Advertisement

ಆಗಸ್ಟ್‌ ಮೊದಲ ವಾರ ಚಾಮುಂಡಿಬೆಟ್ಟದಲ್ಲಿ ಸಾಮೂಹಿಕ ವಿವಾಹ

01:03 PM Jun 06, 2017 | Team Udayavani |

ಮೈಸೂರು: ಮದುವೆ ಹೆಸರಲ್ಲಿ ನಡೆಯುವ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸರಳ, ಸಾಮೂಹಿಕ ಮದುವೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಶುಭಾರಂಭವನ್ನು ಪುನಾರಂಭಿಸುತ್ತಿದೆ.

Advertisement

ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಜಿಲ್ಲಾಡಳಿತದ ವತಿಯಿಂದ 2015ರಲ್ಲಿ ಇಂತಹದೊಂದು ಪ್ರಯೋಗ ಮಾಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2015ರ ನವೆಂಬರ್‌ 8ರಂದು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಶುಭಾರಂಭ ಸರಳ ಸಾಮೂಹಿಕ ವಿವಾಹದಲ್ಲಿ 116 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಆದರೆ, ಕೆಲ ಕಾರಣಗಳಿಂದ 2016ರಲ್ಲಿ ಶುಭಾರಂಭ ನಡೆಯಲಿಲ್ಲ. ಶಿಖಾ ಅವರ ವರ್ಗಾವಣೆ ನಂತರ ಬಂದಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌ ಶುಭಾರಂಭವನ್ನು ಮುಂದುವರಿಸಲು ಉತ್ಸುಕತೆ ತೋರಿದ್ದು, ಈ ಸಂಬಂಧ ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಡಿ.ರಂದೀಪ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಗಸ್ಟ್‌ ಮೊದಲ ವಾರದಲ್ಲಿ (ಆ.2 ಅಥವಾ 9) ಈ ಬಾರಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿ 101 ಜೋಡಿಗಳಿಗೆ ಮದುವೆಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಸರಳ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವವರು ವರನಿಗೆ 21 ವರ್ಷ, ವಧುವಿಗೆ 18 ವರ್ಷಗಳಾಗಿರಬೇಕು. ಜೂನ್‌ 30ರೊಳಗೆ ಜಿಲ್ಲೆಯ ಆಯಾಯ ತಹಶೀಲ್ದಾರ್‌ಗಳ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಿ ಕೊಳ್ಳಬೇಕು.

Advertisement

ಮದುವೆ ಸಂದರ್ಭದಲ್ಲಿ ವಧುವಿಗೆ ರೇಷ್ಮೆ ಸೀರೆ, ತಾಳಿ, ಬೆಳ್ಳಿ ಕಾಲುಂಗರ, ವರನಿಗೆ ಪಂಚೆ, ಶರ್ಟ್‌, ಪೇಟಾ ನೀಡಲಾಗುವುದು. ಚಾಮುಂಡೇಶ್ವರಿ ದೇವಾಲಯದ ದಾಸೋಹ ಭವನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗುವುದು. ಪ್ರತಿ ಜೋಡಿಯ ಜತೆಗೆ 50 ಜನರು ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು.

ಮದುವೆಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಹಲವರು ಮುಂದೆ ಬಂದಿದ್ದು, ಚಾಮುಂಡೇಶ್ವರಿ ದೇವಸ್ಥಾನದ ನಿಧಿ ಸೇರಿ ಒಟ್ಟಾರೆ 25 ರಿಂದ 30 ಲಕ್ಷ ಖರ್ಚು ತಗುಲುಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಮೈಸೂರು ಜಿಲ್ಲಾಡಳಿತ ಮಾಡುತ್ತಿರುವ ಕಾರ್ಯಕ್ರಮವಾದ್ದರಿಂದ ಈ ಜಿಲ್ಲೆಯ ಜೋಡಿಗಳೇ ಭಾಗವಹಿಸಬೇಕು.

ಒಂದು ವೇಳೆ ಹುಡುಗ ಅಥವಾ ಹುಡುಗಿ ಬೇರೆ ಜಿಲ್ಲೆಯವರಾಗಿದ್ದರೂ ಯಾರಾದರೊಬ್ಬರು ಇದೇ ಜಿಲ್ಲೆಯವರಾಗಿದ್ದು, ವಾಸಸ್ಥಳ ಧೃಡೀಕರಣ ಪತ್ರ ಸಲ್ಲಿಸಬೇಕಾಗುತ್ತದೆ ಎಂದರು. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದವರು, ವಿಚ್ಛೇದಿತರು, ಅಂರ್ತಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲಾಗುವುದು.

ಜತೆಗೆ ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಯಾವುದೇ ಜೋಡಿ ಅರ್ಜಿ ಹಾಕಿದರೂ ಅವರ ಧಾರ್ಮಿಕ ಆಚರಣೆಯಂತೆಯೇ ಮದುವೆ ಮಾಡಿಕೊಡ ಲಾಗುವುದು. ಒಟ್ಟಾರೆ ಸಾಮೂಹಿಕ ವಿವಾಹದಲ್ಲಿ ಸುಮಾರು 5 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸ್ಥಳೀಯ ಶಾಸಕರಾದ ಜಿ.ಟಿ.ದೇವೇಗೌಡ ಸೇರಿದಂತೆ ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಚಾಮುಂಡಿಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್‌, ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್‌ ಯತಿರಾಜ್‌ ಸಂಪತ್‌ಕುಮಾರ್‌, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪ್ರಸಾದ್‌ ಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next