Advertisement

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

07:37 PM Apr 18, 2021 | Team Udayavani |

ಮಸ್ಕಿ : ರಾಜ್ಯದ ಗಮನ ಸೆಳೆದ ಮಸ್ಕಿ ಉಪಚುನಾವಣೆಯ ಮತದಾನ ಕೊನೆಗೂ ಮುಕ್ತಾಯಗೊಂಡಿದೆ. ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಫಲಿತಾಂಶವೊಂದೇ ಬಾಕಿ ಇದೆ!.

Advertisement

ಹಲವು ಅಡೆ-ತಡೆ, ಕಾನೂನು ತೊಡಕು, ಚುನಾವಣೆ ಘೋಷಣೆಯ ವಿಳಂಬದ ನಡುವೆಯೇ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಏ.17ಕ್ಕೆ ನಿಗದಿ ಮಾಡಲಾಗಿತ್ತು. ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್‌, ಕಾಂಗ್ರೆಸ್‌ನಿಂದ ಆರ್‌.ಬಸನಗೌಡ ತುರುವಿಹಾಳ ಸೇರಿ ಪಕ್ಷೇತರ ಅಭ್ಯರ್ಥಿಗಳನ್ನೊಳಗೊಂಡು ಒಟ್ಟು 8 ಜನ ಅಭ್ಯರ್ಥಿಗಳು ಚುನಾವಣೆ ಅಖಾಡದಲ್ಲಿದ್ದರು.

ರಂಗೇರಿತ್ತು ಅಖಾಡ: ಚುನಾವಣೆ ಘೋಷಣೆ ಬಳಿಕ ಮಸ್ಕಿ ಕ್ಷೇತ್ರದ ಅಖಾಡಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಹಲವು ಘಟಾನುಘಟಿಗಳ ಪ್ರವೇಶವೇ ಆಗಿತ್ತು. ಚುನಾವಣೆ ಕಣದಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಹಾಲಿ ಸರಕಾರದ ಡಜನ್‌ಗೂ ಹೆಚ್ಚು ಮಂತ್ರಿಗಳು ಬಂದು ಮಸ್ಕಿ ರಣಕಣವನ್ನು ರಂಗೇರುವಂತೆ ಮಾಡಿದ್ದರು.

ಮಸ್ಕಿ ಕ್ಷೇತ್ರದಲ್ಲಿನ ಅಬ್ಬರದ ಪ್ರಚಾರ ಇಡೀ ರಾಜ್ಯದ ಗಮನ ಸೆಳೆದಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳು ಮಸ್ಕಿಯನ್ನು ಪ್ರತಿಷ್ಠೆಯಾಗಿ ಪಡೆದು ಉಪಕದನಕ್ಕೆ ಇಳಿದಿದ್ದರು. ಒಂದು ಪಕ್ಷದ ಅಭ್ಯರ್ಥಿ ಪರ ಅನುಕಂಪದ ಅಲೆ ಇದ್ದರೆ, ಮತ್ತೂಂದು ಪಕ್ಷದ ಅಭ್ಯರ್ಥಿ ಬಗೆಗೆ ವಿರೋಧಿ  ಅಲೆ ಶುರುವಾಗಿತ್ತು. ಈ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳ ಸ್ಟಾರ್‌ ಕ್ಯಾಂಪೇನರ್‌ ತಮ್ಮ ಸ್ಟ್ಯಾಟರ್ಜಿಗಳನ್ನು ಇಲ್ಲಿ ಪ್ರಯೋಗ ಮಾಡಿದ್ದರು.

ವಿಶೇಷವಾಗಿ ಮಹಿಳಾ ಮತದಾರರನ್ನು ಟಾರ್ಗೆಟ್‌ ಮಾಡಿ ಮತಕೊಯ್ಲು ನಡೆಸಿದ್ದು ಈ ಬಾರಿಯ ಉಪಚುನಾವಣೆಯಲ್ಲಿ ವಿಶೇಷವೆನಿಸಿತ್ತು. ಈ ಮತಬೇಟೆ ನೆಪದಲ್ಲಿ ಹಣ, ಹೆಂಡದ ಹೊಳೆಯನ್ನೇ ಹರಿಸಿದ್ದಾಗಿತ್ತು. ಹಲವು ಕಡೆ ಪೊಲೀಸ್‌, ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಹಣಕ್ಕಿಂತ ಹೆಚ್ಚಾಗಿ ಮದ್ಯವೇ ಜಪ್ತಿಯಾಗಿತ್ತು. ಹೀಗಾಗಿ ಎಲ್ಲ ಕೋನಗಳಿಂದಲೂ ಬಹು ನಿರೀಕ್ಷೆ ಮೂಡಿಸಿದ್ದ ಈ ಉಪಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಈಗ ಫಲಿತಾಂಶವೊಂದೇ ಬಾಕಿ ಇದೆ.

Advertisement

ಬೆಟ್ಟಿಂಗ್‌ ಜೋರು: ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ಬೆಟ್ಟಿಂಗ್‌ ಜೋರಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಮುಖಂಡರು, ಕಾರ್ಯಕರ್ತರು ರೇಸ್‌ ಗೆ ಬಿದ್ದವರಂತೆ ಬಾಜಿ ಕಟ್ಟಲಾರಂಭಿಸಿದ್ದಾರೆ. ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಒಬ್ಬರು ಮತ್ತು ಬಿಜೆಪಿ ಅಭ್ಯರ್ಥಿ ಪರ ಇನ್ನೊಬ್ಬರು ತಲಾ 4 ಎಕರೆ ಜಮೀನು ಪಣಕ್ಕೆ ಇಟ್ಟಿದ್ದಾರೆ.

ಇನ್ನು ಕೋಳಬಾಳ, ಮುದ್ದಾಪುರ, ರಂಗಾಪೂರ, ಗುಡದೂರು ಗ್ರಾಮದಲ್ಲೂ ಬಾಜಿ ಕಟ್ಟಲಾಗಿದೆ. ಮಸ್ಕಿ ತಾಂಡ, ಮಸ್ಕಿ ಪಟ್ಟಣದಲ್ಲೂ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಬೆಟ್ಟಿಂಗ್‌ ಕಟ್ಟಿದ್ದು, ಚುನಾವಣೆ ಫಲಿತಾಂಶ ಕುತೂಹಲ ಮೂಡಿಸಿದೆ. ಮತದಾನ ಮುಗಿದ ಒಂದೇ ದಿನಕ್ಕೆ ಹೀಗೆ ಬೆಟ್ಟಿಂಗ್‌ ದಂಧೆ ಶುರುವಾಗಿದ್ದು, ಮೇ 2 ಫಲಿತಾಂಶ ದಿನವಾಗಿದ್ದು, ಅಲ್ಲಿಯವರೆಗೂ ಬೆಟ್ಟಿಂಗ್‌ ಹೆಚ್ಚಳವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next