Advertisement

ಜ್ಞಾನವೃದ್ಧಿಗೆ  ಸಮೂಹ ಮಾಧ್ಯಮ

12:54 PM Dec 26, 2018 | |

ಟಿವಿ, ಮೊಬೈಲ್‌ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆತಂಕ ಬಹುತೇಕ ಹೆತ್ತವರು, ಶಿಕ್ಷಕರಲ್ಲಿದೆ. ಇದನ್ನು ಬಿಟ್ಟು ಅವರು ಅದನ್ನುಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಟಿವಿ, ರೇಡಿಯೋ ಮೂಲಕ ಪಠ್ಯಗಳ ಬೋಧನೆಯ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸ ಬಲ್ಲ ಕೆಲವೊಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದರೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುವುದರೊಂದಿಗೆ ಪರೀಕ್ಷೆ ತಯಾರಿಯೂ ಸುಲಭವಾಗುವುದು.

Advertisement

ಪುಸ್ತಕದಲ್ಲಿರುವ ವಿಷಯಗಳನ್ನು ಓದಿ, ಅಧ್ಯಾಪಕರು ತರಗತಿಯಲ್ಲಿ ಮಾಡಿದ ಪಾಠವನ್ನು ಕೇಳಿ ಪರೀಕ್ಷೆ ಬರೆಯುವ ಕಾಲ ಬದಲಾಗಿದೆ. ಮುಂದುವರಿದ ತಂತ್ರಜ್ಞಾನದ ಪರಿಣಾಮ ನೆಟ್‌ನಿಂದ ವಿಷಯಗಳನ್ನು ಆಯ್ದು ನೀವೇ ಮಾಹಿತಿ ಪಡೆದುಕೊಳ್ಳಿ ಎಂಬುದಾಗಿ ಅಧ್ಯಾಪಕರು ಕೈ ಚೆಲ್ಲಿ ಬಿಡುತ್ತಾರೆ. ಇದಕ್ಕೆ ವಿದ್ಯಾರ್ಥಿಗಳು ಕೂಡ ಒಗ್ಗಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳೇ ಹೆಚ್ಚು ಪ್ರಾಮುಖ್ಯ ಪಡೆದಿರುವ ಈ ಕಾಲಘಟ್ಟದಲ್ಲಿ ಅದರಿಂದ ಒಳಿತು ಹಾಗೂ ಕೆಡುಕುಗಳಾದ ಅನೇಕ ಉದಾಹರಣೆಗಳಿವೆ. ಆದರೆ ಅದನ್ನು ಪ್ರಬುದ್ಧತೆಯಿಂದ ಬಳಸುವ ಜವಾಬ್ದಾರಿ ಬಳಸುವವರ ಮೇಲಿದೆ. ಫೇಸ್‌ಬುಕ್‌, ಟ್ವಿಟರ್‌ ಸಹಿತ ಟಿವಿ, ರೇಡಿಯೋಗಳಲ್ಲೂ ಶೈಕ್ಷಣಿಕವಾಗಿ ಆಯಾಯ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದೆ. ಅದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು.

ಟಿವಿ ರೇಡಿಯೋಗಳ ಬಳಕೆ
ಮಕ್ಕಳು ಟಿವಿ ನೋಡುತ್ತಾರೆ ಎಂಬುದನ್ನು ಗಮನಿಸುವ ಹೆತ್ತವರು ಅವರು ಯಾವ ಕಾರ್ಯಕ್ರಮ ನೋಡುತ್ತಾರೆ. ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸುವುದಿಲ್ಲ. ಹೀಗಾಗಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಮನೆಯಲ್ಲಿ ಟಿವಿ ಇರಬೇಕು, ಮಕ್ಕಳಿಗೆ ಅದನ್ನು ನೋಡಲು ಬಿಡಬೇಕು. ಆದರೆ ಯಾವುದನ್ನು ನೋಡಬೇಕು ಎಂಬುದರ ವಿವೇಚನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಸಂಯಮ ಬೆಳೆಯುತ್ತದೆ. ಮೂರ್ಖರ ಪೆಟ್ಟಿಗೆ ಎಂದು ಕರೆಯುವ ಟಿವಿಯನ್ನು ಜಾಣತನದಿಂದ ಬಳಸಬೇಕು. ಟಿವಿಗಿಂತ ಮೊದಲೇ ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ನ ಗೀಳು ಹತ್ತಿಕೊಂಡರೆ ಮಕ್ಕಳಿಗೆ ಅನಾವಶ್ಯಕ ವಿಚಾರಗಳ ಪರಿಚಯವಾಗುತ್ತದೆ.

Advertisement

ಪರಿಣಾಮಕಾರಿ ಬಳಕೆ
ಟಿವಿ, ರೇಡಿಯೋಗಳಲ್ಲೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾಹಿತಿ ನೀಡುವ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವೊಂದು ಚಾನೆಲ್‌ ಗಳು  ಕಠಿಣವಾದ ವಿಷಯಗಳ ಕುರಿತು ತರಗತಿಯನ್ನೇ ನಡೆಸುತ್ತದೆ. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸುಲಭ ವಿಧಾನಗಳನ್ನು ಪರಿಚಯಿಸುತ್ತದೆ. ಡಿಸ್ಕವರಿ, ನ್ಯಾಶನಲ್‌ ಜಿಯೋಗ್ರಫಿ ಚಾನೆಲ್‌ಗ‌ಳ ಮೂಲಕ ಜೀವ ವೈವಿಧ್ಯಗಳ ಕುರಿತಾದ ಸಾಕಷ್ಟು ವಿಷಯಗಳನ್ನು ಅರಿಯಲು ಅವಕಾಶ ಇದೆ. ಇನ್ನೂ ಕೆಲವು ಚಾನೆಲ್‌ಗ‌ಳಲ್ಲಿ ಕ್ವಿಜ್‌ ಸ್ಪರ್ಧೆ, ವಿದ್ಯಾರ್ಥಿಗಳ ಪಠ್ಯೇತರ ಜ್ಞಾನವನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಇನ್ನೂ ರೇಡಿಯೋದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. ಉದಾಹರಣೆಗೆ ಮಂಗಳೂರು ಆಕಾಶವಾಣಿಯಲ್ಲಿ ರೇಡಿಯೋ ಪಾಠ ಆರಂಭಿಸಲಾಗಿದ್ದು, ಇದು ವಾರದಲ್ಲಿ ಮೂರು ದಿನ ಪ್ರಸಾರವಾಗಲಿದೆ. ದ್ವಿತೀಯ ಭಾಷೆ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ವಿಷಯದ ಪಾಠಗಳಲ್ಲಿ ಪರೀಕ್ಷಾ ದೃಷ್ಟಿಯಿಂದ  ಮುಖವಾದ ಅಂಶಗಳನ್ನು 21 ಅನುಭವಿ ವಿಷಯ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಬೋಧಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲಿ ಇದನ್ನು ಕೇಳುವ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಆದೇಶ ಕೂಡ ಮಾಡಲಾಗಿದೆ. ಸರಕಾರ, ಟಿವಿ ಚಾನೆಲ್‌ಗ‌ಳು ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ.

ಸಾಮಾನ್ಯ ಜ್ಞಾನ ಹೆಚ್ಚಳ
ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ದೊರೆಯುವ ವಿಚಾರಗಳನ್ನು ಮಾತ್ರ ತಿಳಿಸುವುದು ಶಿಕ್ಷಕರ ಕರ್ತವ್ಯವಲ್ಲ. ಪಠ್ಯೇತರ ವಿಷಯ ಹಾಗೂ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಟಿವಿ, ರೇಡಿಯೋ ಹಾಗೂ ಇನ್ನಿತರ ಮಾಧ್ಯಮಗಳ ಮಿತ ಬಳಕೆ ಅವಶ್ಯ. ಪಠ್ಯದಿಂದ ಹೊರಗಿನ ವಿಚಾರಗಳನ್ನು ತಿಳಿದುಕೊಳ್ಳಲು ಇದು ಸಹಕಾರಿ. ನ್ಯೂಸ್‌ ಚಾನೆಲ್‌ಗ‌ಳನ್ನು ನೋಡಿದರೆ ಜಗತ್ತಿನ ವಿವಿಧ ದೇಶಗಳ ಸ್ಥಿತಿ, ಆಡಳಿತ ಇತ್ಯಾದಿ, ವಿವಿಧ ಇಲಾಖೆಗಳು, ಹುದ್ದೆಗಳು ಬಗ್ಗೆ ಜ್ಞಾನ ದೊರೆಯುತ್ತದೆ. ಆದರೆ ಎಲ್ಲವೂ ಇತಿಮಿತಿಯಲ್ಲಿದ್ದರೆ ಉತ್ತಮ. 

ಪಠ್ಯೇತರ ಚಟುವಟಿಕೆಗೆ ಸಹಕಾರಿ
ಟಿವಿ ಹಾಗೂ ರೇಡಿಯೋಗಳಲ್ಲಿ ಬರುವ ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸುವುದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಕ್ವಿಜ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಶ್ಯವಿರುವ ಜ್ಞಾನ ಲಭಿಸುತ್ತದೆ. ಆದರೆ ಅದನ್ನು ಸರಿಯಾಗಿ ಬಳಸುವಂತೆ ನೋಡಿಕೊಳ್ಳುವುದು ಹೆತ್ತವರು ಹಾಗೂ ಶಿಕ್ಷಕರ ಕರ್ತವ್ಯ. ಶಾಲೆಗಳಲ್ಲಿ ಶಿಕ್ಷಕರು ಇಂತಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಯಾವ ಕಾರ್ಯಕ್ರಮಗಳನ್ನು ಕೇಳುವುದು ಹಾಗೂ ನೋಡುವುದರಿಂದ ನಮ್ಮ ವಿಷಯಗಳಿಗೆ ಪೂರಕ ಎಂಬುದಾಗಿ ಮಾಹಿತಿ ನೀಡಬೇಕು.

ಪ್ರಜ್ಞಾ  ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next