆಸರುಗಳನ್ನು ಹೇಳಿಕೊಂಡರಾದರೂ ಮುಖಾಮುಖೀಯಾಗಲಿಲ್ಲ. ಪ್ರಾರ್ಥನೆ ಮುಗಿದ ಕೂಡಲೇ ತಮ್ಮ ಬೆಂಬಲಿಗರೊಂದಿಗೆ ಇಬ್ಬರೂ ವಾಪಸ್ಸಾದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ವಿಶ್ವದೆಲ್ಲೆಡೆ ಶಾಂತಿ ನೆಮ್ಮದಿ ನೆಲೆಸಬೇಕಾಗಿದ್ದು, ಅದಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಬೇಕು.

ಈದ್‌ ಜತೆಗೆ ಇಂದು ಪರಿಸರ ದಿನಾಚರಣೆಯನ್ನೂ ಆಚರಿಸುತ್ತಿದ್ದು, ಉತ್ತಮ ಗಾಳಿ, ಬೆಳಕು, ನೀರು ಸಿಗುವಂತಾಗಲು ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಪ್ರಾರ್ಥನೆಯಲ್ಲಿ ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಎಸ್ಪಿ ಡಾ.ರೋಹಿಣಿ ಕಟೋಜ್‌ ಸೆಫಟ್‌ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಮಾಜಿ ಸಚಿವ ನಿಸಾರ್‌ ಅಹಮದ್‌, ಅಂಜುಮಾನ್‌ ಅಧ್ಯಕ್ಷ ಜಮೀರ್‌ ಅಹಮದ್‌, ಕಾರ್ಯದರ್ಶಿ ಸೈಪುಲ್ಲಾ, ವಕ ಬೋರ್ಡ್‌ ಚೇರ್ಮನ್‌ ಇದಾಯತುಲ್ಲಾ ಷರೀಫ್‌, ಉಪಾಧ್ಯಕ್ಷ ಷರೀಫ್‌, ಬಿಜೆಪಿ ಆಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಜಮೀರ್‌ಖಾನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್‌ ಆಶೀಮ್‌, ಕಾಂಗ್ರೆಸ್‌ ಮುಖಂಡರಾದ ಪ್ರಸಾದ್‌ಬಾಬು, ಜಯದೇವ್‌, ಯಕ್ಬಾಲ್‌, ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ಹಾರೋಹಳ್ಳಿ ಎನ್‌.ಅನಂತರಾಜು ಮತ್ತಿತರರಿದ್ದರು.

ಮನೆ ಮಗನಾಗಿ ಸೇವೆ – ಮುನಿಸ್ವಾಮಿ: ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಎಸ್‌.ಮುನಿಸ್ವಾಮಿ, ನಿಮ್ಮ ಸೇವೆ ಮಾಡಲು ನನಗೆ ಅವಕಾಶವನ್ನು ಮಾಡಿಕೊಟ್ಟಿದ್ದು, ಮನೆ ಮಗನಾಗಿ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ತಂದೆ-ತಾಯಿಗೆ ಗೌರವ ನೀಡುವಂತೆಯೇ ದೇಶಕ್ಕೂ ನೀಡಬೇಕು, ನಾವೆಲ್ಲರೂ ಶಾಂತರೀತಿಯಲ್ಲಿದ್ದು, ದ್ವೇಷವಿಲ್ಲದ ಸಮಾಜವನ್ನು ಕಟ್ಟಲು ಮುಂದಾಗಬೇಕು. ನಮ್ಮಲ್ಲಿನ ಸಣ್ಣಸಣ್ಣ ಲೋಪಗಳನ್ನು ತಿದ್ದಿಕೊಳ್ಳಬೇಕು ಎಂದು ಮನವಿ ಮಾಡಿದರು.

ಉತ್ತಮ ಮಳೆ ಬೆಳೆಗೆ ಪ್ರಾರ್ಥನೆ – ಕೆಎಚ್‌ಎಂ: ಜಗತ್ತಿನಲ್ಲೇ ಅತಿದೊಡ್ಡ ಸಮುದಾಯ ಇಸ್ಲಾಂ ಆಗಿದ್ದು, ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ಎಲ್ಲೆಡೆ ಇಂದು ಅಲ್ಲಾಹುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಾವೆಲ್ಲರೂ ಭೇದಭಾವ ಮರೆತು ಭಾತೃತ್ವದಿಂದ ಭಾರತವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಅದಕ್ಕಾಗಿ ಹಬ್ಬ, ಉರುಸ್‌ಗಳಲ್ಲಿ ಪರಸ್ಪರ ನಾವಿಬ್ಬರೂ ಭಾಗವಹಿಸಿ ಆಚರಿಸಬೇಕು. ಅದಕ್ಕೆ ಅಲ್ಲಾ ದೇವರು ಶಕ್ತಿ ನೀಡಲಿ ಎಂದು ಆಶಿಸಿದರು. ಈದ್ಗಾ ಮೈದಾನದಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಬಕ್ರೀದ್‌ ಹಬ್ಬದ ಒಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕಿದ್ದು, ಬೇಕಾದ ಸಹಾಯವನ್ನು ತಾವು ನೀಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next