Advertisement

ಮಂದಾರ್ತಿಯಲ್ಲಿ ಸಾಮೂಹಿಕ ವಿವಾಹ: 36 ಜೋಡಿ ಹಸೆಮಣೆಗೆ

11:30 AM May 04, 2017 | |

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಜರಗಿತು.

Advertisement

ರಾಜ್ಯದ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳ 36 ಜೋಡಿಗಳು ಹಸೆಮಣೆ ಏರಿದರು. ಅರ್ಚಕ ಶ್ರೀಪತಿ ಅಡಿಗ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು. ದೇವಸ್ಥಾನದ ವತಿಯಿಂದ ವಧುವಿಗೆ ಕರಿಮಣಿ ಹಾಗೂ ಧಾರೆ ಸೀರೆ ಮತ್ತು ವರನಿಗೆ ಶರ್ವಾನಿಯನ್ನು ಉಚಿತವಾಗಿ ನೀಡಲಾಯಿತು.

ಉಡುಪಿ ಜಿಲ್ಲೆಯ 23, ಶಿವಮೊಗ್ಗದ 8, ಚಿಕ್ಕಮಗಳೂರಿನ 4 ಮತ್ತು ರಾಮನಗರದ ಒಂದು ಜೋಡಿ ಈ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 15 ಜೋಡಿ ಪರಿಶಿಷ್ಟ ಪಂಗಡ, 9 ಜೋಡಿ ಪರಿಶಿಷ್ಟ ಜಾತಿ ಮತ್ತು 12 ಜೋಡಿ ಇತರ ವರ್ಗಕ್ಕೆ ಸೇರಿದವರು.

ಮದುವೆ ಕಾರ್ಯಕ್ರಮಕ್ಕೆ ವಧು ವರರ ಕಡೆಯಿಂದ ಆಗಮಿಸಿದವರಿಗೆ ದೇವಸ್ಥಾನದ ವತಿಯಿಂದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌.ಸಿ ಕೊಠಾರಗಸ್ತಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್‌. ಧನಂಜಯ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಪ್ರತಿ ವರ್ಷದಂತೆ ಸರಳವಾಗಿ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ವಧುವರರಿಗೆ ಸರಕಾರದ ವತಿಯಿಂದ ನೀಡಲಾಗುತ್ತಿರುವ 10,000 ರೂ. ಪ್ರೋತ್ಸಾಹ ಧನಕ್ಕೆ ನೋಂದಣಿ ಮಾಡಲಾಯಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next